ಪ್ರತಾಪ್ ಸಿಂಹ ಕೊಡಗನ್ನು ತಿರುಗಿಯೂ ನೋಡಿಲ್ಲ: ಪಿ.ಕೆ.ಬಿದ್ದಪ್ಪ ಆರೋಪ

Update: 2019-04-10 11:43 GMT

ಮಡಿಕೇರಿ,ಎ.10 :ಕೊಡಗು ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದ ಲೋಕಸಭಾ ಸದಸ್ಯ ಪ್ರತಾಪ ಸಿಂಹ ಅವರು ಜಿಲ್ಲೆಯನ್ನು ತಿರುಗಿಯೂ ನೋಡದೆ, ಕೊನೆಯ ಆರು ತಿಂಗಳ ಅವಧಿಯಲ್ಲಿ ಜಿಲ್ಲೆಗೆ ಬಂದು ಹೋಗಿದ್ದಾರೆ ಎಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕರ್ನಾಟಕ ಪ್ರಜಾ ಪಾರ್ಟಿಯ ಅಭ್ಯರ್ಥಿ ಪಿ.ಕೆ.ಬಿದ್ದಪ್ಪ ಆರೋಪಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಂಕಷ್ಟಗಳಿಗೆ ಸ್ಪಂದಿಸುವ ಅಭ್ಯರ್ಥಿಯೊಬ್ಬರ ಅಗತ್ಯವಿದ್ದು, ಜಿಲ್ಲೆಯವನೇ ಆದ ನನ್ನನ್ನು ಆಯ್ಕೆ ಮಾಡಿ ಕಳುಹಿಸಿದಲ್ಲಿ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಹಿಂದಿನ ಸಂಸದರು ಜಿಲ್ಲೆಯಲ್ಲಿ ಮಳೆಹಾನಿ ಸಂಭವಿಸಿದಾಗ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಬೆಳೆಗಾರರು ನಷ್ಟವನ್ನು ಅನುಭವಿಸುತ್ತಿದ್ದರೂ ಯಾವುದೇ ಪರಿಹಾರವನ್ನು ಸೂಚಿಸಿಲ್ಲ. ವಿದ್ಯುತ್, ರಸ್ತೆ ಸೇರಿದಂತೆ ಇನ್ನು ಅನೇಕ ಮೂಲಭೂತ ಸಮಸ್ಯೆಗಳು ಜಿಲ್ಲೆಯನ್ನು ಕಾಡುತ್ತಲೆ ಇದ್ದು, ಸಂಸದರಿಂದ ಯಾವುದೇ ಲಾಭವಾಗಿಲ್ಲ. ಆದ್ದರಿಂದ ಸ್ಥಳೀಯನಾದ ನನಗೆ ಮತನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.

ಇಂದು ಹಣ, ಹೆಂಡಕ್ಕಾಗಿ ಮತಚಲಾವಣೆಯಾಗುತ್ತಿದ್ದು, ಕ್ಷೇತ್ರದ ಹಿತದೃಷ್ಟಿಯಿಂದ ಮತದಾರರು ಪ್ರಾಮಾಣಿಕರಿಗೆ ಮತ ನೀಡಬೇಕೆಂದು ಮನವಿ ಮಾಡಿದರು. ತಾವು ಸಂಸದರಾಗಿ ಆಯ್ಕೆಯಾದರೆ, ಕ್ಷೇತ್ರವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವುದಾಗಿ ಬಿದ್ದಪ್ಪ ಭರವಸೆ ನಿಡಿದರು.

ಕರ್ನಾಟಕ ಪ್ರಜಾಪಾರ್ಟಿಯ ರಾಜ್ಯಾಧ್ಯಕ್ಷ ಡಾ.ಬಿ.ಶಿವಣ್ಣ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜಾಸೇವಕನನ್ನು ಆಯ್ಕೆ ಮಾಡುವ ಸಂದರ್ಭ ಪ್ರಜ್ಞಾವಂತ ಮತದಾರರು ಅತೀ ಜಾಗೃತೆಯಿಂದ ತಮ್ಮ ಮತವನ್ನು ಚಲಾಯಿಸಬೇಕಾಗಿದೆ. ದೇಶದಲ್ಲಿ ಒಂದು ಹೊಸ ಆಯಾಮವನ್ನು ಉಂಟು ಮಾಡಲು ಹೊಸ ಪಕ್ಷವನ್ನು ಹುಟ್ಟು ಹಾಕಲಾಗಿದೆ. ದೇಶಭಕ್ತಿಯೊಂದಿಗೆ ಅನ್ನದಾತನ, ಬಡವರ, ದೀನ ದಲಿತರ ಮಹಿಳೆಯರ ಮತ್ತು ಮಕ್ಕಳ ಕೂಲಿಕಾರ್ಮಿಕರ ಪರವಾದ ಹೋರಾಟ ಮಾಡಲು ನಮ್ಮ ಪಾರ್ಟಿ ಸದಾ ಸಿದ್ಧವಿದೆಯೆಂದು ಶಿವಣ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಸಿ. ಕಾರ್ತಿಕ್, ಮೈಸೂರು ಜಿಲ್ಲಾಧ್ಯಕ್ಷ ಲೋಕೇಶ್, ನಾಪೋಕ್ಲು ಹೋಬಳಿ ಅಧ್ಯಕ್ಷೆ ಚೋಕಿರ ಹೇಮಾವತಿ ಹಾಗೂ ಪ್ರಮುಖರಾದ ಎ. ದಿನೇಶ್ ಸುಬ್ಬಯ್ಯ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News