ಚೌಕಿದಾರ್ ನಾಟಕ ಈ ಚುನಾವಣೆಯಲ್ಲಿ ನಡೆಯುವುದಿಲ್ಲ: ಮೈಸೂರಿನಲ್ಲಿ ಮಾಯಾವತಿ

Update: 2019-04-10 15:23 GMT

ಮೈಸೂರು,ಎ.10: ಪ್ರಧಾನಿ ನರೇಂದ್ರ ಮೋದಿಯವರ ಚೌಕಿದಾರ್ ನಾಟಕ ಈ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದು ಬಿಎಸ್ಪಿ ನಾಯಕಿ ಮಾಯಾವತಿ ವಾಗ್ದಾಳಿ ನಡೆಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ “ಬಿಎಸ್ಪಿ ನಡಿಗೆ ಪಾರ್ಲಿಮೆಂಟ್ ಕಡೆಗೆ” ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಲೋಕಸಭಾ ಚುನಾವಣೆಯ ಬಳಿಕ ಚೌಕೀದಾರ್ ನಾಟಕ ಮುಗಿಯಲಿದೆ. ಜನರನ್ನು ಇನ್ನೂ ಹೆಚ್ಚು ದಿನ ಮರುಳು ಮಾಡಲು ಸಾಧ್ಯವಿಲ್ಲ, ಅಚ್ಚೇ ದಿನ್ ಅಚ್ಚೇ ದಿನ್ ಎಂದು ಐದು ವರ್ಷದಲ್ಲಿ ಜನರಿಗೆ ಮೋಸ ಮಾಡಲಾಯಿತು. ರೈತರಿಂದ ಹಿಡಿದು ಎಲ್ಲಾ ವರ್ಗಗಳ ಜನರಿಗೆ ಕೊಟ್ಟ ಭರವಸೆ ಹುಸಿಯಾಯಿತು. ಬರಿ ಪ್ರಚಾರದಲ್ಲಿಯೇ ತಮ್ಮ ಕಾಲಹರಣ ಮಾಡಿದರು. ಇದಕ್ಕಾಗಿ ಸಾವಿರಾರು ಕೋಟಿ ಹಣ ಖರ್ಚು ಮಾಡಿದ್ದಾರೆ ಎಂದು ಕಿಡಿಕಾರಿದರು.

ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಅತೀ ಹೆಚ್ಚು ಆಡಳಿತ ನಡೆಸಿದೆ. ಅವರು ದೇಶದ ಜನರಿಗೆ ಏನು ಮಾಡಿದರು ಎಂದು ಕೇಳಬೇಕಿದೆ. ಸರ್ಕಾರಿ ಕಚೇರಿಗಳಿಂದ ಹಿಡಿದು ಖಾಸಗಿ ಕಂಪನಿಗಳ ವರೆಗೂ ಮೀಸಲಾತಿ ಜಾರಿಮಾಡುವಲ್ಲಿ ವಿಫಲಗೊಂಡಿದ್ದಾರೆ. ಜನರನ್ನು ಕಾಂಗ್ರೆಸ್ ಕೂಡ ನಂಬಿಸಿ ಮೋಸಮಾಡಿದೆ ಎಂದು ಹರಿಹಾಯ್ದರು.

ಲೋಕಸಭ ಚುನಾವಣೆ ಬಳಿದ ಈ ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಥೆ ಮುಗಿಯಲಿದೆ. ದೇಶದ ಗದ್ಗುಗೆ ಹಿಡಿಯಲು ಬಿಎಸ್ಪಿ ಪಕ್ಷಕ್ಕೆ ಎಲ್ಲಾ ವರ್ಗಗಳ ಜನ ಬೆಂಬಲ ನೀಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ 80 ಕ್ಷೇತ್ರಗಳಿವೆ ಒಂದರಲ್ಲೂ ಬಿಜೆಪಿ ಗೆಲುವ ಸಾಧಿಸದೆ ಕ್ಲೀನ್ ಚೀಟ್ ಪಡೆಯಲಿದೆ ಎಂದ ಅವರು,  ಕರ್ನಾಟಕದಲ್ಲಿ ಸಾಕಷ್ಟು ಮಂದಿ ಬಡವರು ಅಸಾಹಯಕರು ಇದ್ದಾರೆ. ಇವರೆಲ್ಲಾ ಸಮಸ್ಯೆಗಳನ್ನು ಪರಿಹರಿಸಲು ನಾವು ದೆಹಲಿ ಗದ್ದುಗೆ ಹಿಡಿಯಬೇಕಿದೆ. ಹಾಗಾಗಿ ನಮಗೆ ನಿಮ್ಮ  ಸಹಕಾರ ಬೇಕಿದೆ. ಹಾಗಾಗಿ ನೀವು ಮೈಸೂರಿನಿಂದಲೂ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಕಳುಹಿಸಿ ಎಂದು ಮಾಯಾವತಿ ಮನವಿ ಮಾಡಿದರು.

ಚುನಾವಣಾ ಪ್ರಣಾಳಿಕೆಗಳು ಕೇವಲ ಪ್ರಣಾಳಿಕೆ ಅಷ್ಟೇ. ಬಿಎಸ್‍ಪಿ ಹೇಳಲ್ಲ ಕೆಲಸ ಮಾಡಿ ತೋರಿಸುತ್ತೆ. ನಮ್ಮದೂ ಮಾತು ಕಡಿಮೆ, ಕೆಲಸ ಹೆಚ್ಚು. ದೇಶದಲ್ಲಿ ಬಡವರಿಗೆ 6 ಸಾವಿರ ಕೊಡುತ್ತೇವೆ ಎಂದಿದ್ದಾರೆ. ಅದು ಕೂಡ ನಿಜವಾದ ರೈತರಿಗೆ ಬಡವರಿಗೆ ತಲುಪುತ್ತಿಲ್ಲ. ಇದೆಲ್ಲವೂ ಚುನಾವಣೆಯ ಗಿಮಿಕ್ ರೀತಿ ಕಾಣುತ್ತಿದೆ.

ನಮ್ಮ ಸರ್ಕಾರ ಈ ಬಾರಿ ಅಧಿಕಾರಕ್ಕೆ ಬಂದರೆ. ನಾವು ಕೂಡ ಅರೆ ಸರ್ಕಾರಿ ನೌಕರರಿಗೆ 6 ಸಾವಿರ ಕೊಡುವ ಚಿಂತನೆ ಮಾಡಿದ್ದೇವೆ. ಅದನ್ನ ಅಧಿಕಾರಕ್ಕೆ ಬಂದ ನಂತರ ಘೋಷಣೆ ಮಾಡುತ್ತೇವೆ. ಜನರಿಗೆ ಹಣ ಕೊಟ್ಟರೆ ಬಡತನ ನಿರ್ಮೂಲನೆ ಆಗಲ್ಲ. ಕಾಂಗ್ರೆಸ್-ಬಿಜೆಪಿ 2 ಪಕ್ಷಗಳು ಹಣ ಕೊಡುವ ಯೋಜನೆ ಮಾಡಿವೆ. ಬಿಎಸ್‍ಪಿ ಮಾತ್ರ ಬಡವರಿಗೆ ಉದ್ಯೋಗ ಕೊಡಲು ಪಣ ತೊಟ್ಟಿದೆ. ಇದರಿಂದ ಬಡತನ ನಿರ್ಮೂಲನೆ ಮಾಡುವ ಗುರಿ ಹೊಂದಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಬಿಎಸ್ಪಿ ರಾಜ್ಯ ನಾಯಕ ಶಾಸಕ ಎನ್.ಮಹೇಶ್, ರಾಜ್ಯಸಭಾ ಸದಸ್ಯ ಸತೀಶ್‍ಚಂದ್ರ ಮಿಶ್ರ, ಆಶೋಕ್ ಸಿದ್ದಾರ್ಥ, ಶಾಸಕ ಎಲ್.ತೋಮರ್, ಮಾಯಾವತಿ ಅವರ ತಮ್ಮನ ಮಗ ಆಕಾಶ್ ಆನಂದ್, ಬಿಎಸ್ಪಿ ರಾಜ್ಯಾಧ್ಯಕ್ಷ ಪ್ರೊ.ಹರಿರಾಮ್, ಬಿಎಸ್ಪಿ ಅಭ್ಯರ್ಥಿಗಳಾದ ಸಿ.ಎಸ್.ದ್ವಾರಕನಾಥ್, ಶಿವಕುಮಾರ್, ಡಾ.ಚಂದ್ರು, ಮೈಸೂರು ವಲಯ ಉಸ್ತುವಾರಿ ಸೋಸಲೆ ಸಿದ್ದರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಿಎಸ್ಪಿ ಸಮಾವೇಶದ ವೇದಿಕೆಗೆ ಮಾಯಾವತಿ ಆಗಮಿಸುತ್ತಿದ್ದಂತೆ ಸ್ವಾಗತ ನೃತ್ಯ ನೀಡಲಾಯಿತು. ಈ ನೃತ್ಯವನ್ನು ಕಣ್ತುಂಬಿಕೊಂಡ ಅವರು ಭಾವುಕರಾಗಿ ಕಣ್ಣೀರು ಹಾಕಿದರು.

ತಮ್ಮ ಎಂದಿನ ಶೈಲಿಯಲ್ಲಿ ವೇದಿಕೆಗೆ ಆಗಮಿಸಿದ ಮಾಯಾವತಿ ನೆರೆದಿದ್ದ ಬಿಎಸ್ಪಿ ಕಾರ್ಯಕರ್ತರತ್ತ ಕೈ ಬೀಸಿ ಎಲ್ಲರಲ್ಲೂ ಮತ್ತಷ್ಟು ಹುಮ್ಮಸ್ಸನ್ನು ನೀಡಿದರು.

ಇದೇ ವೇಳೆ ಮಾಯಾವತಿಯವರಿಗೆ ಗಂಧದ ಆನೆಯೊಂದನ್ನು ನೀಡಿ, ರೇಷ್ಮೇಹಾರ ಹಾಕಿ ಸನ್ಮಾನಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News