ಪಕ್ಷೇತರ ಅಭ್ಯರ್ಥಿ ಸುಮಲತಾ ಸ್ವಾಭಿಮಾನದ ಪ್ರತೀಕ: ನಟ ಯಶ್

Update: 2019-04-09 17:21 GMT

ಮಂಡ್ಯ, ಎ.9: ಸ್ವಾಭಿಮಾನದ ಪ್ರತೀಕವಾಗಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಅವರನ್ನು ಗೆಲ್ಲಿಸುವಂತೆ ಚಿತ್ರನಟ ಯಶ್ ಮನವಿ ಮಾಡಿದರು.

ತಾಲೂಕಿನ ಉಮ್ಮಡಹಳ್ಳಿ ಗ್ರಾಮದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ನಡೆಸಿ ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು, ಸುಮಲತಾ ಅವರು ಗೆದ್ದರೆ ಮಂಡ್ಯ ಜಿಲ್ಲೆಯವರು ಸ್ವಾಭಿಮಾನಿಗಳು ಎಂದು ಇಡೀ ದೇಶದಲ್ಲಿ ಮಾತನಾಡುತ್ತಾರೆ ಎಂದು ಹೇಳಿದರು.

ಅಂಬರೀಷ್ ಅವರು ಇದ್ದಾಗ ಯಾರೊಬ್ಬರೂ ಅವರ ಬಗ್ಗೆ ಮಾತನಾಡುತ್ತಿರಲಿಲ್ಲ. ಪ್ರಸ್ತುತ ಅವರ ಪತ್ನಿ ಚುನಾವಣೆಯಲ್ಲಿ ಸ್ಪರ್ಧಿಸಿರುವುದರಿಂದ ಮಾತನಾಡುತ್ತಿದ್ದಾರೆ. ಅಂಬರೀಷ್ ಅವರನ್ನು ಮದುವೆಯಾದ ನಂತರ ಸುಮಲತಾ ಅವರು ಮಂಡ್ಯ ಜಿಲ್ಲೆಯ ಸೊಸೆಯಾಗಿದ್ದಾರೆ. ಜಿಲ್ಲೆಯ ಸೊಸೆಯನ್ನು ಹೆಚ್ಚಿನ ಬಹುಮತ ನೀಡಿ ಆಯ್ಕೆ ಮಾಡಿ ಎಂದು ಅವರು ಮನವಿ ಮಾಡಿದರು.

ಸುಮಲತಾ ಅವರಿಗೆ ಈ ಚುನಾವಣೆಯಲ್ಲಿ ಒಮ್ಮೆ ಆಶೀರ್ವದಿಸಿ. ರಾಜ್ಯದ ಚುನಾವಣೆ ಬೇರೆ, ಕೇಂದ್ರದ ಚುನಾವಣೆ ಬೇರೆ. ನೀವು ಆಶೀರ್ವದಿಸಿ ಕಳುಹಿಸಿದರೆ ಕೇಂದ್ರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕೆಲಸ ಮಾಡುತ್ತಾರೆ. ಅಂಬರೀಷ್ ಅವರು ಭ್ರಷ್ಟಾಚಾರ ಮಾಡಿಲ್ಲ. ಕೇಂದ್ರದ ಅನುದಾನದಿಂದ ಜಿಲ್ಲೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಅದೇ ರೀತಿ ಸುಮಲತಾ ಅವರು ಜಿಲ್ಲೆಯನ್ನು ಅಭಿವೃದ್ಧಿಪಥದತ್ತ ಮುನ್ನಡೆಸಲಿದ್ದಾರೆ ಎಂದು ಭರವಸೆ ನೀಡಿದರು.

ಚುನಾವಣೆಯಲ್ಲಿ ನಾಲ್ಕು ಜನ ಸುಮಲತಾ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಮತದಾರರು ಪ್ರಜ್ಞಾವಂತರಾಗಿದ್ದು, ಕ್ರಮ ಸಂಖ್ಯೆ 20, ಕಹಳೆ ಊದುತ್ತಿರುವ ರೈತನ ಗುರುತಿಗೆ ಮತ ನೀಡಿ ಆಶೀರ್ವದಿಸಿ ಎಂದು ಮನವಿ ಮಾಡಿದರು.

ನಿಖಿಲ್‍ಗೆ ತಿರುಗೇಟು: ತನಗೆ ಮನೆ ಬಾಡಿಗೆ ಕಟ್ಟುವುದಕ್ಕೂ ಯೋಗ್ಯತೆ ಇರಲಿಲ್ಲವೆಂಬ ಜೆಡಿಎಸ್ ಅಭ್ಯರ್ಥಿ ನಿಖಿಲ್ ಹೇಳಿಕೆಗೆ ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಪ್ರತಿಕ್ರಿಯಿಸಿದ ಯಶ್, ಹೌದಪ್ಪ ನನಗೆ ಬಾಡಿಗೆ ಕಟ್ಟೋದಕ್ಕೆ ಯೋಗ್ಯತೆ ಇಲ್ಲ ಅಂತನೇ ಅನ್ಕೊಳ್ಳಿ. ಆದ್ರೆ ರಾಜ್ಯದಲ್ಲಿ ಸಾಕಷ್ಟು ರೈತರಿದ್ದಾರೆ. ಇಲ್ಲಿ ಮಾತ್ರ ಅಲ್ಲ, ಉತ್ತರ ಕರ್ನಾಟಕದಲ್ಲೂ ಇದ್ದಾರೆ. ನಾನು ಏನು ಮಾಡಿದ್ದೇನೆ ಅಂತ ಹೋಗಿ ಕೊಪ್ಪಳ ಅಂತ ಊರಿದೆಯಲ್ಲ, ಅಲ್ಲಿ ಕೇಳಲಿ ಎಂದು ತಿರುಗೇಟು ನೀಡಿದರು.

ಕಟ್ಟೇದೊಡ್ಡಿ, ಕನ್ನಲಿ, ಬೂದನೂರು, ಹನಕೆರೆ, ಸಾತನೂರು, ಗೋಪಾಲಪುರ ಸೇರಿದಂತೆ 24 ಹಳ್ಳಿಗಳಲ್ಲಿ ಯಶ್ ಪ್ರಚಾರ ಮಾಡಿದರು. ಮಾಜಿ ಶಾಸಕ ಎಚ್.ಬಿ.ರಾಮು, ಮನ್‍ಮುಲ್ ನಿರ್ದೇಶಕರಾದ ಎಸ್.ಪಿ.ಮಹೇಶ್, ಯು.ಸಿ.ಶಿವಕುಮಾರ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಬೇಲೂರು ಸೋಮಶೇಖರ್, ಅರವಿಂದ್, ಶಶಿಕುಮಾರ್ ಇತರ ಮುಖಂಡರು ಸಾಥ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News