×
Ad

ಬಿಜೆಪಿ ಪ್ರಣಾಳಿಕೆ ‘ಹಳೆ ಮದ್ಯ ಹೊಸ ಬಾಟಲಿ’: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2019-04-09 20:23 IST

ಬೆಂಗಳೂರು, ಎ. 9: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ‘ಹಳೆ ಮದ್ಯ ಹೊಸ ಬಾಟಲಿ’ ಎಂಬಂತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಲೇವಡಿ ಮಾಡಿದ್ದಾರೆ.

ಮಂಗಳವಾರ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮೂಡಲಪಾಳ್ಯದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಪರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಮಮಂದಿರ ಕಟ್ಟುತ್ತೇನೆ ಎಂಬುದು ಬಿಜೆಪಿ ಪ್ರಣಾಳಿಕೆ ಪ್ರಮುಖ ವಿಚಾರ. 1992ರಿಂದ 27 ವರ್ಷಗಳಾಗಿವೆ. ವಾಜಪೇಯಿ ಪ್ರಧಾನಿಯಾಗಿದ್ದರು. ಕಳೆದ ಐದು ವರ್ಷ ಮೋದಿ ಪ್ರಧಾನಿಯಾಗಿದ್ದರು. ಇಟ್ಟಿಗೆ ಸಂಗ್ರಹಿಸಿದರೇ ಹೊರತು ಮಂದಿರ ನಿಮಾರ್ಣ ಮಾಡಲಿಲ್ಲ. ಕನಿಷ್ಟ ಪಕ್ಷ ಸಂಗ್ರಹಿಸಿದ ಹಣಕಾಸಿನ ಲೆಕ್ಕವನ್ನು ದೇಶದ ಜನತೆಗೆ ನೀಡಲಿಲ್ಲ ಎಂದು ಟೀಕಿಸಿದರು.

ದೇಶದ ಜನರನ್ನು ಬಿಜೆಪಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಮೀಸಲಾತಿ ರದ್ದು ಮಾಡುವ ಪ್ರಯತ್ನವೂ ನಡೆದಿದೆ. ಬಡವರಿಗೆ ಮೀಸಲಾತಿ ಕೊಡುವುದು ಬೇಡವೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ದಲಿತರು-ಹಿಂದುಳಿದವರಿಗೆ ಮೀಸಲಾತಿ ಬೇಡವೇ? ಎಂದು ಲೇವಡಿ ಮಾಡಿದರು.

ಸಂವಿಧಾನದಲ್ಲಿ ಯಾವುದೇ ರೀತಿಯ ಮೌಢ್ಯಗಳಿಗೆ ಅವಕಾಶವಿಲ್ಲ ಎಂದು ಆರೆಸೆಸ್ಸ್ ಮುಖಂಡರು ಹೇಳುತ್ತಿದ್ದಾರೆ. ಅಂದರೆ ಡಾ.ಬಿ.ಆರ್.ಅಂಬೇಡ್ಕರ್ ರೂಪಿಸಿದ ಸಂವಿಧಾನ ಬಿಜೆಪಿಯವರಿಗೆ ಬೇಡವೇ ಎಂದ ಸಿದ್ದರಾಮಯ್ಯ, ಸಂವಿಧಾನ ರಕ್ಷಣೆಯಾಗಬೇಕಾದರೆ ಎಲ್ಲರೂ ಎಚ್ಚರಗೊಳ್ಳಬೇಕಿದೆ ಎಂದು ಸಲಹೆ ಮಾಡಿದರು.

ಮೋದಿಯವರ ಮನ್‌ಕೀ ಬಾತ್ ನಿಂದ ದೇಶದ ಜನರ ಹೊಟ್ಟೆ ತುಂಬುವುದಿಲ್ಲ. ಶೇ.20ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಶೇ.60ರಷ್ಟು ರೈತರು ಇನ್ನೂ ಸಮಸ್ಯೆಗಳ ಸುಳಿಯಲ್ಲಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಪುಲ್ವಾಮ ಘಟನೆಯನ್ನು ಮುಂದಿಟ್ಟುಕೊಂಡ ಬಿಜೆಪಿ ಲಾಭಮಾಡಿಕೊಳ್ಳಲು ಮುಂದಾಗಿದೆ. ಮೋದಿ ಮೋದಿ ಎಂದು ಬೊಬ್ಬಿಡುವ ಯುವಕರು ಮೊದಲು ಇದೆಲ್ಲವನ್ನು ಅರ್ಥ ಮಾಡಿಕೊಳ್ಳಬೇಕು. ಆಮೇಲೆ ಏನು ಬೇಕಾದರೂ ಹೇಳಲಿ ಎಂದು ಸಿದ್ದರಾಮಯ್ಯ ಇದೇ ವೇಳೆ ಯುವಕರಿಗೆ ಕರೆ ನೀಡಿದರು.

ದೇಶದ ದಲಿತ, ಹಿಂದುಳಿವರು, ಮಹಿಳೆಯರು, ರೈತರು ಸೇರಿದಂತೆ ಎಲ್ಲ ವರ್ಗದ ಜನರ ರಕ್ಷಣೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನ ರಕ್ಷಣೆಗಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಅವರನ್ನು ಬೆಂಬಲಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News