ಬಿಜೆಪಿ ಪ್ರಣಾಳಿಕೆ ಸುಳ್ಳುಗಳ ಸರಮಾಲೆ: ಮಾಜಿ ಸಚಿವ ಎಚ್.ಕೆ.ಪಾಟೀಲ್

Update: 2019-04-09 15:25 GMT

ಬಾಗಲಕೋಟೆ, ಎ.9: ಬಿಜೆಪಿ ಹೊರತಂದಿರುವ ಪ್ರಣಾಳಿಕೆ ಸುಳ್ಳುಗಳ ಸರಮಾಲೆ. ನಿವೃತ್ತಿ ವೇತನ, ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ರದ್ದು, ರಾಮಮಂದಿರ ನಿರ್ಮಾಣದಂತಹ ಪ್ರಸ್ತಾವನೆಗಳು ಚುನಾವಣೆ ಬಂದಾಗ ಬಿಜೆಪಿಗೆ ನೆನಪಾಗುತ್ತವೆ. ಆದರೆ, ಕಳೆದ 5 ವರ್ಷದಲ್ಲಿ ಇದರ ನೆನಪು ಇರಲಿಲ್ಲ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಟೀಕಿಸಿದ್ದಾರೆ.

ಮಂಗಳವಾರ ಜಿಲ್ಲೆಯ ಬೀಳಗಿಯಲ್ಲಿ ಮಾತನಾಡಿದ ಅವರು, ಮೋದಿ ಒಬ್ಬ ವಚನಭ್ರಷ್ಟ. ಕಳೆದ ಬಾರಿ ಚುನಾವಣೆಯಲ್ಲಿ ಕಪ್ಪುಹಣ ತಂದು ದೇಶದ ಪ್ರತಿಯೊಬ್ಬ ನಾಗರಿಕರ ಖಾತೆಗೆ 15 ಲಕ್ಷ ರೂ.ಹಾಕುವ ಭರವಸೆ ನೀಡಿದ್ದ ಮೋದಿ ಕೊನೆ ಪಕ್ಷ 15 ಸಾವಿರ ರೂ.ಗಳನ್ನಾದರೂ ಖಾತೆಗೆ ಹಾಕಿಲ್ಲ. ಇಂತಹ ವಚನಭ್ರಷ್ಟ ಮೋದಿಯ ಪರವಾಗಿ ಮತಯಾಚಿಸುವ ಹಕ್ಕು ಬಿಜೆಪಿಯವರಿಗಿಲ್ಲ ಎಂದರು.

ಬಿಜೆಪಿ ಪ್ರಣಾಳಿಕೆಯೆ ಒಂದು ಸುಳ್ಳುಗಳ ಸರಮಾಲೆ. 5 ವರ್ಷದ ಆಡಳಿತದಲ್ಲಿ ಪ್ರಸ್ತಾವನೆಗೆ ಬರದ ರಾಮಮಂದಿರ ವಿಚಾರವನ್ನ ಚುನಾವಣೆ ಹತ್ತಿರ ಬರುತ್ತಿದ್ದಂತೆ ಶೀಘ್ರ ಇತ್ಯರ್ಥ ಪಡಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಇನ್ನು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ 370ನೆ ವಿಧಿಯನ್ನು ಬದಲಿಸುವ ಮಾತನ್ನು ಚುನಾವಣಾ ಸಂದರ್ಭದಲ್ಲಿ ಆಡುತ್ತಿದ್ದಾರೆ. ಆದರೆ ಅದಾನಿ-ಅಂಬಾನಿಯಂತಹ ಉದ್ಯಮಿಗಳಿಗೆ ಅನುಕೂಲವಾಗುವ ಕಾನೂನು ಜಾರಿ ಮಾಡುವ ವೇಳೆ ಇದೆಲ್ಲ ನೆನಪಿಗೆ ಬರಲಿಲ್ಲ ಎಂದು ಅವರು ಲೇವಡಿ ಮಾಡಿದರು.

ಮೋದಿ ಆಡಳಿತದಲ್ಲಿ ಅತಿಹೆಚ್ಚು ತೊಂದರೆ ಅನುಭವಿಸಿದವರು ರೈತಾಪಿ ವರ್ಗ. ಕೃಷಿಕರ ಆದಾಯ ದುಪ್ಪಟ್ಟು ಮಾಡುವ ಭರವಸೆ ನೀಡಿದ್ದ ಮೋದಿ ಸರಕಾರದಲ್ಲಿ ಅವರ ಆದಾಯ ಅರ್ಧಕ್ಕೆ ಇಳಿದಿದ್ದು ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬಿಜೆಪಿ ತೋರಿಸಿದ್ದ ಅಚ್ಛೇದಿನ್ ಕನಸು ನೋಟು ರದ್ದತಿ ನಂತರ ನುಚ್ಚುನೂರಾಯಿತು ಎಂದು ವಾಗ್ದಾಳಿ ನಡೆಸಿದರು.

ರೈತಪರ ಮತ್ತು ಜನಪರ ಅಂಶಗಳಿಗೆ ಕಾಂಗ್ರೆಸ್ ಪಕ್ಷ ಆದ್ಯತೆ ನೀಡಿದೆ. ರೈತರನ್ನ ಋಣಮುಕ್ತಗೊಳಿಸಲು ಸಾಲಮನ್ನಾ ಮತ್ತು ಬಡಜನರ ಜೀವನದಲ್ಲಿ ನೆಮ್ಮದಿ ಮೂಡಿಸಲು ‘ನ್ಯಾಯ್’ ಯೋಜನೆಗಳಿಗೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಪಾಟೀಲ್ ವಿವರಿಸಿದರು.

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವೀಣಾ ಕಾಶ್ಯಪ್ಪನವರ್, ಮುಖಂಡರಾದ ಬಸವಪ್ರಭು ಸರ್ದಾರ್ ಗೌಡ, ಅಜಯ್ ಕುಮಾರ್ ಸರನಾಯಕ್, ಮಾಜಿ ಸಚಿವ ಎಸ್.ಆರ್.ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News