ಉಡುಪಿ ವಿಧಾನಸಭಾ ಕ್ಷೇತ್ರದ ಮಾದರಿಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ಮಾದರಿ ಮಾಡುತ್ತೇನೆ: ಪ್ರಮೋದ್ ಮಧ್ವರಾಜ್

Update: 2019-04-10 13:21 GMT

ಕಡೂರು,ಎ.10: ಈ ಬಾರಿ ನನ್ನನ್ನು ಸಂಸದನಾಗಿ ಗೆಲ್ಲಿಸಿದರೆ ಉಡುಪಿ ವಿಧಾನಸಭಾ ಕ್ಷೇತ್ರದ ಮಾದರಿಯಲ್ಲೇ ಉಡುಪಿ ಚಿಕ್ಕಮಗಳೂರು ಸಂಸತ್ ಕ್ಷೇತ್ರವನ್ನು ಮಾದರಿ ಮಾಡುತ್ತೇನೆ ಎಂದು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್‍ ತಿಳಿಸಿದರು.

ಅವರು ಮಂಗಳವಾರ ರಾತ್ರಿ ತಾಲೂಕಿನ ದೇವನೂರು ಗ್ರಾಮದಲ್ಲಿ  ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡಿ, ಕ್ಷೇತ್ರಕ್ಕೆ ಬಾರದೆ ಬರಿ ಬೇರೆ ರಾಜ್ಯಗಳಿಗೆ ತಿರುಗಾಡುತ್ತ ಚುನಾವಣೆ ಬಂದಾಗ ಮಾತ್ರ ಕ್ಷೇತ್ರಕ್ಕೆ ಬರುವ ಬಿಜೆಪಿ ಅಭ್ಯರ್ಥಿ ನಿಮಗೆ ಬೇಕಾ ಅಥವಾ ನಿಮ್ಮ ಕಷ್ಟಗಳನ್ನು ಅರಿತು ನಿಮ್ಮ ಜೊತೆ ಒಬ್ಬನಾಗಿರುವ ಪ್ರಮೋದ್ ಬೇಕಾ ಎಂಬುದನ್ನು ನೀವೇ ನಿರ್ಧರಿಸಬೇಕಿದೆ ಎಂದರು.

ಬರಿ ಮೋದಿ ನೋಡಿ ಮತ ಹಾಕುವುದಾದರೆ ಇವರು ಏಕೆ ಬೇಕು? ಇಲ್ಲಿನ ರೈತರ ಕಷ್ಟಗಳನ್ನು ಸಾರ್ವಜನಿಕರ ಕಷ್ಟಗಳನ್ನು ಕೇಳುವವರ್ಯಾರು? ಬರಿ ಐದು ವರ್ಷಗಳ ಕಾಲ ದೇಶ ಸುತ್ತಿದರೆ ಕ್ಷೇತ್ರದ ಅಭಿವೃದ್ಧಿ ಹೇಗೆ ಆಗುತ್ತದೆ. ಮಲೆನಾಡಿನ ಜ್ವಲಂತ ಸಮಸ್ಯೆಗಳು ಹಾಗೂ ಅರೆಮಲೆನಾಡಿನ ಸಮಸ್ಯೆಗಳನ್ನು ಕೇಳುವವರ್ಯಾರು. ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ನಾವೆಲ್ಲರೂ ಮೂಲೆಗುಂಪಾಗಬೇಕಾಗುತ್ತದೆ. ಇದಕ್ಕೆಲ್ಲಾ ಪರಿಹಾರ ಸಿಗಬೇಕಾದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತ ನನ್ನನ್ನು ನೀವು ಗೆಲ್ಲಿಸಿದರೆ ಮಾತ್ರ ಸಾಧ್ಯ. ನಾನು ಅವರಂತೆ ಬೆಂಗಳೂರಿನ ವಿಳಾಸದಲ್ಲಿಲ್ಲ. ನಾನು ಗೆದ್ದಲ್ಲಿ ಚಿಕ್ಕಮಗಳೂರಿನಲ್ಲಿ ಮತ್ತು ಉಡುಪಿಯಲ್ಲಿಯೂ ಮನೆಗಳನ್ನು ಮಾಡಿ ಸಾರ್ವಜನಿಕರ ಅಹವಾಲನ್ನು ಆಲಿಸಿ ಉಡುಪಿಯ ಮಾದರಿಯಂತೆ ಈ ಕ್ಷೇತ್ರವನ್ನೂ ದೇಶದಲ್ಲಿಯೇ ಮಾದರಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿಶಾಂತೇಗೌಡ ಮಾತನಾಡಿ, ಯಾವ ಮುಖ ಇಟ್ಟು ಬಿಜೆಪಿಯವರು ಮತ ಕೇಳಲು ಬರುತ್ತಾರೆ. ಹಾಲಿ ಸಂಸದೆ ಗೆದ್ದ ನಂತರ ಕ್ಷೇತ್ರಕ್ಕೆ ಬಾರದೆ ಬೇರೆ ಕ್ಷೇತ್ರಗಳಿಗೆ ಹೋಗಿ ಕೋಮುಗಲಭೆಗಳನ್ನು ಮಾಡಿಸಿ ಬೆಂಕಿ ಹಚ್ಚುವ ಕೆಲಸವನ್ನು ಮಾಡುವುದನ್ನು ಬಿಟ್ಟರೆ ಯಾವ ಅಭಿವೃದ್ಧಿಯೂ ಆಗಿಲ್ಲ. ಸಾರ್ವಜನಿಕರು ಕುಡಿಯುವ ನೀರನ್ನು ಕೇಳಿದರೆ ಇದು ನನ್ನ ಕೆಲಸವಲ್ಲ. ಇದು ತಾಪಂ. ಮತ್ತು ಜಿಪಂ. ಗಳ ಕೆಲಸ ಎಂದು ಹೇಳುತ್ತಾರೆ. ಹಾಗಾದರೆ ಇವರ ಕೆಲಸವೇನು. ಈ ಬಾರಿ ಮತದಾರರೇ ತಕ್ಕ ಪಾಠ ಕಲಿಸಿ ಗೋಬ್ಯಾಕ್ ಶೋಭಾ ಎನ್ನುವುದನ್ನು ಸಾಬೀತು ಪಡಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಿಡಘಟ್ಟ ಗ್ರಾ.ಪಂ. ಅಧ್ಯಕ್ಷ ಸಂತೋಷ್, ನಟರಾಜ್, ಬಸವರಾಜ್, ಮಹಡಿಮನೆ ಸತೀಶ್, ಹೇಮಾವತಿ, ತಾ.ಪಂ. ಸದಸ್ಯ ಆನಂದ್‍ನಾಯ್ಕ್, ಎಸ್ ಎನ್ ಮಂಜುನಾಥ್, ಯೋಗೀಂದ್ರ, ಉಮೇಶ್, ರವಿಕುಮಾರ್ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News