ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ತಿಲಾಂಜಲಿ ಹಾಡಲಾಗುತ್ತಿದೆ: ಎಚ್.ಡಿ.ದೇವೇಗೌಡ

Update: 2019-04-11 13:23 GMT

ಕಡೂರು, ಎ.11: ದೇಶದ ಪ್ರಧಾನಿಯಾಗಿ ಮೋದಿ ಎಲ್ಲಾ ವ್ಯವಸ್ಥೆಯನ್ನು ಸರ್ವನಾಶ ಮಾಡಲು ಹೊರಟಿದ್ದಾರೆ. ಇದರಿಂದಾಗಿ ಎಲ್ಲಾ ಜಾತ್ಯಾತೀತ ಶಕ್ತಿಗಳು ಒಂದಾಗಿ ಹಿಂದೂಸ್ಥಾನದಿಂದ ನರೇಂದ್ರ ಮೋದಿಯನ್ನು ಹೊರಹಾಕಬೇಕಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ತಿಲಾಂಜಲಿ ಹಾಡಲಾಗುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ 130ಕೋಟಿ ಜನ ತಿರ್ಮಾನಿಸಿದ್ದಾರೆ. ಈ ಬಿಜೆಪಿಯವರಿಗೆ ಸರ್ಕಾರ ನಡೆಸಲು ಬರುವುದಿಲ್ಲ. ಮೋದಿಯವರನ್ನ, ಬಿಜೆಪಿ ಪಕ್ಷವನ್ನ ಜನ ತಿರಸ್ಕರಿಸಲಿದ್ದಾರೆ. ರಾಹುಲ್ ಗಾಂಧಿಯವರು ನರೇಂದ್ರ ಮೋದಿಯವರ ಸರ್ಕಾರದಲ್ಲಿ ಭ್ರಷ್ಟಚಾರ ನಡೆಯುತ್ತಿದೆ ಎಂದು ಸಂಸತ್‍ನಲ್ಲಿ ಮಾತನಾಡಿದರೆ, ಅದಕ್ಕೆ ಉತ್ತರಿಸದೆ ಹೊರ ಹೋದ ಪ್ರಧಾನಿ ಹೌಸ್‍ನಲ್ಲಿ ಮಾತನಾಡದೆ ಬೀದಿಯಲ್ಲಿ ಮಾತನಾಡುತ್ತಾರೆ ಎಂದು ಟೀಕಿಸಿದರು.

ವಿರೋಧ ಪಕ್ಷದವರು ಅಸೆಡ್ಡೆಯಿಂದ ಲಘುವಾಗಿ ಮಾತನಾಡುತ್ತಿದ್ದಾರೆ. ಕೀಳುಮಟ್ಟದ ಭಾಷೆಯನ್ನು ಉಪಯೋಗಿಸುತ್ತಿದ್ದಾರೆ. ದೇಶದ ವ್ಯವಸ್ಥೆ ಸರಿಯಿಲ್ಲ. ಈ ಕೆಟ್ಟ ವ್ಯವಸ್ಥೆಯಲ್ಲಿ ಚುನಾವಣೆಗೆ ನಿಲ್ಲುವುದೇ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಅನೇಕರು ಸಲಹೆ ನೀಡಿ ಈ ವ್ಯವಸ್ಥೆಯನ್ನು ಸರಿಪಡಿಸಲು ನೀವು ಇರಲೇ ಬೇಕು ಎಂದು ಹೇಳಿದಾಗ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲು ತಿರ್ಮಾನಿಸಲಾಯಿತು ಎಂದರು.

ರಾಜ್ಯದಲ್ಲಿ ಬಿಜೆಪಿ ಪಕ್ಷದ ಗೆಲುವನ್ನು ತಪ್ಪಿಸಲೇಬೇಕಿದೆ. ಕಳೆದ ಬಾರಿ ಅವರು ಗೆದ್ದಿರುವ ಕ್ಷೇತ್ರದಲ್ಲಿ ಕನಿಷ್ಟ 10 ಸ್ಥಾನಗಳು ಮೈತ್ರಿ ಪಕ್ಷಗಳ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಳ್ಳುವುದರ ಮೂಲಕ ಬಿಜೆಪಿಯನ್ನು ಕುಗ್ಗಿಸಬೇಕಿದೆ. ರಾಜ್ಯದ ಹಲವಾರು ಕ್ಷೇತ್ರಗಳಿಗೆ ಸಿದ್ದರಾಮಯ್ಯ ತಾವು ಜೊತೆಗೂಡಿ ಜಂಟಿ ಹೋರಾಟ ಮಾಡುವುದರ ಮೂಲಕ ರಾಜ್ಯದಲ್ಲಿ ಅತಿಹೆಚ್ಚು ಮೈತ್ರಿ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲಾಗುವುದು ಎಂದರು.

ನಮ್ಮ ವಿರೋಧ ಪಕ್ಷದ ಅಭ್ಯರ್ಥಿ ನಮ್ಮ ಬಗ್ಗೆ ಹಲವಾರು ಟೀಕೆಗಳನ್ನು ಮಾಡುತ್ತಾ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಅವರ ಮಾತಿಗೆ ಮತದಾರರು ಬೆಲೆ ನೀಡಬೇಕಿಲ್ಲ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕಡೂರು ವಿಧಾನಸಭಾ ಕ್ಷೇತ್ರಕ್ಕೆ ನನ್ನ ಅನುದಾನದಲ್ಲಿ ಪ್ರತಿ ವರ್ಷ ಒಂದು ಕೋಟಿ ರೂಗಳಂತೆ ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮೈತ್ರಿ ಸರ್ಕಾರದಲ್ಲಿ ಈ ಭಾಗಕ್ಕೆ ನೀರಾವರಿ ಯೋಜನೆಗಳನ್ನು ಮಾಡುವ ಪ್ರಯತ್ನ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್‍ ರೇವಣ್ಣ, ಉಪಸಭಾಪತಿ ಎಸ್.ಎಲ್. ಧರ್ಮೆಗೌಡ, ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಮಾಜಿ ಶಾಸಕರಾದ ಕೆ.ಬಿ.ಮಲ್ಲಿಕಾರ್ಜುನ್, ವೈ.ಎಸ್.ವಿ. ದತ್ತ, ಗಾಯತ್ರಿಶಾಂತೇಗೌಡ, ಹಾಸನ ಆನಂದ್, ಜಿಲ್ಲಾಕಾಂಗ್ರೆಸ್ ಅಧ್ಯಕ್ಷರಾದ ಜಾವಗಲ್ ಮಂಜುನಾಥ್, ಡಿ.ಎಲ್. ವಿಜಯ್‍ಕುಮಾರ್, ಕೆಪಿಸಿಸಿ ಸದಸ್ಯ ಕೆ.ಎಸ್. ಆನಂದ್, ಕೆ.ಎಂ. ಕೆಂಪರಾಜ್, ಜಿ.ಪಂ. ಸದಸ್ಯರಾದ ಶರತ್‍ಕೃಷ್ಣಮೂರ್ತಿ, ಲೋಲಾಕ್ಷಿ ಬಾಯಿ, ವನಮಾಲದೇವರಾಜ್, ಬ್ಯಾಕ್ ಅಧ್ಯಕ್ಷರಾದ ಬಾಸೂರುಚಂದ್ರಮೌಳಿ, ಕಲ್ಲೇಶ್, ಜೆಡಿಎಸ್ ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ, ಭಂಡಾರಿಶ್ರೀನಿವಾಸ್ ಇದ್ದರು.

ಮೈತ್ರಿ ಪಕ್ಷದ ಅಭ್ಯರ್ಥಿ ಪರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಂಟಿಯಾಗಿ ಚುನಾವಣಾ ಪ್ರಚಾರಕ್ಕೆ ಕಡೂರಿನ ಎಪಿಎಂಸಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಮಾವೇಶದಲ್ಲಿ ಅವ್ಯವಸ್ಥೆಗಳ ಆಗರವಾಗಿತ್ತು. ವೇದಿಕೆಯ ಮೇಲೆ ನೂರಕ್ಕೂ ಅಧಿಕ ಜನ ಸೇರಿ ಮುಖಂಡರುಗಳ ಭಾಷಣಕ್ಕೆ ಅಡ್ಡಿಯಾಗುತ್ತಿದ್ದ ದೃಶ್ಯ ಕಂಡು ಬಂದಿತು. ದೇವೇಗೌಡರ ಭಾಷಣ ನಡೆಯುತ್ತಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಜೊತೆ ಸೆಲ್ಪಿ ತೆಗೆದುಕೊಳ್ಳಲು ಯುವಕರು ತಾಮುಂದು ನಾಮುಂದು ಎಂಬಂತೆ ವರ್ತಿಸುತ್ತಿದ್ದು ದೇವೇಗೌಡರ ಭಾಷಣಕ್ಕೆ ಇರಿಸುಮುರಿಸು ಆಗಿದ್ದು ಕಂಡುಬಂದಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News