ಎನ್‍ಡಿಎ ದೇಶವನ್ನು ಆಳುವ ನೈತಿಕತೆಯನ್ನು ಕಳೆದುಕೊಂಡಿದೆ : ಪ್ರೊ.ಮಹೇಶ್ ಚಂದ್ರಗುರು

Update: 2019-04-09 18:14 GMT

ಮಡಿಕೇರಿ,ಎ.9: ಕಳೆದ ಐದು ವರ್ಷಗಳ ಆಡಳಿತಾವಧಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸಾಯಲಾರಂಭಿಸಿದ್ದು, ಮೋದಿ ನೇತೃತ್ವದ ಎನ್‍ಡಿಎ ಈ ದೇಶವನ್ನು ಆಳುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಪ್ರೊ.ಮಹೇಶ್ ಚಂದ್ರಗುರು ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ವಿಶ್ವದ ಗಮನ ಸೆಳೆದಿರುವ 2019ರ ಈ ಲೋಕಸಭಾ ಚುನಾವಣೆಯಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಗುರುತರವಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು, ಎನ್‍ಡಿಎಯನ್ನು ಪರಾಭವಗೊಳಿಸುವ ಶಕ್ತಿಗಳನ್ನು ಬೆಂಬಲಿಸುವ ಬಗ್ಗೆ ಪ್ರತಿಯೊಬ್ಬರು ಚಿಂತಿಸಬೇಕೆಂದು ಕರೆ ನೀಡಿದರು.

ಕೇಂದ್ರದ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ಸಾಮ್ರಾಜ್ಯಶಾಹಿ ಶಕ್ತಿಗಳು ಆಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಷ್ಟ್ರದ ‘ಪ್ರಜಾಪ್ರಭುತ್ವ’ ವ್ಯವಸ್ಥೆ ಕವಲು ಹಾದಿಯಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದ ಪ್ರೊ. ಮಹೇಶ್‍ ಚಂದ್ರ ಗುರು, ಡಾ.ಅಂಬೇಡ್ಕರ್ ಅವರಿಂದ  ರಚಿಸಲ್ಪಟ್ಟ ಸಂವಿಧಾನವನ್ನೆ ಸುಡಬೇಕೆನ್ನುವ ಮನಸ್ಥಿತಿ ಇರುವಂತಹವರು ನಮ್ಮನ್ನು ಪ್ರತಿನಿಧಿಸುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.

ಪ್ರಸ್ತುತ ಸಂಸದೀಯ ಮಾದರಿಯ ಪ್ರಜಾಸತ್ತೆಯನ್ನು ‘ಅಧ್ಯಕ್ಷೀಯ ಮಾದರಿಯ ಪ್ರಜಾಸತ್ತೆ’ಯನ್ನಾಗಿ ಬದಲಿಸುವ ಪ್ರಯತ್ನ ಕೇಂದ್ರದಿಂದ ನಡೆಯುತ್ತಿದ್ದು, ಸಂವಿಧಾನವನ್ನು ಉಳಿಸುವ ಅನಿವಾರ್ಯತೆ ದೇಶದ ಮುಂದಿದೆ ಎಂದರು. 

ಕೇಂದ್ರದ ಮೋದಿ ನೇತೃತ್ವದ ಎನ್‍ಡಿಎ ಆಡಳಿತದಲ್ಲಿ ರೈತರು, ಶ್ರಮಿಕವರ್ಗ, ಆದಿವಾಸಿ ಸಮೂಹ, ಮಹಿಳೆಯರು, ದಲಿತ ಸಮೂಹ ಬಲಿಪಶುಗಳಾಗಿದ್ದಾರೆ. ಎನ್‍ಡಿಎ ಎಂದರೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವಲ್ಲ. ಬದಲಾಗಿ ‘ರಾಷ್ಟ್ರೀಯ ವಿಧ್ವಂಸಕ ಒಕ್ಕೂಟ’ ಎಂದು ಆರೋಪಿಸಿದರು.

ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆಯ ಪ್ರಮುಖರಾದ ಪ್ರೊ.ಶಬೀರ್ ಮುಸ್ತಫಾ ಮಾತನಾಡಿ, ಜನರ ಜೀವನಕ್ಕೆ ಸಂಬಂಧವಿಲ್ಲದ ವಿಚಾರಗಳನ್ನು ಚುನಾವಣೆಯ ಸಂದರ್ಭ ಮುಂಚೂಣಿಗೆ ತರುವ ಪ್ರಯತ್ನಗಳು ನಡೆಯುತ್ತಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಲ್ಲ. ಕಳೆದ ಐದು ವರ್ಷಗಳ ಕಾಲ ಕೇಂದ್ರದಲ್ಲಿ ಆಡಳಿತ ನಡೆಸಿದ ಎನ್‍ಡಿಎ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಾ ಸಾಗಿದೆ ಎಂದು ಟೀಕಿಸಿದರು.

ಮೈಸೂರು-ಕೊಡಗು ಕ್ಷೇತ್ರವನ್ನು ಪ್ರತಿನಿಧಿಸಿದ ಸಂಸದರು ಕೊಡಗಿನ ಜನರ ಮೂಲ ಸಮಸ್ಯೆಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿ, ಕೇವಲ ವಿರೋಧಿಸುವ ವಿಚಾರಗಳಿಗಷ್ಟೆ ಒತ್ತು ನೀಡುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷರಾದ ಶಾಂತರಾಜು ಮತ್ತು ಪದಾಧಿಕಾರಿ ರೇವಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News