ಮೋದಿ ಅಂಬಾನಿ, ಅದಾನಿ ಕಂಪೆನಿಗಳ ಚೌಕಿದಾರ: ಕೆಪಿಸಿಸಿ ಮುಖಂಡ ನಂಜಯ್ಯನಮಠ
ಬಾಗಲಕೋಟೆ, ಎ. 9: ಪ್ರಧಾನಿ ಮೋದಿಯವರು ದೇಶದ ಚೌಕಿದಾರನಲ್ಲ. ಬದಲಿಗೆ ಅಂಬಾನಿ, ಅದಾನಿ, ನೀರವ್ ಮೋದಿ, ವಿಜಯ್ ಮಲ್ಯ ಕಂಪೆನಿಗಳಿಗೆ ಚೌಕಿದಾರ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಇಂದಿಲ್ಲಿ ಟೀಕಿಸಿದ್ದಾರೆ.
ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಅನುಭವ ಇಲ್ಲದಿದ್ದರೂ ರಫೆಲ್ ಯುದ್ಧ ವಿಮಾನ ಉತ್ಪಾದನೆಯ ಟೆಂಡರನ್ನು ಸರಕಾರಿ ಸ್ವಾಮ್ಯದ ಎಚ್‌ಎಎಲ್ ಬದಲಿಗೆ ಅನಿಲ್ ಅಂಬಾನಿ ಕಂಪೆನಿಗೆ ಕೊಡಿಸಿದ್ದು ಇದಕ್ಕೆ ಸಾಕ್ಷಿ ಎಂದು ಲೇವಡಿ ಮಾಡಿದರು.
ಮೋದಿಯ ಮಾತಿನ ಮೋಡಿಗೆ ದೇಶದ ಜನತೆ ಈ ಬಾರಿ ಮೋಸ ಹೋಗಲು ಸಾಧ್ಯವಿಲ್ಲ. ಉದ್ಯಮಿಗಳಾದ ವಿಜಯಮಲ್ಯ, ನೀರವ್‌ಮೋದಿ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ.ವಂಚಿಸಿ ಪರಾರಿಯಾದಾಗ, ರಫೆಲ್ ಒಪ್ಪಂದದ ಕಡತಗಳು ಕಳ್ಳತನವಾದಾಗ ಈ ಚೌಕಿದಾರ ಏನು ಮಾಡುತ್ತಿದ್ದರು ಎಂದು ಅವರು ಪ್ರಶ್ನಿಸಿದರು.
ಐದು ವರ್ಷದಿಂದ ಮೋದಿ ಅವರ ವ್ಯಾಪಾರಿ ಮನೋಭಾವದ ಆಡಳಿತ ನೋಡಿ ದೇಶದ ಜನ ಭ್ರಮನಿರಸನರಾಗಿದ್ದಾರೆ ಎಂದ ಅವರು, ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ., ರೈತರ ಸಾಲಮನ್ನಾ ಭರವಸೆಯನ್ನು ಇನ್ನೂ ಈಡೇರಿಸಿಲ್ಲ ಎಂದು ಟೀಕಿಸಿದರು.
ಬಾಗಲಕೋಟೆ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಗೆಲುವು ನಿಶ್ಚಿತ. ಜೆಡಿಎಸ್ ಸೇರಿದಂತೆ ಜಿಲ್ಲೆಯ ಎಲ್ಲ ನಾಯಕರೂ ಈಗ ಒಗ್ಗಟ್ಟಾಗಿದ್ದೇವೆ. ಜಿ.ಪಂ. ಅಧ್ಯಕ್ಷೆಯಾಗಿ ವೀಣಾ ಮಾಡಿದ ಕಾರ್ಯಗಳು, ಜನರೊಂದಿಗಿನ ಒಡನಾಟ ಅವರ ಗೆಲುವಿಗೆ ಶ್ರೀರಕ್ಷೆ. ಎಲ್ಲರೂ ಸೇರಿ ಅವರ ಗೆಲುವಿಗೆ ಶ್ರಮಿಸಲಿದ್ದೇವೆ ಎಂದರು.