ಪುತ್ರ ನಿಖಿಲ್ ಪರ ಅಖಾಡಕ್ಕೆ ಧುಮುಕಿದ ಕುಮಾರಸ್ವಾಮಿ
ಮಂಡ್ಯ, ಎ.10: ಪುತ್ರ ನಿಖಿಲ್ ಗೆಲುವಿಗೆ ಅಖಾಡಕ್ಕೆ ಧುಮುಕಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬುಧವಾರ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಪಾರ ಕಾರ್ಯಕರ್ತರ ಜತೆ ರೋಡ್ ಶೋ ನಡೆಸಿ ಮತಯಾಚಿಸಿದರು.
ಕೆಆರ್‍ಎಸ್ ಬಳಿ ಇರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ, ಅಲ್ಲಿಂದ ಶ್ರೀರಂಗಪಟ್ಟಣದವರೆಗೂ ಕಾರ್ಯಕರ್ತರ ಜತೆ ರೋಡ್ ಶೋ ಮೂಲಕ ಮಾರ್ಗದ ಹಳ್ಳಿಗಳಲ್ಲಿ ಮತದಾರರ ಬೆಂಬಲ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಆರ್ ಎಸ್ ಬಳಿ ಹಲವಾರು ವರ್ಷಗಳಿಂದ ನೆಲೆಸಿರುವವರಿಗೆ ಹಕ್ಕುಪತ್ರ ನೀಡಲು ಈಗಾಗಲೇ ಆದೇಶವಾಗಿದೆ. ಚುನಾವಣೆ ಬಳಿಕ ಹಕ್ಕುಪತ್ರ ಸಿಗಲಿವೆ. ಯಾವುದೇ ಕುಟುಂಬಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಡಿಸ್ನಿಲ್ಯಾಂಡ್ ನಿರ್ಮಿಸಲು ಯೋಜಿಸಲಾಗಿದೆ. ಇದರಿಂದ ಸ್ಥಳೀಯ ರೈತರಿಗೆ ಅನ್ಯಾಯವಾಗುವುದಿಲ್ಲ. ಸಾವಿರಾರು ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರಕಲಿದೆ ಎಂದು ಅವರು ಅವರು ಹೇಳಿದರು.
ಸುಮಲತಾ ವಿರುದ್ಧ ವಾಗ್ದಾಳಿ:
ತಾವು ಅಭಿಮಾನ, ಅನುಕಂಪಕ್ಕೆ ಬಂದಿದ್ದೇವೆ, ರಾಜಕೀಯ ಮಾಡಲು ಬಂದಿಲ್ಲ ಎಂದು ಹೇಳುತ್ತಾರೆ. ರಾಜಕೀಯ ಬೇಡ ಅಂದ ಮೇಲೆ ಚುನಾವಣೆ ಏಕೆ ಬೇಕಿತ್ತು ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರನ್ನು ಕುಮಾರಸ್ವಾಮಿ ಪರೋಕ್ಷವಾಗಿ ಪ್ರಶ್ನಿಸಿದರು.
ಜಿಲ್ಲೆಯ ರೈತರ 1,127 ಕೋಟಿ ರೂ. ಸಾಲವಿದ್ದು, ಈಗಾಗಲೇ 400 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ಆ ಮೂಲಕ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಸಾಲಮನ್ನಾ ಸಾಧ್ಯವಿಲ್ಲವೆಂದು ಸುಳ್ಳು ಹೇಳುವ ವ್ಯಕ್ತಿಯನ್ನು ನಂಬಬೇಡಿ ಎಂದೂ ಅವರು ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದರು.
ತಮ್ಮ ಇನ್ನೊಂದು ಮುಖ ತೋರಿಸುವ ಎಚ್ಚರಿಕೆ ನೀಡಿರುವ ಸುಮಲತಾ ಅವರಿಗೆ ಸವಾಲು ಹಾಕಿದ ಕುಮಾರಸ್ವಾಮಿ, ನಿಮ್ಮ ಮೂರು ನಾಲ್ಕು ಮುಖಗಳು ನಮಗೆ ಗೊತ್ತಿದೆ. ನಮ್ಮ ಜನ ನೋಡಬೇಕಿದೆ ನಿಮ್ಮ ಇನ್ನೊಂದು ಮುಖ ತೋರಿಸು ತಾಯಿ. ಅದು ಯಾರು ಓಡಿ ಹೋಗುತ್ತಾರೆ ನೋಡೋಣ ಎಂದು ಸವಾಲು ಹಾಕಿದರು.
ಪಾಪ ಅಂಗವಿಕಲ ಮಹಿಳೆ ಡಿಸಿಯನ್ನು ಸುಮ್ಮನೆ ವರ್ಗಾವಣೆ ಮಾಡಿಸಿದರು. ಸುಳ್ಳು ಆಪಾದನೆ ಮಾಡಿ ಡಿಸಿ ವರ್ಗಾವಣೆ ಮಾಡಿಸಿದ್ದೆ ಅವರ ಸಾಧನೆ. ನನಗೆ ಯಾವ ಡಿಸಿ ಇದ್ದರೆ ಏನು? ನಾನು ಅಧಿಕಾರ ದುರುಪಯೋಗ ಪಡಿಸಿಕೊಂಡು ಮತ ಹಾಕಿಸಿಕೊಳ್ಳಬೇಕಾ? ಎಂದು ಅವರು ಕಿಡಿಕಾರಿದರು.
ಅಧಿಕಾರ ಪಡೆದುಕೊಂಡು ನಾನು ನೆಮ್ಮದಿಯಾಗಿದ್ದೀನಿ ಅಂದುಕೊಂಡಿದ್ದೀರಾ? ಕಳೆದ 8 ತಿಂಗಳಿನಿಂದ ನಿರಂತರವಾಗಿ ಇವತ್ತು ಹೋಗುತ್ತಾನೆ ನಾಳೆ ಹೋಗುತ್ತಾನೆ ಅಂತಾ ಬಿಂಬಿಸುತ್ತಿದ್ದಾರೆ. ನನಗೆ ಮಾನಸಿಕವಾಗಿ ಎಷ್ಟೇ ತೊಂದರೆಯಾದರೂ 5 ವರ್ಷ ಅಧಿಕಾರದಲ್ಲಿ ಇರುತ್ತೇನೆ. ಅಧಿಕಾರ ಇಲ್ಲ ಅಂದರೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಈ ಲೋಕಸಭಾ ಚುನಾವಣೆಗೆ ನಿಖಿಲ್ ಹೆಸರು ಮೊದಲು ಪ್ರಸ್ತಾಪ ಮಾಡಿದ್ದು ರವೀಂದ್ರ ಶ್ರೀ ಕಂಠಯ್ಯ. ರವೀಂದ್ರ ಶ್ರೀಕಂಠಯ್ಯ ಮಾತನಾಡುವಾಗ ನೇರವಾಗಿ ಮಾತನಾಡುತ್ತಾರೆ. ಆದರೆ, ಜನರ ಕೇಲಸ ಮಾಡಬೇಕಾದರೆ ಅಷ್ಟೆ ಅಚ್ಚುಕಟ್ಟಿನಿಂದ ಮಾಡುತ್ತಾರೆ ಎಂದು ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರನ್ನು ಶ್ಲಾಘಿಸಿದರು.
ಈ ಚುನಾವಣೆಯಲ್ಲಿ ಭತ್ತದ ಹೊರೆ ಹೊತ್ತ ಮಹಿಳೆಯ ಗುರುತಿಗೆ ಮತ ನೀಡಿ. ಬಿಜೆಪಿಯವರು ವಿಧಾನಸೌಧದಲ್ಲಿ ಮಂಡ್ಯ ಜಿಲ್ಲೆಯ ಮುಖ್ಯಮಂತ್ರಿ ಅಂತಾ ಟೀಕೆ ಮಾಡುತ್ತಾರೆ. ಇಲ್ಲಿ ಬಂದು ಸ್ವತಂತ್ರ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೆ. ಅಂತಹವರಿಗೆ ಮತ ನೀಡ್ತೀರೊ ಅಥವಾ ನಿಮ್ಮ ಮನೆ ಮಗನಾಗಿ ನಿಮ್ಮ ಸೇವೆ ಮಾಡುವ ನಿಖಿಲ್‍ಗೆ ನೀಡ್ತೀರೊ ಎಂದು ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದರು.
ಬೆಳಗೊಳದ ಪಂಪ್‍ಹೌಸ್ ಬಳಿ ವಿಷ್ಣುವರ್ಧನ್ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕುಮಾರಸ್ವಾಮಿ, ಯಡಿಯೂರಪ್ಪ ಮುಖ್ಯಮಂತ್ರಿ ಆದ ಬಳಿಕ ನಾನು ಒಮ್ಮೆಯೂ ಅವರಿಗೆ ಕರೆ ಮಾಡಿರಲಿಲ್ಲ. ಆದರೆ, ವಿಷ್ಣುವರ್ಧನ್ ನಿಧನ ಆದ ಬಳಿಕ ಅಭಿಮಾನ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆಗೆ ಅವಕಾಶ ಕೊಡಿ ಎಂದು ಕೇಳಿದೆ. ಚುನಾವಣೆ ಮುಗಿದ ನಂತರ ಬನ್ನಿ, ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ, ಇತರ ಮುಖಂಡರು ಕುಮಾರಸ್ವಾಮಿ ರೋಡ್ ಶೋಗೆ ಸಾಥ್ ನೀಡಿದರು.