ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ಧ ತಿರುಗಿ ಬಿದ್ದ ಬ್ರಾಹ್ಮಣ ಸಭಾ

Update: 2019-04-10 15:29 GMT

ಮೈಸೂರು,ಎ.10: ಮೈಸೂರು-ಕೊಡಗು ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ದ ತಿರುಗಿ ಬಿದ್ದಿರುವ ಜಿಲ್ಲಾ ಬ್ರಾಹ್ಮಣ ಮಹಾಸಭಾವು ಮೈತ್ರಿ ಪಕ್ಷದ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವರ ಪರ ಮತ ಪ್ರಚಾರ ನಡೆಸಲಾಗುವುದು ಎಂದು ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಹಾಸಭಾದ ಅಧ್ಯಕ್ಷ ಬಿ.ಆರ್.ನಟರಾಜ್ ಜೋಯಿಸ್ ಮಾತನಾಡಿ, ಪ್ರತಾಪ್ ಸಿಂಹ ವಿರುದ್ಧ ವಾಗ್ಧಾಳಿ ನಡೆಸಿ, ಬಿಜೆಪಿ ನಾಯಕನಾಗಲು ತಾವೇನು ಪಕ್ಷದ ಕಚೇರಿ ಕಸ ಗುಡಿಸಿದ್ರಾ? ಅಥವಾ ಬಾವುಟ ಕಟ್ಟಿದ್ದೀರಾ? ಕೇವಲ ರಾತ್ರೋರಾತ್ರಿ ನಾಯಕರಾದವರು ಎಂದು ಖಾರವಾಗಿ ನುಡಿದ ಅವರು. ಪಕ್ಷ ಸಂಘಟನೆಗೆ ನಾವು ಶ್ರಮಿಸಿದ್ದೇವೆ. ಅದರೆ ನಮ್ಮ ಸಮಾಜವನ್ನೇ ಕೀಳಾಗಿ ಕಾಣುವ ತಮಗೆ ಮತ ನೀಡುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸಿದರು.

ಅಟಲ್ ಜೀ ಪ್ರಶಸ್ತಿ ಪ್ರಧಾನ ಸಮಾರಂಭ ಸೇರಿದಂತೆ ಸಮಾಜದಿಂದ ಸುಮಾರು 72 ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಪ್ರತಿಯೊಂದು ಕಾರ್ಯಕ್ರಮಕ್ಕೂ ಆಹ್ವಾನಿಸಲಾಗಿತ್ತು, ಆದರೇ ಕ್ಷೇತ್ರದಲ್ಲಿ ಇದ್ದರು ಆಗಮಿಸದ ಅವರಿಗೆ ಮತ ನೀಡಿದರೆ ಸಮಾಜಕ್ಕೆ ಅಪಮಾನ ಎಂದು ಕಿಡಿಕಾರಿ, ಸುಮಾರು 2.45 ಲಕ್ಷ ಸಮಾಜದ ಮತದಾರರಿದ್ದು. ನಮ್ಮ ಮತಗಳು ಪ್ರತಾಪ್ ಸಿಂಹರಿಗೆ ಬೀಳದಂತೆ ಎಚ್ಚರವಹಿಸಲಾಗುವುದು ಎಂದು ಹೇಳಿದರು.

ಸಭ್ಯ ಪ್ರಾಮಾಣಿಕ ಹಾಗೂ ಸಮಾಜದೊಂದಿಗೆ ಗೌರವಭಾವನೆ ಹೊಂದಿರುವ ಮೈತ್ರಿ ಪಕ್ಷದ ಅಭ್ಯರ್ಥಿ ಸಿ.ಎಚ್ ವಿಜಯಶಂಕರ್ ಗೆ ಮತ ನೀಡಬೇಕೆಂದು ಕ್ಷೇತ್ರದಲ್ಲಿ ಮಹಿಳೆಯರು ಸೇರಿದಂತೆ 22 ತಂಡಗಳನ್ನು ರಚಿಸಿಕೊಂಡು ಮನೆ ಮನೆಗೂ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಸಮಾಜ ಮುಖಂಡ ರಘುರಾಂ ವಾಜಪೇಯಿ ಅವರು ಮಾತನಾಡಿ, ಜನಿವಾರ ಹಾಕಿದೊಡನೆ ಒಂದು ಪಕ್ಷದೊಂದಿಗೆ ತಮ್ಮನ್ನು ಗುರುತಿಸುವುದು ಬೇಡ, ಪಕ್ಷಾತೀತರಾಗಿರುವ ತಮ್ಮಲ್ಲಿಯೂ ವಿವೇಚನೆಯಿದ್ದು ಈ ಬಾರಿ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವರನ್ನು ಬೆಂಬಲಿಸಲಿದ್ದೇವೆ ಎಂದು ಘೋಷಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ವಿದ್ಯಾರಣ್ಯ ಹಾಗೂ ಅನಂತ ಪ್ರಸಾದ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News