​‘ಕಪ್ಪು ರಂಧ್ರ’ದ ಮೊದಲ ಚಿತ್ರ ತೆಗೆದ ಖಗೋಳ ವಿಜ್ಞಾನಿಗಳು

Update: 2019-04-10 18:25 GMT

ಪ್ಯಾರಿಸ್, ಎ. 10: ಖಗೋಳ ವಿಸ್ಮಯವಾಗಿರುವ ‘ಕಪ್ಪು ರಂಧ್ರ’ವೊಂದರ ಮೊದಲ ಚಿತ್ರವನ್ನು ಖಗೋಳ ವಿಜ್ಞಾನಿಗಳು ಬುಧವಾರ ಪ್ರದರ್ಶಿಸಿದ್ದಾರೆ.
‘ಕಪ್ಪು ರಂಧ್ರ’ಗಳೆಂದರೆ, ನಕ್ಷತ್ರಗಳನ್ನು ನುಂಗುವ ದೈತ್ಯ ಆಕಾಶಕಾಯವಾಗಿದ್ದು, ವಿಶ್ವದೆಲ್ಲೆಡೆ ಹರಡಿಕೊಂಡಿವೆ ಹಾಗೂ ಅವುಗಳನ್ನು ಅಭೇದ್ಯ ಗುರುತ್ವಾಕರ್ಷಣೆಯ ಕವಚಗಳು ಆವರಿಸಿದ್ದು ಹೊರಗೆ ಕಾಣಿಸುವುದಿಲ್ಲ.

ಚಿತ್ರವು ಬಿಳಿ-ಬಿಸಿ ಅನಿಲ ಮತ್ತು ಪ್ಲಾಸ್ಮಾದ ಜ್ವಾಲೆ ಬಣ್ಣದ ಪ್ರಭಾವಲಯದಿಂದ ಸುತ್ತುವರಿಯಲ್ಪಟ್ಟಿರುವ ಕಪ್ಪು ಪದಾರ್ಥವನ್ನೊಳಗೊಂಡಿದೆ. ಇದು ಕಳೆದ 30 ವರ್ಷಗಳ ಅವಧಿಯಲ್ಲಿ ಕಲಾವಿದರು ತಮ್ಮ ಕಲ್ಪನೆಯಿಂದ ಸೃಷ್ಟಿಸಿದ ‘ಕಪ್ಪು ರಂಧ್ರ’ಚಿತ್ರವನ್ನು ಹೋಲುತ್ತದೆ.
ಆದರೆ, ಈ ಬಾರಿ ನಿಜವಾದ ಕಪ್ಪು ರಂಧ್ರವನ್ನೇ ನಾವು ನೋಡುತ್ತಿದ್ದೇವೆ.

ಗೋಚರಿಸದ ‘‘ಕಪ್ಪು ನಕ್ಷತ್ರ’’ಗಳ ಬಗ್ಗೆ ವಿಜ್ಞಾನಿಗಳು 18ನೇ ಶತಮಾನದಿಂದಲೇ ತಲೆಕೆಡಿಸಿಕೊಂಡಿದ್ದರು. ಆದರೆ, ಇತ್ತೀಚಿನವರೆಗೂ ಅದು ಟೆಲಿಸ್ಕೋಪ್‌ಗಳು ಮತ್ತು ಕ್ಯಾಮರಗಳ ಕಣ್ಣಿಗೆ ಬಿದ್ದಿಲ್ಲ.
ಈಗ ರೇಡಿಯೊ ಟೆಲಿಸ್ಕೋಪ್‌ನ ವಿಸ್ತೃತ ಜಾಲದಲ್ಲಿ ಸೆರೆಯಾಗಿರುವ ಅಗಾಧ ದ್ರವ್ಯರಾಶಿಯ ಕಪ್ಪುರಂಧ್ರವು ‘ಎಂ87’ ಎಂಬ ಹೆಸರಿನ ಗೆಲಾಕ್ಸಿಯಲ್ಲಿ 5 ಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ.

‘‘ಈ ದೂರವನ್ನು ನಾವು ಕಲ್ಪಿಸುವುದೂ ಸಾಧ್ಯವಿಲ್ಲ’’ ಎಂದು ಫ್ರಾನ್ಸ್‌ನ ನ್ಯಾಶನಲ್ ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್ (ಸಿಎನ್‌ಆರ್‌ಎಸ್)ನ ಖಗೋಳ ವಿಜ್ಞಾನಿ ಹಾಗೂ ಅಧ್ಯಯನದ ಸಹ ಲೇಖಕ ಫ್ರೆಡರಿಕ್ ಗ್ವೆತ್ ಎಎಫ್‌ಪಿ ಸುದ್ದಿ ಸಂಸ್ಥೆಗೆಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News