ಬ್ರಿಟಿಷರ ಗುಂಡಿಗೆ ಎದೆ ಒಡ್ಡಿದವರಿಗೆ ಮೋದಿ ದೇಶಭಕ್ತಿ ಹೇಳಿ ಕೊಡುತ್ತಾರೆಯೇ: ಮಾಜಿ ಸಚಿವ ಎಚ್.ಕೆ.ಪಾಟೀಲ್
ಬಾಗಲಕೋಟೆ, ಎ. 10: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅರೇಂಜ್ಡ್ ಮ್ಯಾರೇಜು ಹೌದು, ಇದೊಂದು ರೀತಿ ಹಳ್ಳಿ ಲವ್. ಹೀಗಾಗಿ ಹೆಚ್ಚೇನು ಸಮಸ್ಯೆ ಆಗುವುದಿಲ್ಲ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಬುಧವಾರ ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿಯಲ್ಲಿ ಗೊಂದಲಗಳಿವೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಮ್ಮೆ ಬಂದು ಹೋದರೆ ಅದೆಲ್ಲವೂ ಸರಿಹೋಗುತ್ತದೆ. ಅಲ್ಲದೆ, ರಾಜ್ಯದ ಮುಖಂಡರು ಕೂತು ಮಾತುಕತೆ ಮೂಲಕ ಪರಿಹರಿಸಲಿದ್ದಾರೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಯಾವುದೇ ಒಳ ಹೊಡೆತ ಕೊಡುವುದಿಲ್ಲ. ಅವರು ಅಣ್ಣ-ತಮ್ಮಂದಿರ ರೀತಿ ಪ್ರೀತಿಯಿಂದ ಇದ್ದಾರೆ. ಒಳ ಹೊಡೆತ ಒಳ ಏಟು ಏನಿಲ್ಲ. ಇದೆಲ್ಲಾ ಚುನಾವಣೆ ಮುಗಿದು ಫಲಿತಾಂಶ ಬಂದ ಬಳಿಕೆ ನಿಮಗೆಲ್ಲಾ ತಿಳಿಯುತ್ತದೆ ಎಂದರು.
ಪಾಕಿಸ್ತಾನಕ್ಕೆ ತೊಂದರೆಯಾದರೆ ದೋಸ್ತಿಗಳಿಗೆ ಕಣ್ಣೀರು ಎಂಬ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಎಚ್.ಕೆ.ಪಾಟೀಲ್, ಇದು ಕೆಳಮಟ್ಟದ ವ್ಯಕ್ತಿ ಮಾತನಾಡುವ ಮಾತುಗಳು. ವಂದೇ ಮಾತರಂ ಎಂದು ಬ್ರಿಟಿಷರ ಗುಂಡಿಗೆ ಎದೆಯನ್ನು ಒಡ್ಡಿದ ಕಾಂಗ್ರೆಸ್ಸಿಗರಿಗೆ ದೇಶಭಕ್ತಿ ಹೇಳಿ ಕೊಡುತ್ತಾರೆಯೇ ಎಂದರು.
ದೇಶಭಕ್ತಿಯನ್ನು ಹೊಂದಿರುವ ಪ್ರಧಾನಿ ಮೋದಿ ಪುಲ್ವಾಮಾ ದಾಳಿಯಾಗಿ ಗಂಟೆಗಳ ಮೇಲೆ ಅದರ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ. ಇಂತಹ ಉದಾಸೀನದ ಹಾಗೂ ವಚನಭ್ರಷ್ಟ ಪ್ರಧಾನಿ ನಮಗೆ ತಿಳುವಳಿಕೆ ಹೇಳಲು ಅರ್ಹರಲ್ಲ ಎಂದರು.
ಕಾಂಗ್ರೆಸ್ಸಿನ ಪ್ರಣಾಳಿಕೆಯನ್ನು ನೋಡಿದ ನಂತರ ಬಿಜೆಪಿಯವರಿಗೆ ಭಯ ಆರಂಭವಾಗಿದೆ. ಅದಕ್ಕಾಗಿಯೆ ಕಾಂಗ್ರೆಸ್ ರೀತಿ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದ್ದಾರೆ. ಪ್ರಜಾಪ್ರಭುತ್ವದ ದೇಶದ ಪ್ರಧಾನಿ ಮೋದಿ 5 ವರ್ಷಗಳಲ್ಲಿ ಒಂದೂ ಪತ್ರಿಕಾಗೋಷ್ಠಿಯನ್ನೂ ನಡೆಸಿಲ್ಲ. ಕೇವಲ ಪ್ರಾಯೋಜಿಗೋಷ್ಠಿಯನ್ನು ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಅನಂತಕುಮಾರ್ ಹೆಗಡೆ ಸೇರಿದಂತೆ ಹಲವು ಮುಖಂಡರು ಸಂವಿಧಾನ ಬದಲಿಸುತ್ತೇವೆ. ಸಂವಿಧಾನ ಕಿತ್ತು ಹಾಕುತ್ತೇವೆಂದು ಹೇಳಿಕೆಯನ್ನು ನೀಡುತ್ತಿದ್ದಾರೆ. ಪ್ರಜಾಪ್ರಭುತ್ವದ ಮೂಲ ಆಧಾರಸ್ತಂಭವಾದ ಸಂವಿಧಾನವನ್ನು ಕಿತ್ತು ಹಾಕುವ ಮಹಾಪರಾಧ ಮಾಡಲಿಕ್ಕೆ ಬಿಜೆಪಿಯವರು ಹೊರಟಿದ್ದಾರೆಂದು ಆರೋಪಿಸಿದರು.
ರಾಜಸ್ತಾನ ರಾಜ್ಯಪಾಲ ನಾನು ಬಿಜೆಪಿ ಕಾರ್ಯಕರ್ತ ಎನ್ನುತ್ತಾರೆ. ರಾಜ್ಯಪಾಲರಾಗಿ ಈ ರೀತಿ ಹೇಳುವುದು ಸಂವಿಧಾನಕ್ಕೆ ಮಾಡುವಂತಹ ಅಪಚಾರ. ಇಂತಹ ವ್ಯಕ್ತಿ ಆ ಸ್ಥಾನದಲ್ಲಿರಲು ನಾಲಾಯಕ್. ಈ ವಿಚಾರದಲ್ಲಿ ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸಂಕಲ್ಪ ಪ್ರಣಾಳಿಕೆಗೆ ಕಿಮ್ಮತ್ತಿನ ಬೆಲೆಯಿಲ್ಲ. ಆ ಪ್ರಣಾಳಿಕೆ ಬಗ್ಗೆ ಎಲ್ಲರೂ ಅಪಹಾಸ್ಯ ಮಾಡುತ್ತಿದ್ದಾರೆ. ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದೀರಿ, ರಾಮಮಂದಿರ ಇದುವರೆಗೂ ಯಾಕೆ ಮಾಡಲಿಲ್ಲಾ? ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಆದರೆ ಅದರ ಬಗ್ಗೆ ತುಟಿಯನ್ನು ಬಿಚ್ಚದ ಪ್ರಧಾನಿ ವಿಪಕ್ಷಗಳಿಗೆ ಬುದ್ಧಿ ಹೇಳಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.