ರಾಜ್ಯದಲ್ಲಿ ಬಿಜೆಪಿಗೆ ಕನಿಷ್ಠ 22 ಸ್ಥಾನ: ಆರ್.ಅಶೋಕ್

Update: 2019-04-10 17:59 GMT

ಬೆಂಗಳೂರು, ಎ.10: ರಾಜ್ಯದಲ್ಲಿ ಬಿಜೆಪಿಗೆ ಅತಿಹೆಚ್ಚು ಸ್ಥಾನ ಗೆಲ್ಲುವ ಪೂರಕ ವಾತಾವರಣವಿದೆ. ಮಾಧ್ಯಮಗಳು ಈ ಹಿಂದೆ ಬಿಜೆಪಿ 14-15 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಮುನ್ಸೂಚನೆ ನೀಡಿದ್ದವು. ಈಗ 18 ಸ್ಥಾನ ಎನ್ನುತ್ತಿವೆ. ಆದರೆ, ವಾಸ್ತವವಾಗಿ ನಾವು 22 ಸ್ಥಾನ ಗೆಲ್ಲುವ ಪೂರಕ ವಾತಾವರಣವಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದರು.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ನಿನ್ನೆ ಸಾರ್ವಜನಿಕ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಈ ವಿಷಯವನ್ನು ತಿಳಿಸಿದ್ದೇವೆ ಎಂದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದಲ್ಲಿ ಹೊಂದಾಣಿಕೆ ಇಲ್ಲದೆ, ಅನೇಕ ಕ್ಷೇತ್ರಗಳಲ್ಲಿ ಕಿತ್ತಾಟ ಮುಂದುವರೆದಿದೆ. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮುಂತಾದ ಕ್ಷೇತ್ರಗಳಲ್ಲಿ ದೋಸ್ತಿ ಪಕ್ಷಗಳ ನಾಯಕರ ನಡುವೆ ಗಲಾಟೆ ತಾರಕಕ್ಕೇರಿದೆ. ರಾಜ್ಯದ ಎಲ್ಲ ಕಡೆ ಬಿಜೆಪಿ ಹವಾ ಇದ್ದು, ಕೇಂದ್ರದಲ್ಲಿ ಹೊಂದಾಣಿಕೆಯಿಲ್ಲದ, ಕಚ್ಚಾಡುವ ಮೈತ್ರಿಕೂಟದ ಸರಕಾರ ಬೇಡವೆಂದು ಜನರು ತೀರ್ಮಾನಿಸಿದ್ದಾರೆ ಎಂದು ಅವರು ಹೇಳಿದರು.

ಮಂಡ್ಯ, ಹಾಸನ ಜಿಲ್ಲಾಧಿಕಾರಿಗಳು ವರ್ಗಾವಣೆ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ನಿಷ್ಪಕ್ಷಪಾತ ಹಾಗೂ ಮುಕ್ತ ಚುನಾವಣೆಗೆ ಬಿಜೆಪಿ ಇಟ್ಟಿದ್ದ ಬೇಡಿಕೆಗೆ ಚುನಾವಣಾ ಆಯೋಗ ಸ್ಪಂದಿಸಿದೆ. ಮುಂದೆಯೂ ಇಂತಹುದೇ ಕ್ರಮಗಳನ್ನು ತೆಗೆದುಕೊಳ್ಳುವ ವಿಶ್ವಾಸವನ್ನು ಬಿಜೆಪಿ ಹೊಂದಿದೆ ಎಂದು ಅಶೋಕ್ ತಿಳಿಸಿದರು.

ರಾಜ್ಯದ 21 ಕಡೆ ತಮ್ಮ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆಗಳು ನಡೆಯಲಿವೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಜಿಲ್ಲೆಗಳಲ್ಲಿ ಈ ಯಾತ್ರೆಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಖಂಡಿತ ಗೆಲ್ಲಿಸಿಕೊಡುತ್ತೇವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಶಾಸಕ ಮುನಿರಾಜು, ರಾಜ್ಯ ಸಹ ವಕ್ತಾರ ಎ.ಎಚ್.ಆನಂದ, ಎಸ್.ಪ್ರಕಾಶ್, ಮಾಜಿ ಉಪ ಮೇಯರ್ ಎಸ್.ಹರೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News