ಶಂಕಿತ ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ನ್ಯಾಯಾಲಯಕ್ಕೆ ಹಾಜರು

Update: 2019-04-10 15:34 GMT

ಮಡಿಕೇರಿ,ಎ.10 : ಶಂಕಿತ ನಕ್ಸಲ್ ಮುಖಂಡ ರೂಪೇಶ್‍ನನ್ನು ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. 
ಮಡಿಕೇರಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿದ್ದ ಮಂಗಳವಾರ ರಾತ್ರಿ ತಂಗಿದ್ದ ರೂಪೇಶ್‍ನನ್ನು ಕೇರಳ ಭಯೋತ್ಪಾದಕ ನಿಗ್ರಹ ದಳ, ಕೇರಳ ಪೊಲೀಸರು ಮತ್ತು ಕೊಡಗು ಪೊಲೀಸ್ ಕಮಾಂಡೊಗಳು ಶಸ್ತ್ರಸಜ್ಜಿತರಾಗಿ ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತಂದರು. ಪೊಲೀಸ್ ವಾಹನದಿಂದ ಕೆಳಗಿಳಿಯುತ್ತಿದ್ದಂತೆಯೇ ನಕ್ಸಲ್ ಪರ ಘೋಷಣೆ ಕೂಗಿದ ರೂಪೇಶ್ ನ್ಯಾಯಾಲಯ ಆವರಣ ಪ್ರವೇಶಿಸಿದ. 
ನ್ಯಾಯಾಧೀಶರು ಎ.27ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದರು. 

ನ್ಯಾಯಾಲಯದ ಮುಖ್ಯ ದ್ವಾರದಿಂದ ಹೊರ ಬಂದ ರೂಪೇಶ್ ಮತ್ತೆ ನಕ್ಸಲ್ ಪರ ಘೋಷಣೆ ಕೂಗಿದ. ನಕ್ಸಲ್ ಝಿಂದಾಬಾದ್ ಎಂದು ಘೋಷಣೆ ಕೂಗಿ ಪೊಲೀಸ್ ವಾಹನವೇರಿದ.

ರೂಪೇಶ್ ವಿರುದ್ದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಬಗ್ಗೆ ಆರೋಪಗಳಿದ್ದು, ಒಟ್ಟು 38 ಪ್ರಕರಣಗಳಿವೆ. ಈತನ ವಿರುದ್ದ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳೂ ದಾಖಲಾಗಿದೆ. 2010ರಲ್ಲಿ ಭಾಗಮಂಡಲ ವ್ಯಾಪ್ತಿಯ ಮುಂಡ್ರೋಟುವಿನ ಮಾಂಗುಡಿಮಲೆ ಎಂಬಲ್ಲಿ ಪ್ರತ್ಯಕ್ಷನಾಗಿ ಅಲ್ಲಿನ ಗ್ರಾಮಸ್ಥರಿಗೆ ಬೆದರಿಕೆ ಒಡ್ಡಿರುವ ಆರೋಪ ರೂಪೇಶ್ ಮೇಲಿದೆ. ಶಂಕಿತ ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ 2 ಪ್ರತ್ಯೇಕ ಪ್ರಕರಣದ ವಿಚಾರಣೆಗಾಗಿ ಇದೀಗ 5ನೇ ಬಾರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬುಧವಾರ ವಿಚಾರಣೆ ನಡೆಸಿದ ಬಳಿಕ ಆರೋಪಿ ರೂಪೇಶನನ್ನು ಕೇರಳಕ್ಕೆ ಕರೆದೊಯ್ಯಲಾಯಿತು. ನ್ಯಾಯಾಲಯದ ಹೊರಭಾಗ ನಗರ ಠಾಣಾಧಿಕಾರಿ ಷಣ್ಮುಗ ನೇತೃತ್ವದಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News