×
Ad

ಪಾಕಿಸ್ತಾನದೊಂದಿಗೆ ಪ್ರಧಾನಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ: ಸಿದ್ದರಾಮಯ್ಯ

Update: 2019-04-11 18:56 IST

ಕಡೂರು, ಎ.11: ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಮರು ಆಯ್ಕೆ ಆಗಬೇಕಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯನ್ನು ನೋಡಿದರೆ ಇವರುಗಳು ಈ ಚುನಾವಣೆಯಲ್ಲಿ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ದೇಶದ ಜನ ತಿಳಿಯಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಗುರುವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಚುನಾವಣಾ ಪ್ರಚಾರದ ಬಹಿರಂಗ ಸಮಾವೇಶದಲ್ಲಿ ಮಾತನಾಡಿ, ಸುಳ್ಳು ಭರವಸೆಗಳನ್ನು ನೀಡುತ್ತಲೇ ಪ್ರಜೆಗಳನ್ನು ಮೋಸ ಮಾಡುತ್ತಿರುವ ಬಿಜೆಪಿ ಪಕ್ಷವನ್ನು ಮತದಾರರು ಸಾರಾಸಗಟಾಗಿ ತಿರಸ್ಕರಿಸಬೇಕಿದೆ ಎಂದರು.  

ದೇಶದ ಚೌಕಿದಾರ ಎಂದು ಹೇಳಿಕೊಳ್ಳುವ ನರೇಂದ್ರ ಮೋದಿಯವರು ದೇಶವನ್ನು ಕೊಳ್ಳೆ ಹೊಡೆದ ಮಲ್ಯ, ನೀರವ್ ಮೋದಿ ಮುಂತಾದವರು ದೇಶದಿಂದ ಪಲಾಯನ ಮಾಡಿದಾಗ ಎಲ್ಲಿದ್ದರು? ಪುಲ್ವಾಮದಲ್ಲಿ ಉಗ್ರರ ದಾಳಿ ಆದಾಗ ಈ ಚೌಕೀದಾರ ಚಿತ್ರೀಕರಣದಲ್ಲಿದ್ದರು. ಮಾತೆತ್ತಿದರೆ ದೇಶಭಕ್ತಿಯ ಬಗ್ಗೆ ಮಾತನಾಡುವ ಮೋದಿ ಅವರು ಸ್ವತಹ ಬಂದೂಕು ಹಿಡಿದು ಯುದ್ಧ ಮಾಡಿದವರಂತೆ ವರ್ತಿಸುತ್ತಾರೆ ಎಂದು ಅಣುಕಿಸಿದರು.

ಈ ಹಿಂದೆ ಇಂದಿರಾ ಗಾಂಧಿ ಅವರು ಪಾಕಿಸ್ತಾನದ ಜೊತೆ ನಾಲ್ಕು ಯುದ್ದಗಳ ಮೇಲೆ ಜಯಗಳಿಸಿ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದಾಗ ಈಗಿನ ಚೌಕಿದಾರ ಇರಲಿಲ್ಲ. ರೈತರ ಸಾಲ ಮನ್ನಾ ಮಾಡಿ ಅವರ ನೆರವಿಗೆ ಧಾವಿಸಿ ಎಂದು ಸರ್ವಪಕ್ಷ ನಿಯೋಗ ಕರೆದುಕೊಂಡು ಹೋದರೆ ಸ್ಪಂದಿಸದ ಪ್ರಧಾನ ಮಂತ್ರಿ ಮೋದಿ ಅವರು ಉದ್ಯಮಿಗಳ ಸಾಲವನ್ನು ಮನ್ನಾ ಮಾಡಿದರು.  ಸ್ವತಂತ್ರ ಭಾರತದಲ್ಲಿ ಅತ್ಯಂತ ಹೆಚ್ಚು ಸುಳ್ಳು ಹೇಳಿದ ಪ್ರಧಾನ ಮಂತ್ರಿಗಳು ಇದ್ದರೆ ಅದು ನರೇಂದ್ರ ಮೋದಿ ಮಾತ್ರ  ಎಂದು ವಾಗ್ದಾಳಿ ನಡೆಸಿದರು.

ಸ್ಥಳೀಯವಾಗಿ ಕಡೂರು ಅತ್ಯಂತ ಬರಪೀಡಿತ ಪ್ರದೇಶವಾಗಿದೆ. ಈ ಹಿಂದೆ ಉಪಚುನಾವಣೆಯಲ್ಲಿ ಕಡೂರಿಗೆ ಪ್ರಚಾರಕ್ಕೆ ಬಂದ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಕಡೂರನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುತ್ತೇನೆ ಎಂದು ಬೊಗಳೆ ಹೊಡೆದರು. ನಂತರ ಅವರಿಗೆ ಕಡೂರು ನೆನಪಾಗಲಿಲ್ಲ. ಈಗ ಮತ್ತೆ ಅದೇ ಮಾತುಗಳನ್ನು ಆಡುತ್ತಿದ್ದಾರೆ. ತಾಲೂಕಿನ ಅಭಿವೃದ್ಧಿ ಬಿಜೆಪಿ ಅವರಿಂದ ಸಾಧ್ಯವಿಲ್ಲ. ಅದೇನಿದ್ದರೂ ಸಮ್ಮಿಶ್ರ ಸರ್ಕಾರದಿಂದ ಮಾತ್ರ ಸಾಧ್ಯ. ಬೇರಾವುದಕ್ಕೂ ಕಿವಿಗೊಡದೆ ಮೈತ್ರಿ ಪಕ್ಷಗಳ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಬಹುಮತದಿಂದ ಗೆಲ್ಲಿಸಿ. ಎರಡು ಪಕ್ಷಗಳ ಕಾರ್ಯಕರ್ತರು ಭಿನ್ನಾಭಿಪ್ರಾಯವನ್ನು ಮರೆತು ಪ್ರಜ್ವಲ್ ಗೆಲುವಿಗೆ ದುಡಿಯಬೇಕು. ಕೋಮುವಾದಿ ಶಕ್ತಿಗಳಿಗೆ ದಯಮಾಡಿ ಮತ ಚಲಾಯಿಸಬೇಡಿ. ಕಡೂರಿನ ಶಾಶ್ವತ ನೀರಾವರಿ ಯೋಜನೆಗಳಿಗೆ ನಾನು, ದೇವೇಗೌಡರು ಮತ್ತು ಕುಮಾರಸ್ವಾಮಿ ಮೂವರು ಸೇರಿ ಹಣವನ್ನು ಮಂಜೂರು ಮಾಡುವುದು ನಮ್ಮ ಜವಾಬ್ದಾರಿ ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News