ಜೆಡಿಎಸ್ ಮೇಲೆ ನಂಬಿಕೆ ಇಲ್ಲದೆ ರಾಹುಲ್ ಗಾಂಧಿ ಕೇರಳದಿಂದ ಸ್ಪರ್ಧೆ: ಮೈಸೂರಿನಲ್ಲಿ ಪ್ರಧಾನಿ ಮೋದಿ

Update: 2019-04-09 15:07 GMT

ಮೈಸೂರು,ಎ.9: ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಲ್ಲಿ ಸಮನ್ವಯತೆ ಇಲ್ಲ. ಹಾಗಾಗಿ ಜೆಡಿಎಸ್ ಮೇಲೆ ನಂಬಿಕೆ ಇಲ್ಲದೇ ರಾಹುಲ್ ಗಾಂಧಿ ಕೇರಳದ ವಯನಾಡಿನಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಸಂಕಲ್ಪ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ ಅವರು ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಲು ಸೋನಿಯಾ ಮೇಡಂ ಮನೆಗೆ ಹೋಗಿ ರಾಜಕೀಯ ಮಾಡುತ್ತಾರೆ. ಆದರೆ ಅವರ ಮಗ ಕರ್ನಾಟಕದಲ್ಲಿ ಸ್ಪರ್ಧೆ ಮಾಡಬೇಕು ಎಂದರೆ ಉತ್ತಮ ವಾತಾವರಣ ನಿರ್ಮಾಣವಾಗುವುದಿಲ್ಲ, ಜೊತೆಗೆ ಜೆಡಿಎಸ್ ನವರ ಮೇಲೆ ನಂಬಿಕೆಯೇ ಇಲ್ಲ. ಹಾಗಾಗಿ ರಾಹುಲ್ ವಯನಾಡಿನಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಕಾಂಗ್ರೆಸ್ ರಾಜ್ಯದ ಮುಖ್ಯಮಂತ್ರಿಯನ್ನು ಬ್ಲಾಕ್ ಮೇಲೆ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷ 70 ವರ್ಷಗಳಲ್ಲಿ ಮಾಡಲಾಗದ್ದನ್ನು ನಾನು ಐದು ವರ್ಷಗಳಲ್ಲಿ ಮಾಡಿದ್ದೇನೆ. ಹಾಗಾಗಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ಯತ್ನಿಸುತ್ತಿದ್ದಾರೆ. ನಿಮ್ಮ ಆಶೀರ್ವಾದ ಬೆಂಬಲ ಇರುವವರೆಗೆ ನನ್ನನ್ನು ಯಾರೂ ಕೆಳಗಿಳಿಸಲು ಸಾಧ್ಯವಿಲ್ಲ ಎಂದರು.

ನನ್ನ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲ, ಕಾಂಗ್ರೆಸ್ ಅವಧಿಯಲ್ಲಿ 2ಜಿ ಹಗರಣ ಸೇರಿದಂತೆ ಹಲವು ಭ್ರಷ್ಟಾಚಾರಗಳು ನಡೆದಿವೆ. ಸಾಮಾನ್ಯ ವ್ಯಕ್ತಿಗೂ ಕೈಗೆಟುಕುವ ದರದಲ್ಲಿ ಸ್ಮಾರ್ಟ್ ಫೋನ್‍ಗಳು ದೊರೆಯುವಂತೆ ಮಾಡಲಾಗಿದೆ. ಅತೀ ಕಡಿಮೆ ಹಣದಲ್ಲಿ ಡಾಟಾ ಸೇವೆ ಒದಗಿಸುವಂತೆ ಮಾಡಲಾಗಿದೆ. 2 ಲಕ್ಷದ ವರೆಗೆ ಇದ್ದ ತೆರಿಗೆ ವಿನಾಯಿತಿಯನ್ನು 5 ಲಕ್ಷದ ವರೆಗೆ ಹೆಚ್ಚಿಸಿದ್ದೇನೆ. ಮೈಸೂರಿಗೆ ದೇಶದಲ್ಲೇ ಮೊದಲ ಪಾಸ್‍ಪೋರ್ಟ್ ಸೇವಾ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ, ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್, ಬಿಜೆಪಿ ಉಸ್ತುವಾರಿ ಕಿರಣ್ ಮಹೇಶ್ವರಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಹರ್ಷವರ್ಧನ್, ನಿರಂಜನಕುಮಾರ್, ಮಾಜಿ ಸಚಿವ ಬಿ.ಸೋಮಶೇಖರ್, ಬಿಜೆಪಿ ಮುಖಂಡರಾದ ಕೋಟೆ ಶಿವಣ್ಣ, ಡಾ.ಮಂಜುನಾಥ್, ವಿ.ಫಣೀಶ್, ಪ್ರೊ.ಮಲ್ಲಿಕಾರ್ಜುನಪ್ಪ, ಸಿದ್ದರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಮ್ಮ ಭಾಷಣಕ್ಕೂ ಮೊದಲು ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ ಮೈಸೂರು, ಚಾಮರಾಜನಗರ, ಮಂಡ್ಯ, ಮತ್ತು ಹಾಸನದ ಆಧರಣೀಯ ಬಂದುಗಳಿಗೆ ನಿಮ್ಮ ಚೌಕೀದಾರನ ನಮಸ್ಕಾರಗಳು ಎಂದು ಹೇಳಿದರು. ಮೈಸೂರಿನ ಅಧಿದೇವತೆ ತಾಯಿ ಚಾಮುಂಡಿ ನಾಡಿನಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದೇನೆ. ಚಾಮುಂಡೇಶ್ವರಿ ತಾಯಿಗೆ ನನ್ನ ನಮಸ್ಕಾರಗಳು, ಹಾಗೇ ಸರ್.ಎಂ.ವಿಶ್ವೇಶ್ವರಯ್ಯ ಅವರಿಗೂ ನನ್ನ ವಂದನೆಗಳು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News