ಸಿಎಂ ಕುಮಾರಸ್ವಾಮಿ ದೇಶದ್ರೋಹಿ, ವಿಶ್ವಾಸಘಾತುಕ ಎಂದ ಬಿ.ಎಸ್.ಯಡಿಯೂರಪ್ಪ

Update: 2019-04-11 14:24 GMT

ಚಿಕ್ಕಮಗಳೂರು, ಎ.11: ಪುಲ್ವಾಮ ದಾಳಿ ಬಗ್ಗೆ ತನಗೆ ಎರಡು ವರ್ಷಗಳ ಮೊದಲೇ ಮಾಹಿತಿ ಇದೆ ಎನ್ನುವ ಮೂಲಕ ಸಿಎಂ ಕುಮಾರಸ್ವಾಮಿ ಅವರು ದೇಶದ್ರೋಹದ, ವಿಶ್ವಾಸಘಾತುಕದ ಕೆಲಸ ಮಾಡಿದ್ದಾರೆ. ದಾಳಿಯಾಗುವ ಬಗ್ಗೆ ಮೊದಲೇ ಅವರಿಗೆ ಮಾಹಿತಿ ಸಿಕ್ಕಿದ್ದರೆ ರಾಷ್ಟ್ರಪತಿಗೆ ಇಲ್ಲವೇ ಸೈನ್ಯದ ಉನ್ನತಾಧಿಕಾರಿಗಳಿಗೆ ಪತ್ರ ಬರೆದು ತಿಳಿಸಬಹುದಿತ್ತು. ದಾಳಿ ಬಗ್ಗೆ ಮಾಹಿತಿ ಇದ್ದಾಗ್ಯೂ ಅವರು ಮೌನವಹಿಸಿ ದೇಶದ್ರೋಹಿಯಾಗಿದ್ದಾರೆಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರಿಗೆ ಸೋಲಿನ ಮುನ್ಸೂಚನೆ ಸಿಕ್ಕಿದೆ. ಈ ಕಾರಣಕ್ಕೆ ಅವರು ಹತಾಶೆಯಿಂದ ಎಲ್ಲೆಡೆ ಜನರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಸುಮಲತಾ ಅವರು ಗೆಲ್ಲುತ್ತಾರೆಂಬ ಭೀತಿಯಿಂದಾಗಿ ಮಾಧ್ಯಮದವರಿಗೂ ಸಿಎಂ ಬೆದರಿಕೆ ಹಾಕಿದ್ದಾರೆ. ಮಾಧ್ಯಮದವರ ಮೇಲೆ ದಾಳಿಯಾದರೇ ತಾನು ಜವಾಬ್ದಾರನಲ್ಲ ಎಂಬ ಹೇಳಿಕೆ ನೀಡುವ ಮೂಲಕ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ಮಾಧ್ಯಮದವರ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆಂದು ಯಡಿಯೂರಪ್ಪ ಆರೋಪಿಸಿದರು.

ಸಿಎಂ ಕುಮಾರಸ್ವಾಮಿ ವಿಧಾನಸಭೆ ಚುನಾವಣೆಗೂ ಮುನ್ನ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ 24 ಗಂಟೆಯೊಳಗೆ ರೈತರು ರಾಷ್ಟ್ರೀಯ ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿ ಮಾಡಿದ 69 ಸಾವಿರ ಕೋ. ರೂ. ಸಾಲವನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಅಧಿಕಾರಕ್ಕೆ ಬಂದು ವರ್ಷವಾದರೂ ಸಾಲಮನ್ನಾ ಯೋಜನೆಯ ಹಣ ಪೂರ್ಣ ಪ್ರಮಾಣದಲ್ಲಿ ರಾಜ್ಯದ ರೈತರ ಖಾತೆಗೆ ಬಂದಿಲ್ಲ. ಈ ಸಂಬಂಧ ವಾಸ್ತವಿಕ ಅಂಶಗಳನ್ನು ಒಪ್ಪಿಕೊಳ್ಳದ ಸಿಎಂ ಕುಮಾರಸ್ವಾಮಿ, ತನ್ನನ್ನು ಜನತೆ ಸಿಎಂ ಮಾಡಿಲ್ಲ. ರಾಹುಲ್‍ಗಾಂಧಿ ಸಿಎಂ ಮಾಡಿದ್ದಾರೆ. ನನ್ನ ನಿಷ್ಠೆ ರಾಹುಲ್‍ಗಾಂಧಿಗೆ ಎಂದು ಉಢಾಪೆ ಮಾತನ್ನಾಡುತ್ತಿದ್ದಾರೆಂದ ಅವರು, ಸಾಲಮನ್ನಾವೂ ಇಲ್ಲ, ಅಭಿವೃದ್ಧಿಯೂ ಇಲ್ಲ. ಕುಮಾರಸ್ವಾಮಿ ಆಡಳಿತದಿಂದಾಗಿ ರಾಜ್ಯ ಅಭಿವೃದ್ಧಿಯಲ್ಲಿ ಐದು ವರ್ಷ ಹಿಂದಕ್ಕೆ ಹೋಗಿದೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಶಾಸಕರಾದ ಬೆಳ್ಳಿಪ್ರಕಾಶ್, ಪ್ರಾಣೇಶ್, ಸ್ಥಳೀಯ ಮುಖಂಡ ರಾದ ಸೋಮಶೇಖರ್, ಪ್ರೇಮ್‍ಕುಮರ್, ಕೋಟೆರಂಗನಾಥ್, ವರಸಿದ್ದಿ ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

''ಶೋಭಾ ಕರಂದ್ಲಾಜೆ ಈ ಬಾರಿ ಅತೀ ಹೆಚ್ಚು ಮತಗಳ ಅಂತರದಿಂದ ಚುನಾಯಿತರಾಗುತ್ತಾರೆ. ಓರ್ವ ಮಹಿಳೆಯಾಗಿ, ಸಂಸದೆಯಾಗಿ ಶೋಭಾ ಕರಂದ್ಲಾಜೆ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಮಲೆನಾಡಿಗೆ ಮರಣ ಶಾಸನವಾಗಿದ್ದ ಕಸ್ತೂರಿರಂಗನ್ ವರದಿ ಜಾರಿ ತಡೆಗೆ ಅವರು 7-8 ಬಾರಿ ಪ್ರಧಾನಿಯನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಅರಣ್ಯ ವಾಸಿಗಳ ಎತ್ತಂಗಡಿ ಆದೇಶದ ವಿರುದ್ಧವೂ ಅವರು ಪ್ರಧಾನಿ ಬಳಿ ಚರ್ಚಿಸಿದ್ದಾರೆ. ಶೋಭಾ ಬಗ್ಗೆ ಕ್ಷೇತ್ರದಲ್ಲಿ ಉತ್ತಮ ಜನಾಭಿಪ್ರಾಯವಿದೆ''.

''ರಾಜ್ಯದಲ್ಲಿ ಇತ್ತೀಚೆಗೆ ನಡೆದ ಐಟಿ ದಾಳಿಗೂ ಬಿಜೆಪಿಗೂ ಸಂಬಂಧವೇ ಇಲ್ಲ. ಆದರೆ ಸಿಎಂ ಕುಮಾರಸ್ವಾಮಿ ಈ ದಾಳಿಯನ್ನು ಬಿಜೆಪಿಯವರೇ ಮಾಡಿಸಿ ದ್ದಾರೆಂದು ಹೇಳಿರುವುದು ನಾಚಿಕೆಗೇಡು''
- ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

''ಈ ಬಾರಿಯ ಚುನಾವಣೆ ದೇಶಗೆಲ್ಲಿಸುವ ಚುನಾವಣೆಯಾಗಲಿದೆ. ಹರಿದು ತಿನ್ನುವ ನಾಯಕತ್ವವನ್ನು ಸೋಲಿಸಿ ಹಂಚುವ ನಾಯಕತ್ವವನ್ನು ಈ ಬಾರಿ ಜನತೆ ಗೆಲ್ಲಿಸಲಿದ್ದಾರೆ. ದಲಿತ-ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ ಎನ್ನುವ ಮೈತ್ರಿ ಪಕ್ಷಗಳ ಮುಖಂಡರು ಪ್ರಧಾನಿ ಮೋದಿ ಆಡಳಿತದಲ್ಲಾಗಲೀ, ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಾಗಲಿ ಒಂದೇ ಒಂದು ದುರಂತ ಘಟನೆ ನಡೆದಿರುವ ಬಗ್ಗೆ ಸಾಕ್ಷ್ಯ ನೀಡಲಿ. ಬಿಜೆಪಿ ಸರಕಾರದ ಅವಧಿಯಲ್ಲಿ ದೇಶದಲ್ಲಿ ಒಂದೇ ಒಂದು ಕೋಮುಗಲಭೆ ನಡೆಯದಂತಹ ಆಡಳಿತವನ್ನು ಮೋದಿ ಸರಕಾರ ನೀಡಿದೆ. ಕಾಂಗ್ರೆಸ್‍ಗೆ ದಲಿತರು-ಅಲ್ಪಸಂಖ್ಯಾತರು ಓಟಿನ ಸರಕಾಗಿದ್ದಾರೆ, ಬಿಜೆಪಿಗೆ ಇವರು ವಿಕಾಸದ ಸರಕಾಗಿದ್ದಾರೆ''
- ಸಿ.ಟಿ.ರವಿ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News