ಸಿನಿಮಾ ಡೈಲಾಗ್ ಹೇಳುವುದಿಲ್ಲ, ನಿಜವಾದ ಡೈಲಾಗ್ ಹೇಳುತ್ತೇನೆ: ನಟ ಯಶ್

Update: 2019-04-10 16:49 GMT

ಮಂಡ್ಯ, ಎ.10: ನಾನು ಸಿನಿಮಾ ಡೈಲಾಗ್ ಹೇಳುವುದಿಲ್ಲ. ಈಗಾಗಲೇ ನಮ್ಮನ್ನು ಸಿನಿಮಾದವರು ಬಂದು ಡೈಲಾಗ್ ಹೇಳುತ್ತಾರೆ ಎಂದು ಟೀಕಿಸುತ್ತಿದ್ದಾರೆ. ಇದು ಚುನಾವಣೆ ಆದ್ದರಿಂದ ನಿಜವಾದ ಮಾತು ಹೇಳುತ್ತೇನೆ ಎಂದು ಚಿತ್ರನಟ ಯಶ್ ವಿರೋಧಿಗಳಿಗೆ ತಿರುಗೇಟು ನೀಡಿದರು.

ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯ ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಚುನಾವಣಾ ಪ್ರಚಾರದಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಅವರು. ಅಭಿಮಾನಿಗಳು ಡೈಲಾಗ್ ಹೇಳುವಂತೆ ಒತ್ತಾಯಿಸಿದ ವೇಳೆ ನಾನು ಸಿನಿಮಾದಲ್ಲಿ ಮಾತ್ರ ಡೈಲಾಗ್ ಹೇಳುವುದು. ಇದು ಚುನಾವಣೆ ಇಲ್ಲಿ ನಿಜವಾದ ಮಾತು ಹೇಳುತ್ತೇನೆ ಕೇಳಿ ಎಂದರು.

ವೈಯುಕ್ತಿಕ ಟೀಕೆಗಳನ್ನು ಬಿಡಬೇಕು ಚುನಾವಣೆಯನ್ನು ಆರೋಗ್ಯಕರವಾಗಿ ಎದುರಿಸಬೇಕು. ಹೆಣ್ಣಿನ ಬಗ್ಗೆ ಪ್ರತಿಯೊಬ್ಬರು ಗೌರಿವಿಸುವ ಮೂಲಕ ಆಕೆಗೆ ಬೆಲೆಕೊಡಬೇಕು. ನಾಲ್ಕು ಜನ ಸುಮಲತಾ ಚುನಾವಣೆಗೆ ಸ್ಪರ್ದಿಸಿದ್ದಾರೆ. ಅದರಲ್ಲಿ ಸುಮಲತಾ ಅಂಬರೀಷ್ ಅವರ  ಕಹಳೆ ಹೂದುತ್ತಿರುವ ರೈತ ಗುರುತಿಗೆ ಮತ ಹಾಕುವ ಮೂಲಕ ಅವರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಯಶ್ ಅವರಿಂದ ಅಭಿಮಾನಿಗಳು ಕೇಕ್ ಕಟ್ ಮಾಡಿಸಿ ಮೈಸೂರು ಪೇಟ ತೋಡಿಸಿ ಸನ್ಮಾನಿಸಿದರು. ಕೇಕ್ ಅನ್ನು ಅಭಿಮಾನಿಗಳಿಗೆ ತಿನ್ನಿಸುವ ಮೂಲಕ ಮೆಚ್ಚಿಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯ ಎ.ಎಸ್.ರಾಜೀವ್ ತಾಪಂ ಸದಸ್ಯ ಬಿ.ಗಿರೀಶ್, ಮಹೇಂದ್ರ, ಡಿ.ಎ.ಕೆರೆ ಅಮರ್ ಸೇರಿದಂತೆ ಹಲವರಿದ್ದರು.

ಮಧು  ಮಾದೇಗೌಡ ಭೇಟಿಯಾದ ಯಶ್
ಕೆ.ಎಂ.ದೊಡ್ಡಿಗೆ ಪ್ರಚಾರಕ್ಕೆ ತೆರಳಿದ್ದ ಯಶ್, ವಿಧಾನಪರಿಷತ್ ಮಾಜಿ ಸದಸ್ಯ ಮಧು ಮಾದೇಗೌಡ ಅವರನ್ನು ಭಾರತೀ ಕಾಲೇಜಿನಲ್ಲಿ ಭೇಟಿಯಾಗಿ ಒಂದು ತಾಸು ಮಾತುಕತೆ ನಡೆಸಿದರು. ನಂತರ ಔತಣ ಕೂಟದಲ್ಲಿ ಭಾಗವಹಿಸಿದ್ದರು. ಆದರೆ, ಭಾರತೀನಗರದ ಮುಖ್ಯರಸ್ತೆಯಲ್ಲಿ ತೆರೆದ ವಾಸದಲ್ಲಿ ನಡೆದ ಯಶ್ ಚುನಾವಣೆ ಪ್ರಚಾರದಲ್ಲಿ ಮಧು ಮಾದೇಗೌಡರವರು ಭಾಗವಹಿಸರಲಿಲ್ಲ. ಅವರ ಬೆಂಬಲಿಗರು ಭಾಗವಹಿಸಿದ್ದು ಅಚ್ಚರಿ ಮೂಡಿಸಿತ್ತು.

ಅಜ್ಜಿಯ ಆಶೀರ್ವಾದ ಪಡೆದ ಯಶ್ 

ಅಣ್ಣಹಳ್ಳಿ ದೊಡ್ಡಿ ಗ್ರಾಮದಲ್ಲಿ ಪ್ರಚಾರಕ್ಕೆ ಹೋಗಿದ್ದ ವೇಳೆ ಅಜ್ಜಿ ಕೆಂಪಮ್ಮ ಅವರ ಪ್ರೀತಿಯ ಕರೆಗೆ ಸ್ಪಂದಿಸಿದ ನಟ ಯಶ್, ಅವರ ಮನೆಗೆ ಹೋಗಿ ಬಾಳೆಹಣ್ಣು ತಿಂದು ಆಶೀರ್ವಾದ ಪಡೆದುಕೊಂಡರು.

ಈ ವೇಳೆ ಮಾತನಾಡಿದ ಅಜ್ಜಿ ಕೆಂಪಮ್ಮ ಅವರು ನಟ ಯಶ್ ಮನೆಗೆ ಬಂದಿದ್ದು ತುಂಬಾ ಖುಷಿಯಾಗಿದೆ ನಮ್ಮಂತಹವರ ಮನೆಗೆ ಅವರು ಬಂದಿದ್ದು ನನ್ನ ಆನಂದಕ್ಕೆ ಪಾರವೇ ಇಲ್ಲ ಎಂದು ತಿಳಿಸಿ ಯಶ್ ಜೊತೆಯಲ್ಲಿ ಫೋಟೋ ತೆಗೆಸಿ ಕೊಂಡು ಖುಷಿ ಪಟ್ಟರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಯಶ್ ನಾನು ಬಡತನವನ್ನು ಕಂಡಿದ್ದು ನಾನು ಕೆಳಮಟ್ಟದಿಂದ ಬೆಳೆದಿದ್ದು ಇದಕ್ಕೆ ನಿಮ್ಮಂತಹವರ ಶ್ರೀ ರಕ್ಷೆ ಸದಾ ಇರಬೇಕು ಎಂದು ಕೋರಿಕೊಂಡರು.  
ಈ ವೇಳೆ ಸುಮಲತಾ ಅವರಿಗೆ ವೋಟು ಹಾಕುವಂತೆ ಯಶ್ ಮನವಿ ಮಾಡಿದ್ದಕ್ಕೆ ಖಂಡಿತವಾಗಿ ವೋಟು ಹಾಕುವುದಾಗಿ ಅಜ್ಜಿ ಭರವಸೆ ನೀಡಿದರು.

ಚುನಾವಣಾಧಿಕಾರಿಗಳಿಂದ ಯಶ್ ಕಾರು ತಪಾಸಣೆ

ಮದ್ದೂರು ತಾಲೂಕಿನಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರದಲ್ಲಿ ತೆರಳಿದ್ದ ನಟ ಯಶ್ ಅವರ ಕಾರನ್ನು ಚುನಾವಣಾಧಿಕಾರಿಗಳು ಕೂಳಗೆರೆ ಗೇಟ್ ಬಳಿ ತಪಸಾಣೆ ಮಾಡಿದರು. ತಪಸಾಣೆಗೆ ಯಶ್ ಸಹಕರಿಸಿದರು. 
ಇದಕ್ಕೆ ಪ್ರತಿಕ್ರಿಯಿಸಿದ ಯಶ್, ಅಧಿಕಾರಿಗಳು ಅವರ ಕರ್ತವ್ಯ ಮಾಡಿದ್ದಾರೆ. ಕಾನೂನು ಎಲ್ಲರಿಗೂ ಒಂದೇ, ಅದಕ್ಕೆ ತಲೆ ಬಾಗಬೇಕು. ಅವರ ಕರ್ತವ್ಯಕ್ಕೆ ನಮ್ಮ ಸಹಕಾರ ನೀಡುವ ಮೂಲಕ ನ್ಯಾಯ ಸಮ್ಮತ ಚುನಾವಣೆಗೆ ಅವಕಾಶ ಮಾಡಿ ಕೋಡಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News