×
Ad

ದೇವೇಗೌಡರ ಗೆಲುವು ಸೂರ್ಯ-ಚಂದ್ರರಷ್ಟೆ ಸತ್ಯ: ಡಾ.ಜಿ.ಪರಮೇಶ್ವರ್

Update: 2019-04-09 22:23 IST

ತುಮಕೂರು,ಎ.9: ಸಾಮಾನ್ಯ ರೈತರ ಮಗ ಪ್ರಧಾನಿಯಾಗಿದ್ದರು. ಇದನ್ನು ನಾವೆಲ್ಲ ಪಕ್ಷಾತೀತವಾಗಿ ಶ್ಲಾಘಿಸಬೇಕು. ಇವರು ನಮ್ಮ ತುಮಕೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇವರನ್ನು ಗೆಲ್ಲಿಸುವ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಬಸವರಾಜು ಅವರನ್ನು ಮೂರು ಬಾರಿ ನಮ್ಮ ಪಕ್ಷದಿಂದ ಗೆಲ್ಲಿಸಿದ್ದೇವೆ. ಆದರೆ ನಂತರ ಅವರು ಬಿಜೆಪಿಗೆ ತೆರಳಿ, ಕಾಂಗ್ರೆಸ್‌ನನ್ನು ತೆಗಳುತ್ತಿದ್ದಾರೆ. ತುಮಕೂರು ಕ್ಷೇತ್ರಕ್ಕೆ ಅವರ ಕೊಡುಗೆ ಏನು? ಅವರ ಸಾಧನೆ ಹೇಳಿ ಮತ ಕೇಳಲಿ. ಅದು ಬಿಟ್ಟು ಮೋದಿ ಹೆಸರಲ್ಲಿ ಮತ ಹೇಳುತ್ತಿದ್ದಾರೆ. ಹಾಗಿದ್ದರೆ ಅವರ ಸಾಧನೆ ಶೂನ್ಯವೇ ಎಂದು ಪ್ರಶ್ನಿಸಿದರು.

ದೇವೇಗೌಡರಲ್ಲಿ ಈ ವಯಸ್ಸಿನಲ್ಲಿಯೂ ಇರುವ ಉತ್ಸಾಹ ಬೇರೆ ಯಾರಲ್ಲೂ ಕಾಣಲು ಸಾಧ್ಯವಿಲ್ಲ. ಇಂದು ಇಲ್ಲಿದ್ದರೆ, ನಾಳೆ ಮತ್ತೊಂದು ಕ್ಷೇತ್ರದಲ್ಲಿ ಮತಯಾಚನೆಗೆ ತೆರಳುತ್ತಾರೆ. ಅವರ ಗೆಲುವು ಸೂರ್ಯ-ಚಂದ್ರರಷ್ಟೆ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಬಂದ ಬಳಿಕ 54 ವರ್ಷ ಆಡಳಿತ ನಡೆಸಿದೆ. ಬಡತನ ನಿವಾರಣೆಗೆ, ಉಂದ್ಯೋಗ ಸೃಷ್ಟಿ, ನೀರಾವರಿ, ಕೃಷಿ ಹೀಗೆ ಸಾಕಷ್ಟು ಯೋಜನೆಗಳನ್ನು ನಮ್ಮ ಸರಕಾರ ಮಾಡಿದೆ. ದೇಶದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಿದ್ದೇವೆ. ಕನ್ನಡಿಗರೊಬ್ಬರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಂತೋಷ ಪಟ್ಟಿದ್ದೆವು. ಅಪಪ್ರಚಾರ, ಹಗರಣವನನ್ನು ದೇವೇಗೌಡರ ಅವಧಿಯಲ್ಲಿ ಮಾಡಿಲ್ಲ. ಕಳೆದ ಐದು ವರ್ಷದಲ್ಲಿ ಮೋದಿ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದರ ಜೊತೆಗೆ ದೇಶವನ್ನು ಆರ್ಥಿಕವಾಗಿ ಮುಳುಗಿಸಿದ್ದಾರೆ. ಸುಳ್ಳು ಭರವಸೆ ನೀಡಿ ಇಷ್ಟು ವರ್ಷ ಜನರಿಗೆ ಮೋಸ ಮಾಡಿದ್ದಾರೆ.

ಕಪ್ಪು ಹಣ ಹಿಂತರುವುದಾಗಿ ಹೇಳಿ ನೋಟು ಅಮಾನ್ಯೀಕರಣ ಮಾಡಿದರು. ಆದರೆ, ಕಪ್ಪು ಹಣ ಇನ್ನೂ ಹೆಚ್ಚಾಗಿದೆ. ನೋಟು ಅಮಾನ್ಯೀಕರಣದಿಂದ ಬಡವರು ಬ್ಯಾಂಕ್ ಮುಂದೆ ಕ್ಯೂ ನಿಲ್ಲುವಂತೆ ಮಾಡಿ, ಸಾಕಷ್ಟು ಜನರ ಸಾವಿಗೆ ಕಾರಣ ಮಾಡಿದರು. ಅದೇ ರೀತಿ ಜಿಎಸ್‌ಟಿ ತಂದಿದ್ದಾರೆ. ಒಂದೇ ಮಾದರಿಯ ಟ್ಯಾಕ್ಸ್ ತರಬೇಕಿತ್ತು. ಆದರೆ, ಐದು ಹಂತದಲ್ಲಿ ತೆರಿಗೆ ಕಟ್ಟಬೇಕಿದೆ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News