ಲೋಕಸಭಾ ಚುನಾವಣೆ : ರಾಜ್ಯದ ಅಂತಿಮ ಕಣದಲ್ಲಿ 487 ಅಭ್ಯರ್ಥಿಗಳು

Update: 2019-04-08 15:49 GMT

ಬೆಂಗಳೂರು, ಎ.8: ಲೋಕಸಭಾ ಚುನಾವಣೆಯ ಎರಡನೇ ಹಂತದ ನಾಮಪತ್ರ ವಾಪಸ್ಸು ಪಡೆಯಲು ಸೋಮವಾರ ಮುಗಿದಿದ್ದು, ಇದೀಗ ಎರಡೂ ಹಂತದಲ್ಲಿ ಅಂತಿಮವಾಗಿ ಚುನಾವಣಾ ಕಣದಲ್ಲಿ 478 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಸೋಮವಾರ ನಗರದ ವಾರ್ತಾ ಇಲಾಖೆಯ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಮೊದಲ ಹಂತದಲ್ಲಿ 241 ಮಂದಿ ಅಖಾಡದಲ್ಲಿದ್ದರೆ, ಎರಡನೇ ಹಂತಕ್ಕೆ ನಡೆಯುವ ಚುನಾವಣೆಯಲ್ಲಿ 237 ಮಂದಿ ಕಣದಲ್ಲಿದ್ದಾರೆ ಎಂದು ಹೇಳಿದರು. ಇದೇ ವೇಳೆ ಚುನಾವಣೆಗೆ ಸ್ಪರ್ಧಿಸಿರುವ ಒಟ್ಟು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದರು.

ಎರಡನೇ ಹಂತಕ್ಕೆ ನಾಮಪತ್ರ ಪಡೆಯಲು ಕೊನೆಯ ದಿನವಾಗಿದ್ದ ಸೋಮವಾರ, ಒಟ್ಟಾರೆಯಾಗಿ 45 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದಾರೆ. 311 ಅಭ್ಯರ್ಥಿಗಳು 457 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದರು. ಅದರಲ್ಲಿ 297 ಪುರುಷರು ಮತ್ತು 14 ಮಹಿಳೆಯರು ನಾಮಪತ್ರಗಳನ್ನು ಸಲ್ಲಿಸಿದ್ದರು. ಇದರಲ್ಲಿ 29 ಉಮೇದುವಾರಿಕೆಗಳು ತಿರಸ್ಕೃತಗೊಂಡಿದ್ದು, 282 ಅಭ್ಯರ್ಥಿಗಳ ನಾಮಪತ್ರಗಳನ್ನು ಸ್ವೀಕೃತಗೊಳಿಸಲಾಯಿತು. 45 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದಾರೆ. ಅಂತಿಮವಾಗಿ ಎರಡನೇ ಹಂತದಲ್ಲಿ 237 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದು ಹೇಳಿದರು.

ಮೊದಲ ಹಂತದಲ್ಲಿ ಚುನಾವಣೆಯಲ್ಲಿ 241 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಎರಡನೇ ಹಂತದಲ್ಲಿ 237 ಮಂದಿ ಅಖಾಡದಲ್ಲಿದ್ದಾರೆ. ಮೊದಲ ಹಂತದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹೆಚ್ಚಿನ ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 35 ಮಂದಿ ಸ್ಪರ್ಧಿಸಿದ್ದಾರೆ. ಎರಡನೇ ಹಂತದಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ, ಅಂದರೆ 57 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅತ್ಯಧಿಕ ಅಭ್ಯರ್ಥಿಗಳು ಬೆಳಗಾವಿ ಕ್ಷೇತ್ರದಲ್ಲಿದ್ದು, ಅತಿ ಕಡಿಮೆ ಅಭ್ಯರ್ಥಿಗಳು ರಾಯಚೂರಿನಲ್ಲಿ 5 ಮತ್ತು ಹಾಸನದಲ್ಲಿ 6 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿರುವ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 4 ಬ್ಯಾಲೆಟ್ ಯೂನಿಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ. 9 ಕ್ಷೇತ್ರದಲ್ಲಿ 2 ಬ್ಯಾಲೆಟ್ ಯೂನಿಟ್ ಬಳಕೆ ಮಾಡಲಾಗುವುದು. ಇನ್ನುಳಿದ ಕ್ಷೇತ್ರದಲ್ಲಿ ಒಂದೊಂದು ಬ್ಯಾಲೆಟ್ ಯೂನಿಟ್ ಬಳಕೆ ಮಾಡಲಾಗುತ್ತದೆ. ಒಂದು ಬ್ಯಾಲೆಟ್ ಯೂನಿಟ್‌ನಲ್ಲಿ 16 ಅಭ್ಯರ್ಥಿಗಳ ಹೆಸರು ನಮೂದಾಗಿರುತ್ತದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 5 ಕೋಟಿ ಜನತೆಗೆ ಪ್ರಾತ್ಯಕ್ಷಿಕೆ ನೀಡಲಾಗಿದೆ. 2018ರ ವಿಧಾನಸಭೆ ಚುನಾವಣೆ ವೇಳೆ ಮೂರುವರೆ ಕೋಟಿ ಜನರಿಗೆ ಪ್ರಾತ್ಯಕ್ಷಿಕೆ ನೀಡಲಾಗಿತ್ತು ಎಂದು ವಿವರಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಗುಪ್ತವಾಗಿ ನಡೆಯುವ ಕಾರಣದಿಂದ ಮತಗಟ್ಟೆಯಲ್ಲಿ ಮತದಾರರ ಮೊಬೈಲ್ ಫೋನ್ ಬಳಕೆ ಮಾಡಲು ಅವಕಾಶವಿಲ್ಲ. ಹಾಗೂ ಯಾವುದೇ ಕಾರಣಕ್ಕೂ ಮತದಾನ ಮಾಡುವ ಸಂದರ್ಭದಲ್ಲಿ ಸೆಲ್ಪಿ ತೆಗೆಯಲು ಅಥವಾ ಫೋಟೋ ತೆಗೆಯಲು ಅವಕಾಶವಿಲ್ಲ. ಹೀಗೆ ಮಾಡುವುದು ಕಾನೂನು ಬಾಹಿರವಾಗಿದ್ದು, ಈ ಬಗ್ಗೆ ಮತಗಟ್ಟೆ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ.
-ಸಂಜೀವ್ ಕುಮಾರ್, ಮುಖ್ಯ ಚುನಾವಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News