ಬಿಜೆಪಿಯದ್ದು ಕೋಮು ವಿಭಜಕ ಕಾರ್ಯಸೂಚಿಯ ಪ್ರಣಾಳಿಕೆ: ಎಸ್‌ಡಿಪಿಐ

Update: 2019-04-10 18:08 GMT

ಬೆಂಗಳೂರು, ಎ.10: 2019ರ ಲೋಕಸಭಾ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆ, ಅದು ಹಿಂದಿನಿಂದಲೂ ಅನುಸರಿಸಿಕೊಂಡು ಬರುತ್ತಿರುವ ಕೋಮು ವಿಭಜಕ ಕಾರ್ಯಸೂಚಿಯ ದಾಖಲೆ ಪತ್ರಗಳಾಗಿವೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಟೀಕಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಸ್‌ಡಿಪಿಐ ಅಧ್ಯಕ್ಷ ಎಂ.ಕೆ.ಫೈಝಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೆ ವಿಧಿ ವಿರದ್ದು, ಏಕರೂಪದ ನೀತಿ ಸಂಹಿತೆ, ಪೌರತ್ವ ತಿದ್ದುಪಡಿ ಮಸೂದೆ, ತ್ರಿವಳಿ ತಲಾಖ್ ಮಸೂದೆ ಮುಂತಾದ ಪ್ರಮುಖ ಕಾರ್ಯಸೂಚಿಗಳಿಗೆ ಬಿಜೆಪಿಯ ಪ್ರಣಾಳಿಕೆ ಬದ್ಧತೆ ಪ್ರದರ್ಶಿಸಿದೆ ಎಂದು ಆರೋಪಿಸಿದ್ದಾರೆ.

‘ವೈವಿಧ್ಯತೆಯಲ್ಲಿ ಏಕತೆ’ ಎಂಬುದರಲ್ಲಿ ನಂಬಿಕೆ ಇಲ್ಲದ ರಾಷ್ಟ್ರೀಯ ಪಕ್ಷ ಬಿಜೆಪಿ ಎಂಬುದು ಐದು ವರ್ಷಗಳ ಆಡಳಿತದಲ್ಲಿ ದೇಶದ ಜನರಿಗೆ ಅರಿವಾಗಿದೆ. ಸಮಾಜವನ್ನು ಧ್ರುವೀಕರಣಗೊಳಿಸಲು ಮತ್ತು ಅಲ್ಪಸಂಖ್ಯಾತರನ್ನು ಭಯದ ಸ್ಥಿತಿಯಲ್ಲಿ ಇಡಲು ನಿರಂತರ ಪ್ರಯತ್ನಿಸುತ್ತಿರುವ ಬಿಜೆಪಿಯ ವಿಭಜನಾತ್ಮಕ ಕಾರ್ಯಸೂಚಿ ಅದರ ಪ್ರಣಾಳಿಕೆಯಲ್ಲಿ ಪುನರಾರ್ತನೆಗೊಳ್ಳುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ದೇಶದಲ್ಲಿ ಉದ್ಯೋಗ ಸಮಸ್ಯೆ ಸೃಷ್ಟಿಯಾಗಿದೆ ಎಂದು ಕಾಂಗ್ರೆಸ್ ಪಕ್ಷವನ್ನು ಈ ಹಿಂದೆ ಬಿಜೆಪಿ ಟೀಕಿಸಿತ್ತು. ಇದೀಗ ಅದು ವ್ಯತಿರಿಕ್ತವಾಗಿದೆ. ಈಗ ಟೇಬಲ್ ತಿರುಗಿದೆ. ಸೋರಿಕೆಯಾದ ಎನ್‌ಎಸ್‌ಎಸ್‌ಒ ವರದಿಯ ಪ್ರಕಾರ, ನಾಲ್ಕು ದಶಕಗಳಲ್ಲೇ ದೇಶದಲ್ಲಿ ಈಗ ಅತಿ ಹೆಚ್ಚಿನ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಿದೆ ಎಂದು ಆವರು ಆರೋಪಿಸಿದ್ದಾರೆ.

ಈ ವರದಿಯನ್ನು ಬಿಜೆಪಿ ಬಿಡುಗಡೆ ಮಾಡದೆ ಅಡಗಿಸಿಟ್ಟಿದೆ. ಸಾಂಸ್ಕೃತಿಕ ನಿರಂತರತೆಯನ್ನು ಖಾತರಿಪಡಿಸುವ ಮನುಸ್ಮತಿಯನ್ನು ಮರು ಸ್ಥಾಪಿಸಲು ಮತ್ತು ದೇಶದ ಸಂವಿಧಾನವನ್ನು ದುರ್ಬಲಗೊಳಿಸಲು ಈ ಪ್ರಣಾಳಿಕೆ ಮೂಲಕ ಪ್ರಯತ್ನಿಸಲಾಗಿದೆ. ಒಟ್ಟಾರೆ ಬಿಜೆಪಿಯ ಪ್ರಣಾಳಿಕೆ, ಒದ್ದೆಯಾದ ಪಟಾಕಿಯಂತಿದ್ದು, ಅದರ ಔಚಿತ್ಯ ಮತ್ತು ಶಕ್ತಿ ಕುಸಿತ ಸನ್ನಿಹಿತವಾಗಿರುವುದನ್ನು ತೋರಿಸುವ ದಾಖಲೆಯಾಗಿದೆ ಎಂದು ಎಂ.ಕೆ.ಫೈಝಿ ವ್ಯಂಗ್ಯವಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News