ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ: ಯಡಿಯೂರಪ್ಪ

Update: 2019-04-10 13:17 GMT

ಕಡೂರು,ಎ.10: ಹಣಬಲ ಮತ್ತು ಜಾತಿ ಬಲದ ಮೂಲಕ ಕುಟುಂಬ ರಾಜಕಾರಣ ಮಾಡುವವರನ್ನು ವಿಮುಕ್ತಿಗೊಳಿಸುವ ಸದಾವಕಾಶವನ್ನು ಬಳಿಸಿಕೊಂಡು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದರು.

ಅವರು ಬುಧವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಬಿಜೆಪಿ ಅಭ್ಯರ್ಥಿ ಎ. ಮಂಜು ಪರವಾಗಿ ಚುನಾವಣಾ ಪ್ರಚಾರದ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಅಧಿಕಾರಕ್ಕೆ ಬಂದು 24 ಗಂಟೆಯೊಳಗೆ ರೈತರ ಸಾಲ ಸಂಪೂರ್ಣ ಮನ್ನಾ ಮಾಡುತ್ತೇನೆ ಎಂದು ಹೇಳಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಏನು ಮಾಡಿದರು? ಸಾಲ ಮನ್ನಾ ಆಗಿದೆ ಎನ್ನುವವರಿಗೆ ಬ್ಯಾಂಕ್‍ಗಳಿಂದ ರೈತರಿಗೆ ನೋಟಿಸ್ ಬರುತ್ತಿರುವುದು ಗೊತ್ತಿಲ್ಲವೇ? ರಾಜ್ಯದಲ್ಲಿ ವರ್ಗಾವಣೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ರಾಜ್ಯದ ಬೊಕ್ಕಸವನ್ನು ಲೂಟಿ ಮಾಡಲಾಗುತ್ತಿದೆ. ಅದನ್ನು ತಡೆಯುವರಿಲ್ಲ. ಈ ರಾಜ್ಯ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನರೇಂದ್ರ ಮೋದಿಯವರು ಸಣ್ಣ ರೈತರಿಗೆ ಮಾಸಾಶನ ನೀಡುವ ಯೋಜನೆ ಅನುಷ್ಠಾನಗೊಳಿಸಿದ್ದು ಅದನ್ನು ಎಲ್ಲಾ ರೈತರಿಗೂ ವಿಸ್ತರಿಸುವ ಭರವಸೆ ನೀಡಿದ್ದಾರೆ. ದೇಶ ಸುಭದ್ರತೆಯ ರಕ್ಷಣೆಯ ವಿಷಯದಲ್ಲಿ ಮೋದಿಯವರ ದಿಟ್ಟ ನಿರ್ಧಾರಗಳು ಪ್ರತಿ ಭಾರತೀಯರಿಗೂ ಹೆಮ್ಮೆ ತಂದಿದೆ. ಮುನ್ನೂರಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಮೋದಿ ಅವರು ಮತ್ತೊಮ್ಮೆ ಭಾರತದ ಪ್ರಧಾನಿ ಆಗುತ್ತಾರೆ ಎಂಬುದು ಸೂರ್ಯಚಂದ್ರರಷ್ಟೇ  ಸತ್ಯದ ಮಾತು ಎಂದು ಹೇಳಿದರು.

ದೇವೇಗೌಡರು, ಕುಮಾರಸ್ವಾಮಿ ಮತ್ತು ರೇವಣ್ಣ ಅವರ ಕುಟುಂಬಗಳಿಗೆ ನೆಲೆ ಕಲ್ಪಿಸುವ ಕುಟುಂಬ ರಾಜಕಾರಣವನ್ನು ತಿರಸ್ಕರಿಸುವ ಸದವಕಾಶ ನಿಮ್ಮ ಮುಂದೆ ಇದೆ. ದೇಶದ ಆರ್ಥಿಕ ಪರಿಸ್ಥಿತಿ ಸರಿದಾರಿಗೆ ತಂದ ಮೋದಿ ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕನಾಗಿ ಹೊರಹೊಮ್ಮಿದ್ದಾರೆ. ನಿಮ್ಮ ಒಂದೊಂದು ಮತವು ದೇಶ ರಕ್ಷಣೆಗಾಗಿ ನರೇಂದ್ರ ಮೋದಿಯವರಿಗೆ ನೀಡುತ್ತಿರುವ ಬೆಂಬಲ ಎಂದು ಜನತೆ ಅರಿಯಬೇಕಿದೆ ಎಂದರು.

ಕುತಂತ್ರದ ರಾಜಕಾರಣದ ಮೂಲಕ ತಮ್ಮ ಮಗನ ಗೆಲುವಿಗಾಗಿ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯ ಸುಮಲತಾ ಅಂಬರೀಷ್‍ನ ಮಹಿಳೆಗೆ ಸಾಕಷ್ಟು ಅಪಪ್ರಚಾರ ನಡೆಸುವ ವ್ಯಕ್ತಿಗಳನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.

ಅಭ್ಯರ್ಥಿ ಎ. ಮಂಜು ಮಾತನಾಡಿ, ಜಿಲ್ಲೆಯಲ್ಲಿ ಕುಟುಂಬ ರಾಜಕಾರಣವನ್ನು ಮಲಗಿಸಿ ಅಭಿವೃದ್ದಿಯ ರಾಜಕಾರಣವನ್ನು ಮುನ್ನೆಡೆಸುವ ನಿಟ್ಟಿನಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿದ್ದೇನೆ. ದೇಶದ ಪ್ರತಿಯೊಂದು ಮೂಲೆಯಲ್ಲೂ ಈ ಬಾರಿ ಮತ್ತೊಮ್ಮೆ ಮೋದಿ ಎಂಬುದು ಜನತೆ ಅರಿತಿದ್ದಾರೆ. ಕಡೂರು ಕ್ಷೇತ್ರದಲ್ಲಿ 71 ಸಾವಿರಕ್ಕಿಂತಲೂ ಹೆಚ್ಚು ಮತಗಳ ಅಂತರದಲ್ಲಿ ಮತ ನೀಡುವ ಮೂಲಕ ಮೋದಿಯವರೊಂದಿಗೆ ಕೈ ಬಲಪಡಿಸಲು ಆರ್ಶೀವದಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಬೆಳ್ಳಿಪ್ರಕಾಶ್ ಸ್ವಾಗತಿಸಿದರು. ಕಾಂಗ್ರೆಸ್‍ನ ಜಿ.ಪಂ. ಸದಸ್ಯ ಕೆ.ಆರ್. ಮಹೇಶ್‍ಒಡೆಯರ್ ಮತ್ತು ಜೆಡಿಎಸ್ ಜಿ.ಪಂ. ಸದಸ್ಯೆ ಕಾವೇರಿಲಕ್ಕಪ್ಪ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಶಾಸಕರಾದ ಡಿ.ಎಸ್. ಸುರೇಶ್, ಪ್ರೀತಂಗೌಡ, ಹಾಸನ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ, ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಮುಖಂಡರಾದ ಬೀರೂರುದೇವರಾಜ್, ಶಂಕರಮೂರ್ತಿ, ನಗರಘಟಕದ ಅಧ್ಯಕ್ಷ ಕೆ.ಬಿ. ಸೋಮೇಶ್, ಚಿಕ್ಕನಲ್ಲೂರು ನವೀನ್, ಚಿಕ್ಕಪಟ್ಟಣಗೆರೆ ನಾಗರಾಜ್, ಬಂಕ್‍ಮಂಜು, ಎ. ಮಣಿ, ಜಿಗಣೇಹಳ್ಳಿ ಮಂಜು, ಸುನೀತಾಜಗದೀಶ್, ಸವಿತಾಸತ್ಯನಾರಾಯಣ್, ರೇಷ್ಮಾ, ಸವಿತಾರಮೇಶ್, ಮಾಲಿನಿಬಾಯಿರಾಜಾನಾಯ್ಕ ಮತ್ತಿತರಿದ್ದರು.

ಭಾರತದ ಏಕತೆಯೊಂದಿಗೆ ದೇಶದ ಸುಭದ್ರೆತೆ ಕಾಪಾಡಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬುದು ಜಗತ್ತಿನ ಆಪೇಕ್ಷೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಶ್ಮೀರ ಸಮಸ್ಯೆಗೆ ಬಿಜೆಪಿಯಿಂದಲೇ ಪರಿಹಾರ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಜಗತ್ತಿನಲ್ಲಿ ಭಾರತ ಮುಂದುವರೆದ ರಾಷ್ಟ್ರ ಆಗಬೇಕು ಎಂಬ ಸಂಕಲ್ಪ ಮೋದಿ ತೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಇಡೀ ದೇಶವೇ ಮೋದಿ ಬೆನ್ನಿಗೆ ನಿಂತಿದೆ ಎಂದರು.

ಭಾರತ ಆರ್ಥಿಕವಾಗಿ ಅಮೇರಿಕಾ, ಚೀನಾ ಮೀರಿಸಿ ಮುನ್ನುಗ್ಗುತ್ತಿದೆ. ಭಾರತ ಪ್ರಪಂಚದ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಬೇಕು ಎಂಬುದು ಮೋದಿ ಬಯಕೆ ಇದನ್ನು ಮೋದಿ ಈಡೇರಿಸಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News