ಕಾಂಗ್ರೆಸ್ ಟಿಕೆಟ್ ನೀಡದ ಕಾರಣಕ್ಕೆ ಸ್ಪರ್ಧೆ: ಅಮೃತ್ ಶೆಣೈ

Update: 2019-04-10 17:33 GMT

ಶೃಂಗೇರಿ, ಎ.10: ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಜನಸಾಮಾನ್ಯರ ಸಮಸ್ಯೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಕಾಂಗ್ರೆಸ್ ಪಕ್ಷವು ನನ್ನ ಸೇವೆಯನ್ನು ಗುರುತಿಸಿ ಪ್ರಸ್ತುತ ಚುನಾವಣೆಯಲ್ಲಿ ಅವಕಾಶ ನೀಡಬೇಕಿತ್ತು. ಅವಕಾಶ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಪಕ್ಷೇತರ ಲೋಕಸಭಾ ಅಭ್ಯರ್ಥಿ ಅಮೃತ್ ಶೆಣೈ ತಿಳಿಸಿದರು.

ಅವರು ಪಟ್ಟಣದ ಬಸ್‍ನಿಲ್ದಾಣದಲ್ಲಿ ಮತಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಸದೆ ಶೋಭಾ ಕರಂದ್ಲಾಜೆ ಅವರ ನಿಷ್ಕ್ರಿಯತೆ, ಎನ್.ಡಿ.ಎ ಸರಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುತ್ತ ಮತಯಾಚನೆ ಮಾಡುತ್ತಿದ್ದೇನೆ. ಧರ್ಮಕ್ಕಾಗಿ ಕಚ್ಚಾಡುವ ಪಕ್ಷದ ವಿರೋಧ ನೀತಿಯನ್ನು ನಾನು ವಿರೋಧಿಸುತ್ತಲೇ ಬಂದಿದ್ದೇನೆ. ಲೋಕಸಭೆಯ ಎಂಟು ವಿಧಾನಸಬಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಅಸ್ತಿತ್ವವಿಲ್ಲ.

ಕಾಂಗ್ರೆಸ್ ಅಸ್ತಿತ್ವವಿದ್ದ ಜಿಲ್ಲೆಯನ್ನು ಜೆಡಿಎಸ್ ಪಕ್ಕಕ್ಕೆ ನೀಡಿದೆ. ಕಾಂಗ್ರೆಸ್ ಪಕ್ಷದ ಸದಸ್ಯತ್ವವಿರುವ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಅವರಿಗೆ ಜೆಡಿಎಸ್ ಪಕ್ಷ ಟಿಕೆಟ್ ನೀಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭ್ಯರ್ಥಿ ಒಂದು ಪಕ್ಷದ ಸದಸ್ಯತ್ವ ಹೊಂದಿರಬೇಕು ಎಂಬುದು ಎಲ್ಲರಿಗೂ ತಿಳಿದ ಮಾಹಿತಿ. ಸಮ್ಮಿಶ್ರ ಸರಕಾರದ ಅಭ್ಯರ್ಥಿ ಜನಸಾಮಾನ್ಯರ ಸಮಸ್ಯೆಗಳಿಗೆ ಉಡುಪಿ ಜಿಲ್ಲೆಯಲ್ಲಿ ಎಷ್ಟು ಸ್ಪಂದಿಸಿದ್ದಾರೆ ಎಂಬುದು ಅಲ್ಲಿನ ಪ್ರತಿಯೊಬ್ಬ ಪ್ರಜೆಗೆ ತಿಳಿದ ವಿಚಾರ ಎಂದರು.

ಸಂಸದರು ಹಾಗೂ ಶಾಸಕರು ಉಡುಪಿ ಜಿಲ್ಲೆಯ ಅರ್ಥಿಕ ಪ್ರಗತಿಗೆ ಸ್ಪಂದಿಸಲಿಲ್ಲ. ಪರಸ್ಪರ ಕಚ್ಚಾಡುತ್ತಾ ಕಾಲಹರಣ ಮಾಡುವ ರಾಜಕಾರಣಿಗಳಿಂದ ಜನರ ನಿರೀಕ್ಷೆಗಳು ಹುಸಿಯಾಗಿದೆ. ಮರಳಿನ ಸಮಸ್ಯೆ, ಕಾಣೆಯಾದ ಮೀನುಗಾರರ ಬಗ್ಗೆ ಎರಡು ಸರಕಾರ ತಲೆಕೆಡಿಸಿಕೊಂಡಿಲ್ಲ. ನೋಟು ಬ್ಯಾನ್‍ನಿಂದ ಜನರ ಅರ್ಥಿಕ ಸ್ಥಿತಿ ಅಸ್ತವ್ಯಸ್ತವಾಗಿದೆ. ಇಲ್ಲಿರುವ ಜಲ್ವಂತ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿ ನಾನು ಕಾರ್ಯನಿರ್ವಹಿಸುತ್ತೇನೆಂದ ಅವರು, ದೇಶದಲ್ಲಿ ಶ್ರೀಮಂತರು ಶ್ರೀಮಂತರಾಗಿ ಉಳಿದಿದ್ದಾರೆ. ಬಡವರು ಬಡವರಾಗಿ ಇದ್ದಾರೆ. ಅಭಿವೃದ್ಧಿ ನನ್ನ ಮಂತ್ರ, ಗೆದ್ದ ಬಳಿಕ ನಾನು ಸಾಮಾನ್ಯರ ನೋವಿಗೆ ನಿರಂತರ ಸ್ಪಂದಿಸುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News