ತಾಯಿ ಸುಮಲತಾ ಪರ ಮಗ ಅಭಿಷೇಕ್ ಬಿರುಸಿನ ಪ್ರಚಾರ
ಮಂಡ್ಯ: ನಗರದ ವಿವಿಧ ವಾರ್ಡ್‍ಗಳಲ್ಲಿ ಸೋಮವಾರ ಲೋಕಸಭಾ ಚುನಾವಣಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಅಭಿಷೇಕ್ ಅಂಬರೀಶ್ ಅವರು ಅಪಾರ ಬೆಂಬಲಿಗರೊಂದಿಗೆ ಬಿರುಸಿನ ಪ್ರಚಾರ ನಡೆಸಿದರು.
ನಗರದ ಬೀಡಿಕಾರ್ಮಿಕರ ಕಾಲೋನಿಗೆ ಭೇಟಿ ನೀಡಿದ ನಟ ಅಭಿಷೇಕ್ ಅಂಬರೀಶ್ ಮಾತನಾಡಿ, ಡಾ. ಅಂಬರೀಶ್ ಅವರನ್ನು ಬೆಳೆಸಿದ ನಿಮ್ಮ ಪ್ರೀತಿಗೆ ನಾವು ಚಿರಋಣಿ, ಅಮ್ಮ ಸುಮಲತಾ ಅವರು ಮಂಡ್ಯ ಕ್ಷೇತ್ರದ ಜನರ ಸೇವೆ ಮಾಡಿ ನಿಮ್ಮ ಋಣವನ್ನು ಕಡಿಮೆ ಮಾಡಿಕೊಳ್ಳಲು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂದು ಮನವಿ ಮಾಡಿದರು.
ನಾವು ಯಾರನ್ನು ಟೀಕಿಸುವುದಿಲ್ಲ, ನಮ್ಮನ್ನು ಟೀಕಿಸಿ, ಜಾತಿ ಬಗ್ಗೆ ಮಾತನಾಡಿ ಮನಸಿಗೆ ನೋವು ತರುವ ಜಾತಿವಾದಿಗಳಿಗೆ ನಮ್ಮನ್ನು ಗೆಲ್ಲಿಸುವ ಮೂಲಕ ಉತ್ತರ ನೀಡಬೇಕಿದೆ ಎಂದು ಕೋರಿಕೊಂಡರು.
ಕ್ಷೇತ್ರದ ಅಭಿವೃದ್ದಿಗೆ ಸುಮಲತಾ ಅಂಬರೀಶ್ ಅವರನ್ನು ನೀವು ಗೆಲ್ಲಿಸಿ, ಆಶೀರ್ವಾದ ಮಾಡಿ ಸಂಸತ್‍ಗೆ ಕಳಿಸಿಕೊಡಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್, ಮುಖಂಡರಾದ ಶಾದೀಕ್‍ಪಾಷಾ, ನಾಜೂಅಮಾದ್, ತಾಸೀಂ ಅಹಮದ್, ಸಯ್ಯದ್‍ಮುನ್ನ ಸೈಕಲ್ ಶಾಪ್, ಆಟೋ ವಾಯಹರ್ ಅಹಮದ್ ಮತ್ತಿತರರಿದ್ದರು.