ನರೇಂದ್ರ ಮೋದಿ ಗೋ ಬ್ಯಾಕ್ : ಕಾಂಗ್ರೆಸ್ ಕರೆ

Update: 2019-04-08 15:38 GMT

ಮೈಸೂರು,ಎ.8: ಮೈಸೂರು ನಗರವನ್ನು ಪ್ಯಾರಿಸ್ ಮಾಡುವುದಾಗಿ ಕಳೆದ ಬಾರಿ ಚುನಾವಣಾ ಪ್ರಚಾರದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಆಶ್ವಾಸನೆ ಸುಳ್ಳಾಗಿದ್ದು. ಇಲ್ಲಿನ ಜನತೆಯನ್ನು ಕುರಿತು ಮಾತನಾಡುವ ನೈತಿಕತೆ ಅವರಿಗಿಲ್ಲ ಆದ್ದರಿಂದ ಕಾಂಗ್ರೆಸಿಗರು 'ಗೋ ಬ್ಯಾಕ್ ಮೋದಿ'ಗೆ ಕರೆ ನೀಡಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ವಿಶ್ವ ಭೂಪಟದಲ್ಲಿ ಮೈಸೂರು ನಗರವನ್ನು “ಪ್ಯಾರಿಸ್”ನಂತೆ ಮಾಡುವೆ ಎಂದಿದ್ದ ಮೋದಿಯವರು ಇಗ ಮತ್ತೊಮ್ಮೆ ಜನರನ್ನು ಮುಠಾಳರನ್ನಾಗಿಸಲು ಬರುತ್ತಿದ್ದಾರೆ ಎಂದು ಆರೋಪಿಸಿದರು.

ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತಿದ್ದು ವಿರೋಧ ಪಕ್ಷದವರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದನ್ನು ಖಂಡಿಸಿದರು.

ಪಕ್ಷ ಕಟ್ಟಿದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ, ಅರುಣ್ ಶೌರಿ ಸೇರಿದಂತೆ ಹಲವಾರು ಹಿರಿಯರನ್ನು ಈಗಾಗಲೇ ಮೂಲೆ ಗುಂಪಾಗಿಸಿದ ಮೋದಿಯವರು, ಅದರಂತೆ ಮುಂದಿನ ಜೂನ್ ನಲ್ಲಿ ಯಡಿಯೂರಪ್ಪನವರನ್ನು ಮೂಲೆಗುಂಪಾಗಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಪಕ್ಷದ ಮುಖಂಡರಾದ ಮಂಜುಳ ಮಾನಸ ಮಾತನಾಡಿ ರಾಜ್ಯಸಭಾದಲ್ಲಿ ಒಪ್ಪಿಗೆ ಪಡೆದ ಮಹಿಳಾ ಮೀಸಲಾತಿಯನ್ನು ಅನುಷ್ಠಾನಗೊಳಿಸದ ಮೋದಿಯೊಬ್ಬ ಮಹಿಳಾ ವಿರೋಧಿ. ಕಳೆದ ಚುನಾವಣೆಯಲ್ಲಿ ಸುಳ್ಳು ಭರವಸೆ ನೀಡಿ ಜನರನ್ನು ವಂಚಿಸಿದ್ದು ಅವರಿಗೆ ಮತ ಕೇಳುವ ಹಕ್ಕಿಲ್ಲ ಎಂದು ಕಿಡಿಕಾರಿದರು.

ನಗರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿ ಪಕ್ಷದ ಅಭ್ಯರ್ಥಿ ವಿಜಯಶಂಕರ ಗೆಲುವಿಗೆ ಶ್ರಮಿಸುತ್ತಿದ್ದು ತಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್.ಎ.ವೆಂಕಟೇಶ್, ಅರವಿಂದ್, ರಾಜೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News