ಶ್ರೀರಾಮನ ಹೆಸರಿನಲ್ಲಿ ಮತ ಕೇಳುವ ಬಿಜೆಪಿ, ಗೋಡ್ಸೆ ಬೆಂಬಲಿಸುವುದು ಯಾವ ನೀತಿ: ಮಲ್ಲಿಕಾರ್ಜುನ ಖರ್ಗೆ

Update: 2019-04-10 14:37 GMT

ಕಲಬುರ್ಗಿ, ಎ. 10: ದೇಶಭಕ್ತರಂತೆ ಬಿಂಬಿಸಿಕೊಳ್ಳುವ ಬಿಜೆಪಿಯವರು ಶ್ರೀರಾಮನ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಆದರೆ, ರಾಷ್ಟ್ರಪಿತ ಮಹಾತ್ಮಗಾಂಧಿಯನ್ನು ಕೊಲೆಗೈದ ಗೋಡ್ಸೆಯನ್ನು ಬೆಂಬಲಿಸುವುದು ಯಾವ ನೀತಿ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಹಾಗೂ ಕಲಬುರ್ಗಿ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ಬುಧವಾರ ಜಿಲ್ಲೆಯ ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಸಂವಿಧಾನದ ಮೇಲೆ ನಂಬಿಕೆ ಇಲ್ಲದ ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುವ ಮಾತನಾಡುತ್ತಿದ್ದಾರೆ.

ಸಂವಿಧಾನ ಬದಲಾವಣೆ ಮಾಡುವ ಪ್ರಯತ್ನಕ್ಕೆ ಕೈಹಾಕಿದರೆ ದೇಶದಲ್ಲಿ ರಕ್ತಕ್ರಾಂತಿಯಾಗಲಿದೆ ಎಂದು ಎಚ್ಚರಿಸಿದ ಖರ್ಗೆ, ಮೋದಿಯನ್ನು ವೈಯಕ್ತಿಕ ಟೀಕೆ ಮಾಡುತ್ತಿಲ್ಲ. ಆದರೆ ಪ್ರಧಾನಿಯಾಗಿ ಅವರು ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿನ ಮೈತ್ರಿ ಸರಕಾರ ನುಡಿದಂತೆ ನಡೆದು ರೈತರ ಸಾಲಮನ್ನಾ ಮಾಡಿದೆ. ಆದರೆ, ಮೋದಿ ಏನು ಮಾಡಿದ್ದಾರೆ? ಯಾವ ಜನಪರ ಕೆಲಸ ಮಾಡಿದ್ದಾರೆ? ಎಂದು ಪ್ರಶ್ನಿಸಿದ ಖರ್ಗೆ, ಮತದಾರರ ಆಶೀರ್ವಾದದಿಂದ ನಾನು 11 ಬಾರಿ ಗೆದ್ದಿದ್ದೇನೆ. ಇದೀಗ ನನ್ನ ಹಣೆಬರಹ ಬರೆಯುವವರು ನೀವು ಮತದಾರರು ಎಂದರು.

ಮೋದಿ, ಶಿವರಾಜ್‌ಸಿಂಗ್ ಚವ್ಹಾಣ್ ಸೇರಿದಂತೆ ಎಲ್ಲರೂ ಕಲಬುರಗಿಗೆ ಬಂದು ಮಲ್ಲಿಕಾರ್ಜುನ ಖರ್ಗೆ ಏನು ಮಾಡಿದ್ದಾರೆಂದು ಪ್ರಶ್ನಿಸುತ್ತಾರೆ. ಇನ್ನೂ ಅನೇಕರು ಬರುವವರಿದ್ದಾರೆ. ಜಾತಿ ಹೆಸರೇಳಿ ಮನೆ-ಮನೆ ತಿರುಗುವವರಿದ್ದಾರೆ. ಆದರೆ, ನಾನು ಅಭಿವೃದ್ದಿ ಕೆಲಸ ಮಾಡಿ ಮತ ಕೇಳುತ್ತಿದ್ದೇನೆಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಮಾಜಿ ಸಚಿವ ಬಾಬುರಾವ್ ಚವ್ಹಾಣ್ ಮಾತನಾಡಿ, ಮುಗ್ಧ ಲಂಬಾಣಿ ಜನಾಂಗದವರನ್ನು ಜಾತಿ ಹೆಸರಲ್ಲಿ ದಾರಿ ತಪ್ಪಿಸುತ್ತಿದ್ದಾರೆ. ನಾನು ಪ್ರಚಾರಕ್ಕೆ ಹೋದ ಕಡೆ ಬಾಡಿಗೆ ಮಂದಿ ಕಿರಿಕಿರಿ ಉಂಟು ಮಾಡುತ್ತಿದ್ದು, ಇಂತಹ ಬೆದರಿಕೆಗಳಿಗೆ ಬಗ್ಗುವುದಿಲ್ಲ ಖರ್ಗೆಯವರನ್ನು ಗೆಲ್ಲಿಸುವುದು ನಿಶ್ಚಿತ ಎಂದು ಘೋಷಿಸಿದರು. ಹಿರಿಯ ಮುಖಂಡ ಕೆ.ಬಿ.ಶಾಣಪ್ಪ, ಶಾಸಕ ಎಂ.ವೈ.ಪಾಟೀಲ್ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News