ಕಾಂಗ್ರೆಸ್ ಅಭ್ಯರ್ಥಿ ರಿಝ್ವಾನ್ ಅರ್ಶದ್, ಕಾಂಗ್ರೆಸ್ ಬೆಂಬಲಿಗ ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ

Update: 2019-04-11 12:54 GMT
ರಿಝ್ವಾನ್ ಅರ್ಶದ್

ಬೆಂಗಳೂರು, ಎ.11: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಝ್ವಾನ್ ಅರ್ಶದ್ ಹಾಗೂ ಪ್ರತಿಷ್ಠಿತ ಉದ್ಯಮಿಗಳ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಗುರುವಾರ ಬೆಳಗ್ಗೆ 6ರ ಸುಮಾರಿಗೆ 100ಕ್ಕೂ ಅಧಿಕ ಐಟಿ ಅಧಿಕಾರಿಗಳ ತಂಡ, ಪ್ರತಿಷ್ಠಿತ ಉದ್ಯಮಿಗಳಾದ ಪ್ಯಾಲೆಸ್ ಡೆಕೋರೇಷನ್ ಮಾಲಕ ಅಮಾನುಲ್ಲಾ ಖಾನ್, ಗೋಲ್ಡನ್ ಆರ್ಚರಿ ಮಾಲಕ ಕಮಲ್ ಪಾಷಾ, ರಿಯಲ್ ಎಸ್ಟೇಟ್ ಉದ್ಯಮಿ ನಯೀಝ್ ಖಾನ್ ಅವರ ಮನೆ ಹಾಗೂ ಕಚೇರಿ ಸೇರಿದಂತೆ 20ಕ್ಕೂ ಹೆಚ್ಚು ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ.

ಐಟಿ ಅಧಿಕಾರಿಗಳಿಗೆ ದಾಖಲೆ ಪತ್ರ, ಅಪಾರ ಪ್ರಮಾಣದ ನಗದು ಹಣ, ಚಿನ್ನಾಭರಣ, ಸ್ಥಿರಾಸ್ತಿ, ಚರಾಸ್ತಿಗಳ ದಾಖಲೆ ಹಾಗೂ ಇನ್ನಿತರ ವ್ಯವಹಾರಗಳಿಗೆ ಸಂಬಂಧಿಸಿದ ಮಹತ್ವದ ಕಡತಗಳು ಪತ್ತೆಯಾಗಿದ್ದು, ವಶಕ್ಕೆ ಪಡೆದು ಪರಿಶೀಲನೆ ಮುಂದುವರೆಸಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಒಳಗಾದ ಉದ್ಯಮಿಗಳು ಬೆಂಗಳೂರು ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಝ್ವಾನ್ ಅರ್ಶದ್ ಅವರ ಆಪ್ತರು ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಝ್ವಾನ್ ಅರ್ಶದ್, ಇದು ರಾಜಕೀಯ ಪ್ರೇರಿತ ದಾಳಿ. ಐಟಿ ಅಧಿಕಾರಿಗಳು ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ.
ಹೀಗಾಗಿಯೇ ಪದೇ ಪದೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News