ಮತ್ತೊಮ್ಮೆ ಮೋದಿ ಪ್ರಧಾನಿಯಾದರೆ ಒಳ್ಳೆಯದು: ಪಾಕ್ ಪ್ರಧಾನಿ ಇಮ್ರಾನ್ ಖಾನ್

Update: 2019-04-10 15:58 GMT

ಇಸ್ಲಾಮಾಬಾದ್,ಎ.10: ಗುರುವಾರದಿಂದ ಆರಂಭವಾಗಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿಯು ಜಯಶಾಲಿಯಾದರೆ ಭಾರತದೊಂದಿಗೆ ಶಾಂತಿ ಮಾತುಕತೆಗಳಿಗೆ ಉತ್ತಮ ಅವಕಾಶವಾಗಬಹುದು ಎಂದುತಾನು ಭಾವಿಸಿರುವುದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಬುಧವಾರ ಇಲ್ಲಿ ಹೇಳಿದರು.

ಮುಂದಿನ ಭಾರತೀಯ ಸರಕಾರವು ಕಾಂಗ್ರೆಸ್ ನೇತೃತ್ವದ್ದಾದರೆ ಬಲಪಂಥೀಯರ ತಿರುಗೇಟಿನ ಭೀತಿಯಿಂದಾಗಿ ಕಾಶ್ಮೀರ ಬಿಕ್ಕಟ್ಟಿನ ಕುರಿತು ಪಾಕ್ ಜೊತೆ ಪರಿಹಾರವನ್ನು ಕಂಡುಕೊಳ್ಳಲು ಅದು ಹಿಂಜರಿಯಬಹುದು ಎಂದು ವಿದೇಶಿ ಪತ್ರಕರ್ತರೊಂದಿಗೆಮಾತನಾಡುತ್ತ ಹೇಳಿದ ಖಾನ್,ಬಲಪಂಥೀಯ ಪಕ್ಷವಾಗಿರುವ ಬಿಜೆಪಿ ಗೆದ್ದರೆ ಕಾಶ್ಮೀರ ಬಿಕ್ಕಟ್ಟು ಕುರಿತಂತೆ ಏನಾದರೂ ಪರಿಹಾರ ರೂಪುಗೊಳ್ಳುವ ಸಾಧ್ಯತೆಯಿದೆ ಎಂದರು.

ಕಾಶ್ಮೀರದಲ್ಲಿಯ ಮುಸ್ಲಿಮರು ಮಾತ್ರವಲ್ಲ,ಇಡೀ ಭಾರತದಲ್ಲಿ ಮುಸ್ಲಿಮರು ಪ್ರತ್ಯೇಕತೆಯ ಭಾವನೆಯನ್ನು ಅನುಭವಿಸುತ್ತಿದ್ದಾರೆ ಎಂದ ಅವರು,ಭಾರತದಲ್ಲಿ ಇಂದು ಸಂಭವಿಸುತ್ತಿರುವುದನ್ನು ತಾನು ನೋಡುತ್ತೇನೆಂದು ತಾನೆಂದೂ ಭಾವಿಸಿರಲಿಲ್ಲ. ಮುಸ್ಲಿಂಅಸ್ಮಿತೆಯ ಮೇಲೆ ದಾಳಿ ನಡೆಯುತ್ತಿದೆ ಎಂದರು.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಅವರಂತೆ ಮೋದಿ ಕೂಡ ‘ಭಯ ಮತ್ತು ರಾಷ್ಟ್ರೀಯತೆಯ ಭಾವನೆಯ ಆಧಾರದಲ್ಲಿ ಚುನಾವಣೆಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಪಾಕಿಸ್ತಾನದಲ್ಲಿಯ ಎಲ್ಲ ಭಯೋತ್ಪಾದಕ ಗುಂಪುಗಳನ್ನು ನಿರ್ಮೂಲಿಸಲು ಸರಕಾರವು ನಿರ್ಧರಿಸಿದೆ ಮತ್ತು ಇದಕ್ಕೆ ಸರಕಾರಕ್ಕೆ ಸೇನೆಯ ಸಂಪೂರ್ಣ ಬೆಂಬಲವಿದೆ. ಈ ಗುಂಪುಗಳಲ್ಲಿ ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆಗಳೂಸೇರಿವೆ ಎನ್ನುವ ಮೂಲಕ ಖಾನ್ ಭಾರತದತ್ತ ಶಾಂತಿಹಸ್ತ ಚಾಚಿದಂತೆ ಕಂಡುಬಂದರು.

ಕಾಶ್ಮೀರವು ರಾಜಕೀಯ ಹೋರಾಟವಾಗಿದೆ ಮತ್ತು ಇದಕ್ಕೆ ಮಿಲಿಟರಿ ಪರಿಹಾರವಿಲ್ಲ ಎಂದ ಅವರು,ಸಶಸ್ತ್ರ ಭಯೋತ್ಪಾದಕರು ಗಡಿಯಾಚೆಯಿಂದ ಬಂದರೆ ಅದು ಭಾರತೀಯ ಸೇನೆಯ ದಾಳಿ ಕಾರ್ಯಾಚರಣೆಗಳಿಗೆ ಕಾರಣವಾಗುತ್ತದೆ ಮತ್ತು ಇದರಿಂದಾಗಿಕಾಶ್ಮೀರಿಗಳು ನರಳುವಂತಾಗುತ್ತದೆ ಎಂದು ಹೇಳಿದರು.

ಚುನಾವಣೆಗಳು ಮೋದಿಯವರ ನಿರೀಕ್ಷೆಗೆ ವಿರುದ್ಧವಾದರೆ ಮುಂದಿನ ಕೆಲವು ವಾರಗಳಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಇನ್ನಷ್ಟು ಮಿಲಿಟರಿ ಕಾರ್ಯಾಚರಣೆಯನ್ನು ನಡೆಸುವ ಸಾಧ್ಯತೆ ಈಗಲೂ ಇದೆ ಎಂದೂ ಖಾನ್ ಹೇಳಿದರು.

ಮೋದಿ ಉತ್ತರಕ್ಕೆ ಉಮರ್ ಅಬ್ದುಲ್ಲಾ ಆಗ್ರಹ

ಎರಡನೇ ಅವಧಿಗೆ ಪ್ರಧಾನಿಯಾಗಿ ತನ್ನ ಆಯ್ಕೆಯನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಅನುಮೋದಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತರಿಸಬೇಕು ಎಂದು ನ್ಯಾಷನಲ್ ಕಾನ್‌ಫರೆನ್ಸ್‌ನ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಅವರುಆಗ್ರಹಿಸಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿ ಸೋಲಬೇಕು ಎಂದು ಪಾಕಿಸ್ತಾನ ಮತ್ತು ಉಗ್ರವಾದಿಗಳು ಬಯಸುತ್ತಿದ್ದಾರೆ ಎಂದು ಈವರೆಗೆ ಮೋದಿ ಅವರೊಬ್ಬರೇ ಹೇಳುತ್ತಿದ್ದರು,ಆದರೆ ಮೋದಿ ಮತ್ತೆ ಗೆಲ್ಲಬೇಕು ಎಂದು ಪಾಕಿಸ್ತಾನವು ಬಯಸುತ್ತಿದೆ ಎನ್ನುವುದು ಇಂದುಸ್ಪಷ್ಟವಾಗಿದೆ. ಹೀಗಾಗಿ ಮೋದಿಯವರು ಇದಕ್ಕೆ ಉತ್ತರಿಸಬೇಕು ಎಂದು ಸರಣಿ ಟ್ವೀಟ್‌ಗಳಲ್ಲಿ ಉಮರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News