ಅಂಬಿ ಕುಟುಂಬದ ವಿರುದ್ಧ ಕೆಟ್ಟದಾಗಿ ಹೇಳಲು ಆಮಿಷ: ಸುಮಲತಾ ಆರೋಪ
ಮಂಡ್ಯ, ಎ.9: ರಣ ಕಣವಾಗಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಆರೋಪ ಪ್ರತ್ಯಾರೋಪಗಳ ಪುನರಾವರ್ತನೆಯಾಗುತ್ತಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಹೊಸ ಬಾಂಬ್ ಸಿಡಿಸಿದ್ದಾರೆ.
ಮಂಗಳವಾರ ಶ್ರೀರಂಗಪಟ್ಟಣದ ವಿಧಾನಸಭಾ ಕ್ಷೇತ್ರದ ಹೊಸೂರಿನಲ್ಲಿ ಪ್ರಚಾರದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಂಬರೀಷ್ ಕುಟುಂಬದ ಬಗ್ಗೆ ಕೆಟ್ಟದಾಗಿ ಹೇಳುವಂತೆ ನಮ್ಮ ಕುಟುಂಬದ ನೌಕರರಿಬ್ಬರಿಗೆ ಜೆಡಿಎಸ್ ಆಮಿಷ ಒಡ್ಡುತ್ತಿದೆ ಎಂದು ಆರೋಪಿಸಿದರು.
ನಮ್ಮ ಕುಟುಂಬದ ಬಗ್ಗೆ ಕೆಟ್ಟದಾಗಿ ಹೇಳಿದರೆ, ವಿದೇಶಿ ಪ್ರವಾಸ, ಬೆಂಗಳೂರಿನಲ್ಲಿ ನಿವೇಶನ ಹಾಗೂ 10 ಲಕ್ಷ ರೂಪಾಯಿ ನೀಡುವುದಾಗಿ ಅಂಬರೀಷ್ ಹತ್ತಿರ ಕೆಲಸ ಮಾಡುತ್ತಿದ್ದ ಇಬ್ಬರಿಗೆ ಆಮಿಷ ಒಡ್ಡಲಾಗಿದೆ. ಈ ವಿಷಯವನ್ನು ಇಬ್ಬರು ನೌಕರರೇ ನನಗೆ ತಿಳಿಸಿದ್ದಾರೆ ಎಂದು ಸುಮಲತಾ ದೂರಿದರು.
ಇಂತಹ ಕೆಟ್ಟ ರಾಜಕಾರಣವನ್ನು ನಾನು ನೋಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಇದಕ್ಕೆಲ್ಲ ನಾವು ಹೆದರುವುದಿಲ್ಲ ಎಂದರು.
ನಮಗೆ ಅಂತಹ ದುರ್ಗತಿ ಬಂದಿಲ್ಲ: ಪುಟ್ಟರಾಜು
ಸುಮಲತಾ ಅವರ ಆರೋಪಕ್ಕೆ ತೀಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವ ಸಿ.ಎಸ್.ಪುಟ್ಟರಾಜು, ನಮಗೆ ಅಂತಹ ದುರ್ಗತಿ ಬಂದಿಲ್ಲ. ಸುಮಲತಾ ಅಕ್ಕ ಸುಳ್ಳು ಹೇಳುವುದನ್ನು ಕಡಿಮೆ ಮಾಡಿ ಜನರ ಮುಂದೆ ಹೋಗಲಿ ಎಂದು ತಿರುಗೇಟು ನೀಡಿದರು.
ಸುಮಲತಾ ಏಕೆ ಅಷ್ಟೊಂದು ಡಿಪ್ರೆಷನ್ ಆಗ್ತಾರೆ ಗೊತ್ತಿಲ್ಲ. ಹೀಗೆಲ್ಲಾ ಹೇಳಿ ಮಂಡ್ಯ ಜನರನ್ನು ಮುಟ್ಠಾಳರನ್ನಾಗಿ ಮಾಡಲು ಸಾಧ್ಯವಿಲ್ಲ. ಇದಕ್ಕೆಲ್ಲ ಎ.18ಕ್ಕೆ ಜನ ತೀರ್ಮಾನ ಮಾಡ್ತಾರೆ ಎಂದು ಅವರು ಹೇಳಿದರು.