'ಪತ್ರಕರ್ತ, ಸಾಮಾಜಿಕ ಹೋರಾಟಗಾರ ಮಲ್ನಾಡ್ ಮೆಹಬೂಬ್ ಗಡೀಪಾರು ಖಂಡನೀಯ'

Update: 2019-04-11 11:37 GMT
ಮಲ್ನಾಡ್ ಮೆಹಬೂಬ್‌

ಹಾಸನ: ಸಂಘ ಪರಿವಾರ ಮತ್ತು ಪೊಲೀಸ್ ಇಲಾಖೆಯ ಕೆಲವರ ಪಿತೂರಿಯಿಂದಾಗಿ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಮಲ್ನಾಡ್ ಮೆಹಬೂಬ್‌ ರನ್ನು ದುರುದ್ದೇಶದಿಂದ ರೌಡಿಪಟ್ಟಿಗೆ ಸೇರಿಸಿ ಅವರನ್ನು ಮೇ 30ರವರೆಗೆ ಜಿಲ್ಲೆಯಿಂದ ಗಡಿಪಾರು ಮಾಡಿರುವ ಕ್ರಮ ಖಂಡನೀಯ ಎಂದು ಸಿಐಟಿಯು ಹಾಸನ ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದ್ದಾರೆ.

ಗುರುವಾರ ಹಾಸದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ಹೇಳಿಕೆ ನೀಡಲಾಯಿತು.

ಮಲ್ನಾಡ್ ಮೆಹಬೂಬ್‌ ಹಲವು ವರ್ಷಗಳಿಂದ ಪತ್ರಕರ್ತರಾಗಿ, ಸಾಮಾಜಿಕ, ಪರಿಸರ ಮತ್ತು ಜನರ ನೈಜ ಸಮಸ್ಯೆಗಳ ಬಗ್ಗೆ ಹಾಗೂ ವಿಷೇಶವಾಗಿ ದಲಿತರ, ಅಲ್ಪಸಂಖ್ಯಾತರ ಮತ್ತು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತುಳಿತಕ್ಕೊಳಗಾಗಿರುವ ಶೋಷಿತರ ಸಮಸ್ಯೆಗಳ ಕುರಿತು ಪತ್ರಿಕೆಗಳಲ್ಲಿ ವರದಿಗಳು ಮತ್ತು ಲೇಖನಗಳನ್ನು ಬರೆಯುವ ಮುಖಾಂತರ ಆಡಳಿತದಲ್ಲಿರುವವರ ಗಮನಕ್ಕೆ ತರುವಲ್ಲಿ ಯಶಸ್ವಿಯಾದವರು. ಕೋಮುವಾದ, ಭಯೋತ್ಪಾದನೆ, ಅಸ್ಪೃಶ್ಯತೆ ಮತ್ತು ಮಹಿಳಾ ದೌರ್ಜನ್ಯಗಳ ವಿರುದ್ಧದ ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಬೆಳೆಯುತ್ತಿರುವ ಕೋಮುವಾದ ಮತ್ತು ಧಾರ್ಮಿಕ ಮೂಲಭೂತವಾದದ ವಿರುದ್ಧ ಧಾರ್ಮಿಕ ಸಾಮರಸ್ಯ ಹಾಗೂ ಶಾಂತಿ ಮತ್ತು ಸೌಹಾರ್ದಯುತ ಸಮಾಜಕ್ಕಾಗಿ ಸಕ್ರಿಯವಾಗಿ ತೊಡಗಿಕೊಂಡಿರುವವರು ಎಂದು ಅವರು ಹೇಳಿದರು.

ಪರಿಸರ ಚಳುವಳಿಗಳು, ಹೋರಾಟಗಳಲ್ಲಿ ಭಾಗವಹಿಸಿದ ಕಾರಣ ಸಾಮಾಜಿಕ ಹೋರಾಟಗಾರರ ಮೇಲೆ ದಾಖಲಾಗುವ ಪ್ರಕರಣಗಳು ಮೆಹಬೂಬ್‌  ಮೇಲೂ ದಾಖಲಾಗಿವೆ. ಅವುಗಳಲ್ಲಿ ಬಹುತೇಕ ಪ್ರಕರಣಗಳು ದುರುದ್ಧೇಶದ ಪ್ರಕರಣಗಳಾಗಿವೆ. ಮುಸ್ಲಿಂ ಸಮುದಾಯದಿಂದ ಬಂದಿರುವ ಮೆಹಬೂಬ್‌  ಪ್ರಗತಿಪರ ಹೋರಾಟಗಳಲ್ಲಿ ಗುರಿತಿಸಿಕೊಳ್ಳುವುದನ್ನು ಅರಗಿಸಿಕೊಳ್ಳಲಾರದವರು ಪಿತೂರಿಯಿಂದ ಅವರ ಮೇಲೆ ಹಲವು ಸುಳ್ಳು ಮೊಕದ್ದಮೆಗಳನ್ನು ಹೂಡಲಾಗಿದೆ. ಅವುಗಳಲ್ಲಿ ಕೆಲವು ಇತ್ಯರ್ಥವಾಗಿವೆ. ಅವರ ಮೇಲಿರುವ ಪ್ರಕರಣಗಳಲ್ಲಿ ಯಾವೂವೂ ಕೂಡ ಗಂಭೀರವಾದ ಕ್ರಿಮಿನಲ್ ಪ್ರಕರಣಗಳಲ್ಲ. ಹೀಗಿರುವಾಗ ಅವರ ಹೆಸರನ್ನು ಪೋಲೀಸರು 'ರೌಡಿಪಟ್ಟಿ'ಗೆ ಸೇರಿಸುವ ಮುಖಾಂತರ ಶೋಷಿತರ ಪರವಾದ ಪ್ರಜಾಸತ್ತಾತ್ಮಕ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಇದರ ಹಿಂದೆ ಸಂಘ ಪರಿವಾರ ಮತ್ತು ಕೆಲವು ಭ್ರಷ್ಟ ಅಧಿಕಾರಸ್ತರ ಪಿತೂರಿಯೂ ಕಾರಣವಾಗಿದೆ ಎಂದು ಹೇಳಿದರು.

ಮಲ್ನಾಡ್ ಮೆಹಬೂಬ್‌ರ ತಂದೆ ತೀವ್ರ ಅನಾರೋಗ್ಯ ಪೀಡಿತರಾಗಿದ್ದು, ಅವರಿಗೆ ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಿಸಬೇಕಾದ ಅನಿವಾರ್ಯತೆ ಯಿದೆ. ಅಂಗವಿಕಲ ಮಗುವಿನ ತಂದೆಯಾಗಿರುವ ಮೆಹಬೂಬ್ ತನ್ನ ಕುಟುಂಬಕ್ಕೆ ಆಸರೆಯಾಗಿ ಸದಾ ಜೊತೆಗಿರಬೇಕಾದ ಅನಿವಾರ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ತಿಂಗಳುಗಟ್ಟಲೆ ಕುಟುಂಬದ ಜವಾಬ್ದಾರಿ ತೊರೆದು ಜಿಲ್ಲೆಯಿಂದ ಹೊರಗಿದ್ದರೆ ಅವರ ಕುಟುಂಬದ ಮೇಲೆ ಬೀರಬಹುದಾದ ಪರಿಣಾಮಗಳಿಗೆ ಜವಾಬ್ದಾರಿ ಯಾರು ? ಒಬ್ಬ ಜವಾಬ್ದಾರಿಯುತ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರನನ್ನು ದುರುದ್ಧೇಶದಿಂದ 'ರೌಡಿಪಟ್ಟಿ'ಗೆ ಸೇರಿಸಿದ್ದಲ್ಲದೆ ಆತನನ್ನು ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಯಿಂದ ಗಡೀಪಾರು ಮಾಡುವ ಮುಖಾಂತರ ಮಲ್ನಾಡ್ ಮೆಹಬೂಬ್ ರನ್ನು ಸಾಮಾಜಿಕವಾಗಿ ಅಪಮಾನಕ್ಕೀಡು ಮಾಡಲಾಗಿದೆ. ಜನಪರವಾಗಿ ಬರೆಯುವುದು ಹಾಗೂ ಹೋರಾಟ ಮಾಡುವುದನ್ನೇ ಅಪರಾಧ ಎಂದು ಬಿಂಬಿಸುವ ಮುಖಾಂತರ ಪೊಲೀಸ್ ಇಲಾಖೆ ಮೆಹಬೂಬ್‌ರ ಪ್ರಜಾಸತ್ತಾತ್ಮಕ ಹಾಗೂ ಮಾನವ ಹಕ್ಕುಗಳನ್ನು ದಮನ ಮಾಡಿದೆ.

ಈ ಹಿನ್ನೆಲೆಯಲ್ಲಿ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಮಲ್ನಾಡ್ ಮೆಹಬೂಬ್‌ ರನ್ನು ಗಡೀಪಾರು ಮಾಡಿರುವ ಆದೇಶವನ್ನು ಜಿಲ್ಲಾಧಿಕಾರಿಗಳು ಪುನರ್ ಪರಿಶೀಲಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ ಹಾಗೂ ಮೆಹಬೂಬ್‌ ರನ್ನು ರೌಡಿಪಟ್ಟಿಯಿಂದ ಕೈಬಿಡಬೇಕೆಂದು ಜಿಲ್ಲಾ ಆರಕ್ಷಕ ಅಧೀಕ್ಷಕರನ್ನು ಒತ್ತಾಯಿಸುತ್ತೇವೆ. ಪೊಲೀಸರು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಪಟ್ಟಿಯಲ್ಲಿ ಸಕಲೇಶಪುರದ ಮುಸ್ಲಿಂ ಮುಖಂಡ ಮುಫೀಸ್ ಮತ್ತೂ ಕೆಲವರು ಅಮಾಯಕರಿದ್ದು ಅವರ ಹೆಸರುಗಳನ್ನೂ ಕೈಬಿಡಬೇಕೆಂದು ನಾವು ಈ ಮೂಲಕ ಒತ್ತಾಯಿಸುತ್ತಿದ್ದೇವೆ ಹಾಗೂ ಮಲ್ನಾಡ್ ಮೆಹಬೂಬ್, ಅವರ ಕುಟುಂಬಕ್ಕೆ ನಾವು ನೈತಿಕ ಬೆಂಬಲವಾಗಿದ್ದು ಯಾವುದೇ ಅಪರಾಧ ಮಾಡದೆ ಕೇವಲ ಸಂಘ ಪರಿವಾರ ಮತ್ತು ಭ್ರಷ್ಟರ, ಅಧಿಕಾರಸ್ಥರ ಹಾಗೂ ಪೊಲೀಸರ ಪಿತೂರಿಯಿಂದಾಗಿ ಮೆಹಬೂಬ್‌ ರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ ಎನ್ನುವುದನ್ನು ಸಾರ್ವಜನಿಕರಿಗೆ ನಾವು ಸ್ಪಷ್ಟಪಡಿಸುತ್ತಿದ್ದೇವೆ ಹಾಗೂ ಮೆಹಬೂಬ್ ಪರವಾಗಿ ಪ್ರಜ್ಞಾವಂತ ನಾಗರಿಕರ ಸಮೂಹವೇ ಬೆಂಬಲಕ್ಕಿದೆ ಎನ್ನುವುದನ್ನು ಈ ಮೂಲಕ ತಿಳಸುತ್ತಿದ್ದೇವೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. 

ಈ ಸಂದರ್ಭ ಹಿರಿಯ ದಲಿತ ಮುಖಂಡರಾದ ಎಚ್. ಕೆ.ಸಂದೇಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಎಸ್.ಎನ್. ಮಲ್ಲಪ್ಪ, ಹೆತ್ತೂರು ನಾಗರಾಜು, ಆಝಾದ್ ಟಿಪ್ಪು ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಮುಬಶ್ಶಿರ್ ಅಹ್ಮದ್ ಉಪಸ್ಥಿತರಿದ್ದರು.

ಮಲ್ನಾಡ್ ಮೆಹಬೂಬ್ ಗಡಿಪಾರು ಆಘಾತಕಾರಿ:  ಮುನೀರ್ ಕಾಟಿಪಳ್ಳ

ಪತ್ರಕರ್ತ ಮಲ್ನಾಡ್ ಮೆಹಬೂಬ್ ನನ್ನ ಗೆಳೆಯರು. ಮಾಧ್ಯಮದ ವರದಿಗಾರಿಕೆಯ ಜೊತೆಗೆ ಅಲ್ಪಸಂಖ್ಯಾತರ, ದಲಿತರ ಪರ ಧ್ವನಿ ಎತ್ತುವ, ಅನ್ಯಾಯಕ್ಕೊಳಗಾದವರ ಪರ ನಿಲ್ಲುವ ಸಾಮಾಜಿಕ ಕಾರ್ಯಕರ್ತರೂ ಹೌದು. ಕೋಮುವಾದದ ವಿರುದ್ಧ ಯಾವುದೇ ರಾಜಿ ಇಲ್ಲದೆ ಮಾತನಾಡುತ್ತಾ ಬಂದಿದ್ದಾರೆ. ಸಾಹಿತ್ಯ, ಬರಹಗಳಲ್ಲಿ ಆಸಕ್ತಿ ಹೊಂದಿರುವ ಜೀವಪರ ನಿಲುವಿನ‌ ಮನುಷ್ಯ ಮೆಹಬೂಬ್ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ  ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ. 

ಡಿವೈಎಫ್ಐ ಮುಂಗಳೂರಿನಲ್ಲಿ ಮುಸ್ಲಿಂ ಯುವ ಸಮಾವೇಶ ನಡೆಸಿದಾಗ, ಪಿನರಾಯಿ ವಿಜಯನ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ಸಾಮರಸ್ಯ ರ‌್ಯಾಲಿ ನಡೆಸಿದಾಗ, ಜನನುಡಿಯ ಸಂದರ್ಭಗಳಲೆಲ್ಲ ಗೆಳೆಯರ ತಂಡ ಕಟ್ಟಿ ಮಂಗಳೂರಿಗೆ ಬಂದಿದ್ದಾರೆ. ಮುಸ್ಲಿಂ ಚಿಂತಕರ ಚಾವಡಿಯಲ್ಲಿಯೂ ಸಕ್ರಿಯರಾಗಿದ್ದಾರೆ. ಇಂತಹ ಪ್ರಗತಿಪರ, ಜನಪರ ಆಲೋಚನೆಯ ಗೆಳೆಯನನ್ನು ಚುನಾವಣೆಯ ಹಿನ್ನೆಲೆಯಲ್ಲಿ ಹಾಸನ ಪೊಲೀಸರು ಜಿಲ್ಲೆಯಿಂದ ಗಡೀಪಾರು ಮಾಡಿದ್ದಾರೆ ಎಂಬ ವಿಷಯ ತಿಳಿದು ಆಘಾತವಾಯಿತು. ಮೆಹಬೂಬ್ ಈಗ ತನ್ನ ಅಂಗವಿಕಲ ಮಗ, ವಾರಕ್ಕೆರಡು ಬಾರಿ ಡಯಾಲಿಸಿಸ್ ಗೆ ಒಳಗಾಗಬೇಕಾದ ತಂದೆಯನ್ನು ಬಿಟ್ಟು ಹಾಸನ ಜಿಲ್ಲೆ ತೊರೆಯಬೇಕಿದೆ. ಹಾಗಂತ ಪೊಲೀಸರು ಆದೇಶ ಹೊರಡಿಸಿದ್ದಾರೆ. ಇದು ಅಮಾನವೀಯ, ಪ್ರಜಾಪ್ರಭುತ್ವದ ಅಣಕ.

ಮೈತ್ರಿ ಸರಕಾರದ ಪೊಲೀಸರಿಗೆ ರೌಡಿಗಳು ಯಾರು, ಸಮಾಜಘಾತುಕರು ಯಾರು, ಪತ್ರಕರ್ತರು, ಹೋರಾಟಗಾರರು ಯಾರು ಎಂದು ತಿಳಿಯದಿರುವುದು ದುರಂತ. ಅದರಲ್ಲೂ ಕೋಮುವಾದ, ಜಾತೀಯತೆಯ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿಯೇ ಮಲ್ನಾಡ್ ಮೆಹಬೂಬ್ ಮೇಲೆ ದ್ವೇಷ ಸಾಧಿಸಲಾಗಿದೆ. ಪೊಲೀಸರ ಈ ನಡೆಯನ್ನುಡಿವೈಎಫ್ಐ ಕರ್ನಾಟಕ ರಾಜ್ಯ  ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಗಡೀಪಾರು ಆದೇಶ ವಾಪಾಸ್ ಪಡೆಯುವಂತೆ, ಆದೇಶ ಹೊರಡಿಸಲು ಪಿತೂರಿ ನಡೆಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ. ರಾಜ್ಯದ ಜನಪರ ಶಕ್ತಿಗಳು ಈ ಸಂದರ್ಭ ಮಲ್ನಾಡ್ ಮೆಹಬೂಬ್ ಜೊತೆಗೆ ನಿಲ್ಲಬೇಕೆಂದು ಡಿವೈಎಫ್ಐ ಮನವಿ ಮಾಡುತ್ತದೆ ಎಂದು  ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News