ಪ್ರಧಾನಿ ಮೋದಿ ರಫೇಲ್ ಹಗರಣದಲ್ಲಿ ಜೈಲು ಪಾಲಾಗುವುದು ನಿಶ್ಚಿತ: ದಿನೇಶ್ ಗುಂಡೂರಾವ್

Update: 2019-04-10 13:44 GMT

ದಾವಣಗೆರೆ: ಪ್ರಧಾನಿ ಮೋದಿ ಅವರು ರಫೇಲ್ ಹಗರಣದಲ್ಲಿ ಜೈಲು ಪಾಲಾಗುವುದು ನಿಶ್ಚಿತ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಫೇಲ್‍ ಹಗರಣದಲ್ಲಿ ಮೋದಿ ಅವರು ಮಧ್ಯವರ್ತಿ ಪಾತ್ರ ವಹಿಸಿ, ತಮ್ಮ ಆಪ್ತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ರಫೇಲ್ ಹಗರಣ ಮತ್ತೆ ತನಿಖೆಗೆ ಸುಪ್ರೀಂ ಕೋರ್ಟ್ ಮುಂದಾಗಲಿದ್ದು, ಮೋದಿ ತಪ್ಪಿತಸ್ಥರೆಂದು ಸಾಬೀತಾಗಿ ಜೈಲು ಪಾಲಾಗಲಿದ್ದಾರೆ. ರಫೇಲ್ ದೇಶದ ಅತೀ ದೊಡ್ಡ ಭ್ರಷ್ಟಾಚಾರದ ಹಗರಣ ಇದು. ಇದನ್ನು ಮುಚ್ಚಿ ಹಾಕಲು ದಾಖಲೆ ಕಳುವಾಗಿದೆಯೆಂಬ ಹೇಳಿಕೆ ಕೇಂದ್ರ ನೀಡಿದ್ದು ದುರಂತ ಎಂದರು. 

ರಕ್ಷಣಾ ದಾಖಲೆಗಳನ್ನೇ ರಕ್ಷಿಸಲಾಗದ ದೇಶದ ಚೌಕಿದಾರ ಮೋದಿ ಕುರಿತಂತೆ ಆಂಗ್ಲ ಪತ್ರಿಕೆಯೊಂದರಲ್ಲಿ ಬಂದ ವರದಿ ಮೋದಿ ನಿಜ ಬಣ್ಣ ಕಳಚಿದೆ. ರಾಜ್ಯದಲ್ಲಿ ಪ್ರಚಾರ ಮಾಡುವ ಭರದಲ್ಲಿ ಮೋದಿ ಮತ್ತೆ ಸೇನೆ, ಯೋಧರ ಹೆಸರನ್ನು ಪ್ರಸ್ತಾಪಿಸುವ ಮೂಲಕ ಕೇಂದ್ರ ಚುನಾವಣಾ ಆಯೋಗದ ಆದೇಶವನ್ನೇ ಉಲ್ಲಂಘಿಸಿದ್ದಾರೆ.ಈ ಬಗ್ಗೆ ಆಯೋಗಕ್ಕೆ ನಾವು ದೂರು ನೀಡಲಿದ್ದೇವೆ ಎಂದು ತಿಳಿಸಿದರು.

ವಿಪಕ್ಷ ನಾಯಕರು, ಮುಖಂಡರು, ಬೆಂಬಲಿಗರಲ್ಲಿ ಭಯ ಹುಟ್ಟು ಹಾಕಲು ಆದಾಯ ತೆರಿಗೆ ಇಲಾಖೆಯನ್ನೇ ಅಸ್ತ್ರವಾಗಿ ಮೋದಿ ಬಳಸುತ್ತಿದ್ದು, ಬಿಜೆಪಿಯ ಒಂದು ಶಾಖೆಯಾಗಿ, ವಿಭಾಗವಾಗಿ ಐಟಿ, ಇಡಿ, ಸಿಬಿಐ ಕೆಲಸ ಮಾಡುತ್ತಿವೆ. ಅಲ್ಲದೆ, ಚುನಾವಣಾ ಆಯೋಗವನ್ನೇ ಮೋದಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಆಯೋಗವೂ ಒಂದು ರೀತಿ ವಿಶ್ವಾಸ ಕಳೆದುಕೊಳ್ಳುತ್ತಿದೆ ಎಂದು ದೂರಿದ ಅವರು, ಮೋದಿ ಕೇವಲ ಭ್ರಮೆ ಸೃಷ್ಟಿಸಿ, ಮತ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅದ್ಯಾವುದೂ ಫಲ ನೀಡುವುದಿಲ್ಲ ಎಂದರು. 

ಅಭಿವೃದ್ಧಿ ಕಾರ್ಯಗಳಿಂದ ಜನರ ಮುಂದೆ ಬರದ ಮೋದಿ ಕೇವಲ ಭಾವನೆ ಕೆರಳಿಸುವ ಮೂಲಕ ಮತ ಕೇಳುತ್ತಿದ್ದಾರೆ. ರಾಜ್ಯದ 28 ಕ್ಷೇತ್ರಗಳ ಪೈಕಿ ಒಂದೇ ಒಂದು ಕ್ಷೇತ್ರದಲ್ಲೂ ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಬಿಜೆಪಿ ಟಿಕೆಟ್ ನೀಡಿಲ್ಲ. ಇದು ಸಾಮಾಜಿಕ ನ್ಯಾಯಕ್ಕೆ ವಿರೋಧವಾಗಿದೆ ಎಂದು ಹೇಳಿದರು.  

ಮೋದಿ ತಮ್ಮ ಪಕ್ಕ ಭ್ರಷ್ಟ ರಾಜಕಾರಣಿ ಯಡಿಯೂರಪ್ಪರನ್ನು ಕೂರಿಸಿಕೊಂಡು ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ. 5 ವರ್ಷದಲ್ಲಿ ಒಂದೇ ಒಂದು ಸುದ್ದಿಗೋಷ್ಟಿ ನಡೆಸಿಲ್ಲ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಪ್ರತಿವರ್ಷ ಪತ್ರಿಕಾಗೋಷ್ಠಿ ಕರೆದು ದೇಶದ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚಿಸುತ್ತಿದ್ದರು ಎಂದರು.

ಮೂರು ಬಾರಿ ಸಂಸದರಾದರೂ ಜಿ.ಎಂ.ಸಿದ್ದೇಶ್ವರ ಕ್ಷೇತ್ರಕ್ಕೆ ಹೇಳಿಕೊಳ್ಳುವಂತಹ, ಗುರುತರ ಅಭಿವೃದ್ಧಿ ಕೆಲಸ ಮಾಡಿಲ್ಲ. ಜಿಲ್ಲೆ ಅಭಿವೃದ್ಧಿಗೂ ಒತ್ತು ನೀಡಿಲ್ಲ. ಕೇಂದ್ರ ಸಚಿವರಾಗಿದ್ದಾಗಲೂ ಇಲ್ಲಿಗಾಗಲೀ, ರಾಜ್ಯಕ್ಕಾಗಲೀ ಇಲ್ಲಿನ ಸಂಸದ ಸಿದ್ದೇಶ್ವರ್ ಯಾವುದೇ ಕೊಡುಗೆ ನೀಡಲಿಲ್ಲ. ಜನರ ಸಮಸ್ಯೆಗೂ ಸ್ಪಂದಿಸಲಿಲ್ಲ ಎಂದು ಅವರು ದೂರಿದರು.  

ಗೋಷ್ಠಿಯಲ್ಲಿ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್‍ನ ಎಚ್.ಬಿ.ಮಂಜಪ್ಪ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಗಣೇಶ ಟಿ.ದಾಸಕರಿಯಪ್ಪ, ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ, ಬಲ್ಕೀಶ್ ಬಾನು, ಹಿರಿಯ ಮುಖಂಡ ಸೈಯದ್ ಸೈಫುಲ್ಲಾ, ಪಿ.ರಾಜಕುಮಾರ, ಅಯೂಬ್ ಪೈಲ್ವಾನ್, ಎಸ್.ಮಲ್ಲಿಕಾರ್ಜುನ, ಎ.ನಾಗರಾಜ ಇದ್ದರು. 

"ಸುಮಲತಾ ಅವರು ಬಿಜೆಪಿ ಅಭ್ಯರ್ಥಿ ಎಂಬುದು ಸ್ಪಷ್ಟ"

ಪ್ರಧಾನಿ ಮೋದಿ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಕುರಿತು ಹೇಳಿಕೆ ನೀಡಿರುವುದು ಸುಮಲತಾ ಅವರು ಬಿಜೆಪಿ ಅಭ್ಯರ್ಥಿ ಎಂಬುದು ಸ್ಪಷ್ಟವಾಗಿದೆ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಹೇಳಿದರು.

ಪ್ರಧಾನಿ ಮೋದಿ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಬಗ್ಗೆ ಮಾತನಾಡಿದ್ದನ್ನು ಗಮನಿಸಿದರೆ ಸುಮಲತಾ ಬಿಜೆಪಿ ಅಭ್ಯರ್ಥಿ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಜೆಡಿಎಸ್‍ನ ನಿಖಿಲ್ ಕುಮಾರಸ್ವಾಮಿ ಭಾರೀ ಮತಗಳ ಅಂತರದಲ್ಲಿ ಜಯ ಸಾಧಿಸಲಿದ್ದು, ಅಲ್ಲಿ ಮೈತ್ರಿ ಪಕ್ಷದ ಗೆಲುವು ನಿಶ್ಚಿತ.  ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಕೆಲಸ ಮಾಡಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಪಕ್ಷ ಅದನ್ನು ಸಹಿಸಲ್ಲ. ಈಗಾಗಲೇ ಐವರನ್ನು ಪಕ್ಷದಿಂದಲೇ ಉಚ್ಛಾಟಿಸಿದ್ದೇವೆ. ಇದೇ ಪುನರಾವರ್ತನೆಯಾದರೆ ಅಂತಹವರಿಗೆ ಪಕ್ಷದ ಹುದ್ದೆಗಳಿಂದಲೇ ಕಿತ್ತಾಕಲಾಗುವುದು ಎಂದರು.

ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲ್ಲುವುದಂತೂ ನಿಶ್ಚಿತ. ಕಾಂಗ್ರೆಸ್ ಪಕ್ಷ ಮೈತ್ರಿ ಧರ್ಮ ಪಾಲಿಸಲಿದ್ದು, ಪಕ್ಷ ವಿರೋಧಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ ಎಂದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News