ಭಾವನೆಗಳೇ ಇಲ್ಲದ ಬಿಜೆಪಿಗೆ ಕಣ್ಣೀರು ಬರಲು ಸಾಧ್ಯವಿಲ್ಲ: ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್

Update: 2019-04-10 11:47 GMT

ಮಡಿಕೇರಿ,ಎ.10: ಮಾನವೀಯ ಮೌಲ್ಯ ಹೊಂದಿರುವ ಭಾವನಾತ್ಮಕ ಮನಸ್ಸಿನ ಮಾಜಿ ಪ್ರಧಾನಿ ದೇವೇಗೌಡರ ಕಣ್ಣೀರಿನ ಬಗ್ಗೆ ಪ್ರಧಾನಿ ಮೋದಿ ಅವರು ಪ್ರಚಾರ ಸಭೆಯಲ್ಲಿ ಲೇವಡಿ ಮಾಡಿರುವುದು ಖಂಡನೀಯವೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾವನೆಗಳೇ ಇಲ್ಲದ ಬಿಜೆಪಿಗೆ ಕಣ್ಣೀರು ಬರಲು ಸಾಧ್ಯವಿಲ್ಲವೆಂದು ಟೀಕಿಸಿದರು. ಮಾಜಿ ಪ್ರಧಾನಿಯನ್ನು ಹೀಯಾಳಿಸುವುದು ಪ್ರಧಾನಿ ಸ್ಥಾನದಲ್ಲಿರುವ ಮೋದಿಯವರಿಗೆ ಶೋಭೆ ತರುವುದಿಲ್ಲ. ದೇಶಕ್ಕಾಗಿ  ಮತ ಚಲಾಯಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದರೆ, ಬಿಜೆಪಿಗೇ ಮತ ನೀಡಬೇಕೆಂದು ಕಡ್ಡಾಯಗೊಳಿಸುವಂತ್ತಿಲ್ಲ. ಬಿಜೆಪಿಯಿಂದ ದೇಶದ ಅಭಿವೃದ್ಧಿ ಅಸಾಧ್ಯ ಎನ್ನುವುದು ಕಳೆದ 5 ವರ್ಷಗಳ ಆಡಳಿತದಲ್ಲಿ ಸಾಬೀತಾಗಿದೆ. ಮಂಗಳವಾರ ಕರ್ನಾಟಕದಲ್ಲಿ ಚುನಾವಣಾ ಭಾಷಣ ಮಾಡಿದ ಪ್ರಧಾನಿ ಮೋದಿ ಅವರು, ಜನರಲ್ಲಿ ಭ್ರಮೆ ಹುಟ್ಟಿಸುವ ಸುಳ್ಳಿನ ಭರವಸೆಗಳನ್ನೇ ನೀಡಿದ್ದಾರೆ ಎಂದು ಸುರೇಶ್ ಆರೋಪಿಸಿದರು.

ಇನ್ನು ಮುಂದೆ ಈ ದೇಶದ ಜನ ಬಿಜೆಪಿಯ ಸುಳ್ಳು ಭರವಸೆಗಳಿಗೆ ಮಾರು ಹೋಗುವುದಿಲ್ಲವೆಂದು ತಿಳಿಸಿದ ಅವರು, ಮತದಾರ ತಕ್ಕ ಪಾಠ ಕಲಿಸಲಿದ್ದಾನೆ ಎಂದು ಭವಿಷ್ಯ ನುಡಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ದೇಶದ ಪ್ರಜೆಯಾಗಿದ್ದು, ಯಾವುದೇ ಭಾಗದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆ ಹೊಂದಿದ್ದಾರೆ. ಇದನ್ನು ಟೀಕಿಸುವ ನೈತಿಕತೆ ಬಿಜೆಪಿಗೆ ಇಲ್ಲವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್ ವಕ್ತಾರ ಕುಸುಮ್ ಕಾರ್ಯಪ್ಪ ಮಾತನಾಡಿ, ಬಿಜೆಪಿ ಇತ್ತೀಚೆಗೆ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ನಡುವೆ ಒಡಕು ಮೂಡಿಸುವ ಷಡ್ಯಂತ್ರ ರೂಪಿಸಿದೆ ಎಂದು ಟೀಕಿಸಿದರು. ಕಾಯಕರ್ತರು ಯಾವುದೇ ಗೊಂದಲಗಳಿಗೆ ಕಿವಿಗೊಡದೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಮೂಲಕ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.

ಸಾಲಮನ್ನಾ ಸೇರಿದಂತೆ ಘೋಷಿತ ಯೋಜನೆಗಳನ್ನು ರಾಜ್ಯ ಸಮ್ಮಿಶ್ರ ಸರ್ಕಾರ ಜಾರಿ ಮಾಡಿಲ್ಲವೆಂದು ಪ್ರಧಾನಮಂತ್ರಿಗಳು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ ಕುಸುಮ್ ಕಾರ್ಯಪ್ಪ, ಪ್ರಧಾನಿ ಸ್ಥಾನಕ್ಕೆ ಘನತೆ ತರುವಂತೆ ಮೋದಿ ನಡೆದುಕೊಳ್ಳಲಿ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಚಾಲಕ ಹೊಸೂರು ಸೂರಜ್ ಮಾತನಾಡಿ, ಮೈಸೂರಿನಲ್ಲಿ ಚುನಾವಣಾ ಪ್ರಚಾರ ಮಾಡಿದ ಪ್ರಧಾನಿ ಮೋದಿ ಅವರು, ಪ್ರತಾಪ ಸಿಂಹ ಪರ ಮತಯಾಚಿಸದೆ ಸುಮಲತಾರನ್ನು ಬೆಂಬಲಿಸಿ ಎಂದು ಕರೆ ನೀಡಿದ್ದು, ಇದು ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲುವ ಮುನ್ಸೂಚನೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಬಿಜೆಪಿಯ ಹಿರಿಯ ಮುಖಂಡ ಎಂ.ಬಿ.ದೇವಯ್ಯ ಅವರ ವಿರುದ್ಧವೇ ಈ ಹಿಂದೆ ಪ್ರತಾಪ ಸಿಂಹ ಅವರು ದರ್ಪ ತೋರಿದ್ದರು ಎಂದು ಆರೋಪಿಸಿದ ಅವರು, ಈ ಕ್ಷೇತ್ರದ ಉಳಿದ ಜನಸಾಮಾನ್ಯರ ಸ್ಥಿತಿ ಹೇಗಿರಬಹುದು ಎಂದು ಪ್ರಶ್ನಿಸಿದರು. ಸಂಸದರ ದರ್ಪದ ವರ್ತನೆಗೆ ಯಾವ ರೀತಿಯ ಉತ್ತರ ನೀಡಬೇಕೆನ್ನುವುದನ್ನು ಜನ ನಿರ್ಧರಿಸಲಿದ್ದಾರೆ ಎಂದು ಸೂರಜ್ ತಿಳಿಸಿದರು. 

ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಯ್ಯಾ ಅಬ್ರಾರ್ ಮಾತನಾಡಿ, ಪ್ರಧಾನಿ ಮೋದಿ ಅವರು, ಸುಮಲತಾ ಬಗ್ಗೆ ಕಾಳಜಿ ತೋರುವ ಮೊದಲು ತಮ್ಮ ತಾಯಿ ಮತ್ತು ಪತ್ನಿಗೆ ನ್ಯಾಯ ನೀಡಲಿ ಎಂದು ಒತ್ತಾಯಿಸಿದರು. ಮೈಸೂರಿನಲ್ಲಿ ಪ್ರತಾಪ ಸಿಂಹ ಪರ ಪ್ರಧಾನಿ ಮತ ಯಾಚಿಸಿಲ್ಲ. ಅಲ್ಲದೆ, ಅಭಿವೃದ್ಧಿ ಪರ ಚಿಂತನೆಯೂ ಅವರ ಭಾಷಣದಲ್ಲಿ ಇರಲಿಲ್ಲ. ಕೊಡಗಿನ ಮಹಿಳೆಯರು ಬುದ್ಧಿವಂತರಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಈ ಬಾರಿ ಮತದಾನ ಮಾಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ದೇಶದಲ್ಲಿ ಅಭಿವೃದ್ಧಿ ಮುಖ್ಯವೇ ಹೊರತು ಜಾತಿಯಲ್ಲ. ಮಹಿಳೆಯಯರ ಸಂಕಷ್ಟಕ್ಕೆ ಸ್ಪಂದಿಸುವ ಸರ್ಕಾರ ಈ ದೇಶಕ್ಕೆ ಬೇಕಾಗಿದೆ ಎಂದರು. 

ಕಾಂಗ್ರೆಸ್ ನಗರಾಧ್ಯಕ್ಷ ಕೆ.ಯು.ಅಬ್ದುಲ್ ರಝಾಕ್ ಮಾತನಾಡಿ, ಎನ್‍ಡಿಎ ನೇತೃತ್ವದ ಸರ್ಕಾರ ದೇಶಕ್ಕೆ ಅಚ್ಛೇ ದಿನ್ ಬರಲಿದೆಯೆಂದು ಭರವಸೆ ನೀಡಿತ್ತು. ಅಲ್ಲದೆ, ಪ್ರತಿಯೊಬ್ಬರ ಖಾತೆಗೆ ತಲಾ 15 ಲಕ್ಷ ರೂ. ಹಣವನ್ನು ಹಾಕುವುದಾಗಿ ಹೇಳಿತ್ತು. ಆದರೆ ಯುಪಿಎ ಸರ್ಕಾರದ ಅವಧಿಯಲ್ಲಿ 420 ರೂ. ಇದ್ದ ಅಡುಗೆ ಅನಿಲದ ಸಿಲಿಂಡರ್ ಬೆಲೆ 840ಕ್ಕೆ ಏರಿಕೆಯಾಗಿದೆ, ತೈಲೋತ್ಪನ್ನಗಳ ಬೆಲೆಯೂ ಗಗನಕ್ಕೇರಿದೆ. ವಾಹನಗಳ ವಿಮಾ ಹಣ ದುಬಾರಿಯಾಗಿದೆ. ಇದು ಅಚ್ಛೇ ದಿನವೇ ಎಂದು ಅಬ್ದುಲ್ ರಝಾಕ್ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಉಪಾಧ್ಯಕ್ಷ ಅಬ್ದುಲ್ ರಹೀಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News