ರಫೇಲ್ ಡೀಲ್ : ಕೇಂದ್ರ ಸರಕಾರದ ಆಕ್ಷೇಪಣಾ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ

Update: 2019-04-10 16:00 GMT

ಹೊಸದಿಲ್ಲಿ,ಎ.10: ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದ ಕುರಿತು ತನ್ನ ತೀರ್ಪಿನ ಪುನರ್ ಪರಿಶೀಲನೆಯನ್ನು ಕೋರಿರುವ ಅರ್ಜಿದಾರರು ಸೋರಿಕೆಯಾದ ದಾಖಲೆಗಳನ್ನು ಸಾಕ್ಷಗಳೆಂದು ಬಳಸಿರುವುದಕ್ಕೆ ಸರ್ವೋಚ್ಚ ನ್ಯಾಯಾಲಯವು ಬುಧವಾರಹಸಿರು ನಿಶಾನೆಯನ್ನು ತೋರಿಸಿದ್ದು, ಅವುಗಳ ಮೇಲೆ ‘ಹಕ್ಕು’ ಸಾಧಿಸಿದ್ದ ಕೇಂದ್ರದ ಪ್ರಾಥಮಿಕ ಆಕ್ಷೇಪಗಳನ್ನು ವಜಾಗೊಳಿಸಿದೆ. ಇದರೊಂದಿಗೆ ಸಾರ್ವತ್ರಿಕ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆಹಿನ್ನಡೆಯುಂಟಾಗಿದೆ.

ಅರ್ಜಿದಾರರು ಮಹತ್ವದ ದಾಖಲೆಗಳನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ ಮತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪುನರ್ ಪರಿಶೀಲನೆಯನ್ನು ಕೋರಿ ಸಲ್ಲಿಸಿರುವ ಅರ್ಜಿಗಳಿಗೆ ಪೂರಕ ದಾಖಲೆಗಳನ್ನಾಗಿ ಬಳಸಿಕೊಂಡಿದ್ದಾರೆ ಎಂದು ಕೇಂದ್ರವುವಾದಿಸಿತ್ತು. ಫ್ರಾನ್ಸ್‌ನಿಂದ 36 ರಫೇಲ್ ಯುದ್ಧವಿಮಾನಗಳ ಖರೀದಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು 2018,ಡಿ.14ರ ತನ್ನ ತೀರ್ಪಿನಲ್ಲಿ ವಜಾಗೊಳಿಸಿತ್ತು.

ಪುನರ್ ಪರಿಶೀಲನಾ ಅರ್ಜಿಯ ಅಂಗೀಕಾರಾರ್ಹತೆಯನ್ನು ಪ್ರಶ್ನಿಸಿ ಕೇಂದ್ರವು ಸಲ್ಲಿಸಿದ್ದ ಪ್ರಾಥಮಿಕ ಆಕ್ಷೇಪಗಳನ್ನು ನಾವು ವಜಾಗೊಳಿಸಿದ್ದೇವೆ ಎಂದು ಮು.ನ್ಯಾ.ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಕೆ.ಎಂ.ಜೋಸೆಫ್ಅವರನ್ನೊಳಗೊಂಡ ಪೀಠವು ಹೇಳಿತು.
ಅರ್ಜಿದಾರರು ಪ್ರಸ್ತಾಪಿಸಿರುವ ಹೊಸ ದಾಖಲೆಗಳ ಆಧಾರದಲ್ಲಿ ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆಯನ್ನು ತಾನು ಮುಂದುವರಿಸುವುದಾಗಿ ಸರ್ವೋಚ್ಚ ನ್ಯಾಯಾಲಯವು ತಿಳಿಸಿತು.

ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಪೀಠವು ಯುದ್ಧವಿಮಾನಗಳ ಬೆಲೆ ನಿಗದಿ ಪ್ರಶ್ನೆಯನ್ನು ಮಾತ್ರವಲ್ಲ,ರಫೇಲ್ ವಿಮಾನಗಳನ್ನು ತಯಾರಿಸುವ ಡಸಾಲ್ಟ್‌ನ ಭಾರತೀಯ ಪಾಲುದಾರ ಕಂಪನಿಯ ಆಯ್ಕೆಯ ಬಗ್ಗೆಯೂ ಗಮನಹರಿಸುವುದಾಗಿ ತೀರ್ಪು ಸ್ಪಷ್ಟಪಡಿಸಿದೆ.
 ಸರ್ವೋಚ್ಚ ನ್ಯಾಯಾಲಯದ ಸರ್ವಾನುಮತದ ತೀರ್ಪಿನ ಬಗ್ಗೆ ಅರ್ಜಿದಾರರಲ್ಲೋರ್ವರಾದ ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಹರ್ಷ ವ್ಯಕ್ತಪಡಿಸಿದ್ದಾರೆ.
ದಾಖಲೆಗಳ ಅಂಗೀಕಾರಾರ್ಹತೆಯ ಕುರಿತು ಕೇಂದ್ರ ಸರಕಾರದ ವಿಲಕ್ಷಣ ವಾದವನ್ನು ತಿರಸ್ಕರಿಸಿರುವ ಈ ಸರ್ವಾನುಮತದ ತೀರ್ಪಿನಿಂದ ನಮಗೆ ಹರ್ಷವಾಗಿದೆ. ರಕ್ಷಣಾ ಒಪ್ಪಂದದಲ್ಲಿ ಯಾವುದೇ ತಪ್ಪು ಸಾಧ್ಯವಿಲ್ಲ ಎನ್ನುವುದು ಕೇಂದ್ರದ ವಾದವಾಗಿತ್ತುಎಂದು ಅವರು ಹೇಳಿದರು.

ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ ಮತ್ತು ನ್ಯಾಯವಾದಿ ಪ್ರಶಾಂತ ಭೂಷಣ್ ಅವರು ಇತರ ಇಬ್ಬರು ಅರ್ಜಿದಾರರಾಗಿದ್ದಾರೆ.
 ಸರ್ವೋಚ್ಚ ನ್ಯಾಯಾಲಯವು ಸರಕಾರವು ಎತ್ತಿದ್ದ ಆಕ್ಷೇಪಗಳ ಕುರಿತು ತನ್ನ ತೀರ್ಪನ್ನು ಮಾ.14ರಂದು ಕಾಯ್ದಿರಿಸಿತ್ತು.
ರಫೇಲ್ ಒಪ್ಪಂದ ಕುರಿತು ವರ್ಗೀಕೃತ ದಾಖಲೆಗಳನ್ನು ಮಾಧ್ಯಮಗಳು ಕಲೆಹಾಕಿದ್ದು,ಇವುಗಳನ್ನೇ ಅರ್ಜಿದಾರರು ಪೂರಕ ಸಾಕ್ಷಗಳನ್ನಾಗಿ ಬಳಸಿಕೊಂಡಿದ್ದಾರೆ. ಒಪ್ಪಂದದ ಕುರಿತು ಸರಕಾರದಿಂದ ಸಮಾನಾಂತರ ಮಾತುಕತೆಗಳಿಗೆ ರಕ್ಷಣಾ ಸಚಿವಾಲಯವುಆಕ್ಷೇಪಗಳನ್ನು ವ್ಯಕ್ತಪಡಿಸಿತ್ತು ಎಂದು ಸಚಿವಾಲಯದ ಆಂತರಿಕ ವರದಿಗಳನ್ನು ಉಲ್ಲೇಖಿಸಿ ದಿ ಹಿಂದು ಪತ್ರಿಕೆಯು ಪ್ರಕಟಿಸಿತ್ತು.

 ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳ ಮೇಲೆ ತನ್ನ ಹಕ್ಕು ಮಂಡಿಸಿದ್ದ ಕೇಂದ್ರವು,ಭಾರತೀಯ ಸಾಕ್ಷ್ಯ ಕಾಯ್ದೆಯ ಕಲಂ 123ರಂತೆ ಈ ದಾಖಲೆಗಳನ್ನು ಸಾಕ್ಷಗಳೆಂದು ಪರಿಗಣಿಸುವಂತಿಲ್ಲ ಎಂದು ವಾದಿಸಿತ್ತು.

ಅಲ್ಲದೆ ಈ ದಾಖಲೆಗಳು ಅಧಿಕೃತ ರಹಸ್ಯಗಳ ಕಾಯ್ದೆಯಡಿ ಸಂರಕ್ಷಿತವಾಗಿರುವುದರಿಂದ ಮತ್ತು ಮಾಹಿತಿ ಹಕ್ಕು ಕಾಯ್ದೆಯ ಕಲಂ 8(1)(ಎ) ಅಡಿ ಅವುಗಳನ್ನು ಬಹಿರಂಗಗೊಳಿಸುವುದರಿಂದ ವಿನಾಯಿತಿ ಇರುವುದರಿಂದ ಸಂಬಂಧಿಸಿದ ಇಲಾಖೆಯಅನುಮತಿಯಿಲ್ಲದೆ ಯಾರೂ ಈ ದಾಖಲೆಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸುವಂತಿಲ್ಲ ಎಂದೂ ಕೇಂದ್ರವು ವಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News