ಮಲೆನಾಡಿನಲ್ಲಿ ಮುಂದುವರಿದ ಭಾರೀ ಮಳೆ: ಧರೆಗುರುಳಿದ ಮರ, ವಿದ್ಯುತ್ ಕಂಬಗಳು

Update: 2019-04-09 14:16 GMT

ಚಿಕ್ಕಮಗಳೂರು, ಎ.7: ಕಾಫಿನಾಡಿನಲ್ಲಿ ಅಕಾಲಿಕ ಮಳೆ ಮುಂದುವರಿದಿದ್ದು, ಸೋಮವಾರ, ಹಾಗೂ ಮಂಗಳವಾರ ಮಲೆನಾಡಿನಾದ್ಯಂತ ಹಲವೆಡೆ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದೆ. 

ಸೋಮವಾರ ಸಂಜೆ ವೇಳೆ ಮೂಡಿಗೆರೆ ತಾಲೂಕಿನಾದ್ಯಂತ ಸುರಿದ ಗಾಳಿ ಸಹಿತ ಬಾರೀ ಮಳೆಯಿಂದಾಗಿ ಪಟ್ಟಣದ ಛತ್ರ ಮೈದಾನದಲ್ಲಿರುವ ರಾಜು ಎಂಬವರ ಮನೆಯ ಮೇಲ್ಚಾವಣಿ ಹಾರಿ ಹೋಗಿದ್ದು, ಮನೆಗೆ ಭಾಗಶಃ ಹಾನಿಯಾಗಿದ್ದre, ತಾಲೂಕಿನ ಹೆಸಗಲ್ ಗ್ರಾಮದ ನಿವಾಸಿ ಸುರೇಶ್ ಎಂಬವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯ ಗೋಡೆಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಜಿಲ್ಲೆಯ ಮಲೆನಾಡು ಭಾಗದ ಅಲ್ಲಲ್ಲಿ ಕಳೆದೊಂದು ವಾರದಿಂದ ಸಂಜೆ ವೇಳೆ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದ್ದು, ಅಕಾಲಿಕ ಮಳೆಯಿಂದಾಗಿ ಜಿಲ್ಲೆಯ ಕಾಫಿ, ಅಡಿಕೆ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ. ರವಿವಾರ ಸಂಜೆ ವೇಳೆಯಲ್ಲೂ ಚಿಕ್ಕಮಗಳೂರು ತಾಲೂಕು ಸೇರಿದಂತೆ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯ ಹಲವೆಡೆ ಧಾರಾಕಾರ ಮಳೆಯಾದ ಬಗ್ಗೆ ವರದಿಯಾಗಿದೆ. ತಾಲೂಕಿನ ಕಿರುಗುಂದ ಗ್ರಾಮದಲ್ಲಿ ಭಾರೀ ಮಳೆ, ಗಾಳಿಗೆ ಮರಗಳು ಸೇರಿದಂತೆ ಕಾಫಿ ತೋಟದ ಮಧ್ಯೆ ಹಾದು ಹೋಗಿದ್ದ ವಿದ್ಯುತ್ ಕಂಬಗಳು ಧರೆಗುರುಳಿವೆ.

ಚಿಕ್ಕಮಗಳೂರು ತಾಲೂಕಿನಾದ್ಯಂತ ರವಿವಾರ, ಸೋಮವಾರ ಮಧ್ಯಾಹ್ನದ ವೇಳೆಗೆ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಮಳೆಯಾಗಿರಲಿಲ್ಲ. ಆದರೆ ಮಂಗಳವಾರ ಮಧ್ಯಾಹ್ನ ನಗರದಲ್ಲಿ ತುಂತುರು ಮಳೆ ಸುರಿಯಿತು. ನಂತರ ಸಂಜೆ ವೇಳೆ ಧಾರಾಕಾರ ಮಳೆ ಸುರಿಯಿತು. ಇನ್ನು ತಾಲೂಕಿನ, ಮೂಗುತಿಹಳ್ಳಿ, ದಂಬದಹಳ್ಳಿ, ಕೈಮರ, ಹೊಪೇಟೆ, ವಸ್ತಾರೆ, ಆಲ್ದೂರು, ತೋರಣಮಾವು ಮತ್ತಿತರ ಮಲೆನಾಡು ಭಾಗದಲ್ಲಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದ್ದು, ಕೆಲವೆಡೆ ಮರಗಳು ರಸ್ತೆಗುರುಳಿದ ಬಗ್ಗೆ ವರದಿಯಾಗಿದೆ.

ಇನ್ನು ಮೂಡಿಗೆರೆ ತಾಲೂಕಿನ ಕಳಸ, ಸಂಸೆ, ಕುದುರೆಮುಖ ಬಾಳೆಹೊಳೆ, ಹಳುವಳ್ಳಿ ಕೊಟ್ಟಿಗೆಹಾರ, ಬಾಳೂರು ಮತ್ತಿತರ ಕಡೆಗಳಲ್ಲಿ ಮಳೆಸುರಿದಿದ್ದರೆ, ಕೊಪ್ಪ, ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು, ಮಾಗುಂಡಿ, ಜಯಪುರ, ಹೇರೂರು ಹಾಗೂ ಶೃಂಗೇರಿ ತಾಲೂಕಿನ ಕಿಗ್ಗಾ, ನೆಮ್ಮಾರು, ಕೆರೆಕಟ್ಟೆ ಮತ್ತಿತರ ಕಡೆಗಳಲ್ಲಿ ಧಾರಾಕಾರ ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ.

ಜಿಲ್ಲೆಯ ಕಡೂರು ತಾಲೂಕಿನಲ್ಲಿ ಮಳೆಯಾದ ಬಗ್ಗೆ ವರದಿಯಾಗಿಲ್ಲವಾದರೂ ತರೀಕೆರೆ ತಾಲೂಕಿನ ಕೆಲವೆಡೆ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ. ಕಳೆದೊಂದು ವಾರದಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ರೈತರು ಹಾಗೂ ಕಾಫಿ, ಅಡಿಕೆ ಬೆಳೆಗಾರರ ಮೊಗದಲ್ಲಿ ಸಂತಸ ಮನೆ ಮಾಡಿದೆ.

ವಿದ್ಯುತ್‍ಗೆ ಸ್ಪರ್ಶ: ಓರ್ವ ಬಲಿ

ಜಿಲ್ಲೆಯ ಜಯಪುರ ಪಟ್ಟಣ ಸಮೀಪದಲ್ಲಿ ವಿದ್ಯುತ್ ಸ್ಪರ್ಶದಿಂದಾಗಿ ಸೋಮವಾರ ಸಂಜೆ ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ತಡವಾಗಿ ವರದಿಯಾಗಿದೆ.

ಕೊಪ್ಪ ತಾಲೂಕಿನ ಲೋಕನಾಥಪುರ ಗ್ರಾಮ ಸಮೀಪದ ಹೆದ್ಸೆ ಗ್ರಾಮದ ವಾಸುದೇವಾಡಿಗ(60) ಮೃತ ವ್ಯಕ್ತಿ ಎಂದು ತಿಳಿದು ಬಂದಿದ್ದು, ಇವರು ಸೋಮವಾರ ಸಂಜೆ ಮನೆ ಸಮೀಪದಲ್ಲಿದ್ದ ವಿದ್ಯುತ್ ಕಂಬದ ಪಕ್ಕದಲ್ಲೇ ಇದ್ದ ಮರಕ್ಕೆ ಹತ್ತಿ ಮರದ ಗೆಲ್ಲುಗಳನ್ನು ಕಡಿಯುತ್ತಿದ್ದಾಗ ಮರ ಹತ್ತಲು ಬಳಸಿದ ಕಬ್ಬಿಣದ ಏಣಿ ವಿದ್ಯುತ್ ಕಂಬದ ತಂತಿಗಳಿಗೆ ತಾಗಿ ವಿದ್ಯುತ್ ಹರಿದ ಪರಿಣಾಮ ಮರದಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ದಾರಿ ಮಧ್ಯೆ ಅವರು ಮೃತಪಟ್ಟಿದ್ದರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News