ಸಾಮಾಜಿಕ ಹೋರಾಟಗಾರ ಮಲ್ನಾಡ್ ಮೆಹಬೂಬ್ ಗಡಿಪಾರು ಖಂಡನೀಯ: ದಲಿತ ಮುಖಂಡ ಸಂದೇಶ್
ಹಾಸನ: ಪೊಲೀಸ್ ಇಲಾಖೆಯ ಪಿತೂರಿಯಿಂದ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಮಲ್ನಾಡ್ ಮೆಹಬೂಬ್‍ರವರನ್ನು ಗಡಿಪಾರು ಮಾಡಿರುವುದು ಖಂಡನೀಯವಾಗಿದ್ದು, ಕೂಡಲೇ ರೌಡಿಶೀಟನ್ನು ರದ್ದು ಮಾಡುವಂತೆ ಹಿರಿಯ ದಲಿತ ಮುಖಂಡ ಎಚ್.ಕೆ. ಸಂದೇಶ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಸಂಘ ಪರಿವಾರ ಮತ್ತು ಪೋಲೀಸ್ ಇಲಾಖೆಯ ಪಿತೂರಿಯಿಂದಾಗಿ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಮಲ್ನಾಡ್ ಮೆಹಬೂಬ್‍ರವರನ್ನು ದುರುದ್ದೇಶದಿಂದ 'ರೌಡಿಪಟ್ಟಿ'ಗೆ ಸೇರಿಸಿ ಅವರನ್ನು ಮೇ 30ರವರೆಗೆ ಜಿಲ್ಲೆಯಿಂದ ಗಡಿಪಾರು ಮಾಡಿರುವ ಕ್ರಮ ಖಂಡನೀಯವಾದುದು. ಇದೊಂದು ಜನಪರ ಹೋರಾಟಗಾರರನ್ನು ಹತ್ತಿಕ್ಕುವ ಕ್ರಮವಾಗಿದ್ದು, ಜನರ ಪರವಾಗಿ ಬರೆಯುವ ಹಾಗೂ ಕೆಲಸ ಮಾಡುವವರನ್ನು ನೈತಿಕವಾಗಿ ಕುಗ್ಗಿಸುವ ಪಿತೂರಿಯಾಗಿದೆ ಎಂದರು.
ಹಲವು ವರ್ಷಗಳಿಂದ ಪತ್ರಕರ್ತರಾಗಿ ಸಾಮಾಜಿಕ, ಪರಿಸರ ಮತ್ತು ಜನರ ನೈಜ ಸಮಸ್ಯೆಗಳ ಬಗ್ಗೆ ಹಾಗೂ ವಿಶೇಷವಾಗಿ ದಲಿತರ, ಅಲ್ಪಸಂಖ್ಯಾತರ ಮತ್ತು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತುಳಿತಕ್ಕೊಳಗಾಗಿರುವ ಶೋಷಿತರ ಸಮಸ್ಯೆಗಳ ಕುರಿತು ಪತ್ರಿಕೆಗಳಲ್ಲಿ ವರದಿಗಳು ಮತ್ತು ಲೇಖನಗಳನ್ನು ಬರೆಯುವ ಮುಖಾಂತರ ಆಡಳಿತದಲ್ಲಿರುವವರ ಗಮನಕ್ಕೆ ತರುವಲ್ಲಿ ಯಶಸ್ವಿಯಾದವರು. ಕೋಮುವಾದ, ಭಯೋತ್ಪಾದನೆ, ಅಸ್ಪೃಶ್ಯತೆ ಮತ್ತು ಮಹಿಳಾ ದೌರ್ಜನ್ಯಗಳ ವಿರುದ್ಧದ ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಬೆಳೆಯುತ್ತಿರುವ ಕೋಮುವಾದ ಮತ್ತು ಧಾರ್ಮಿಕ ಮೂಲಭೂತವಾದದ ವಿರುದ್ಧವಾಗಿ ಧಾರ್ಮಿಕ ಸಾಮರಸ್ಯ ಹಾಗೂ ಶಾಂತಿ ಮತ್ತು ಸೌಹಾರ್ದಯುತ ಸಮಾಜಕ್ಕಾಗಿ ಸಕ್ರಿಯವಾಗಿ ತೊಡಗಿಕೊಂಡಿದ್ದರು ಎಂದರು.
ಸ್ವತಃ ಕವಿಯೂ ಆಗಿರುವ ಮಲ್ನಾಡ್ ಮೆಹಬೂಬ್‍ರವರು ಜಿಲ್ಲೆಯ ಸಾಹಿತ್ಯ ಚಟುವಕೆಯಲ್ಲಿ ಗುರುತಿಸಿಕೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಜ್ರಾಬಾದ್ ದರ್ಗಾ ಸಮಿತಿ ಅಧ್ಯಕ್ಷರಾಗಿದ್ದು 30 ಅನಾಥ ಮಕ್ಕಳನ್ನು ತನ್ನ ಮಕ್ಕಳಂತೆ ಪಾಲನೆಮಾಡುತ್ತಿದ್ದಾರೆ ಎಂದರು.
ಅಧಿಕಾರಸ್ಥರ ಭ್ರಷ್ಟಾಚಾರದ ವಿರುದ್ಧ, ಕೋಮುವಾದದ ವಿರುದ್ಧ, ನಾಗರಿಕ ಸಮಸ್ಯೆಗಳ ವಿರುದ್ಧ, ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಹಾಗೂ ಪರಿಸರ ಚಳುವಳಿಗಳು ಹೋರಾಟಗಳಲ್ಲಿ ಭಾಗವಹಿಸಿದ ಕಾರಣ ಸಾಮಾಜಿಕ ಹೋರಾಟಗಾರರ ಮೇಲೆ ದಾಖಲಾಗುವ ಪ್ರಕರಣಗಳು ಮೆಹಬೂಬ್‍ರವರ ಮೇಲೂ ದಾಖಲಾಗಿವೆ. ಅವುಗಳಲ್ಲಿ ಬಹುತೇಕ ಪ್ರಕರಣಗಳು ದುರುದ್ಧೇಶದ ಪ್ರಕರಣಗಳಾಗಿವೆ. ಮುಸ್ಲಿಂ ಸಮುದಾಯದಿಂದ ಬಂದಿರುವ ಮೆಹಬೂಬ್‍ರವರು ಪ್ರಗತಿಪರ ಹೋರಾಟಗಳಲ್ಲಿ ಗುರಿತಿಸಿಕೊಳ್ಳುವುದನ್ನು ಅರಗಿಸಿಕೊಳ್ಳಲಾರದ ಕೆಲಸವರ ಪಿತೂರಿಯಿಂದ ಅವರ ಮೇಲೆ ಹಲವು ಸುಳ್ಳು ಮೊಕದ್ದಮೆಗಳನ್ನು ಹೂಡಲಾಗಿದೆ ಎಂದು ದೂರಿದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನಮ್ಮ ಮತ ಮಾರಾಟಕ್ಕಿಲ್ಲ ಎಂಬ ಜನ ಜಾಗೃತಿಯ ಕಾರ್ಯಕ್ರಮವನ್ನು ರೂಪಿಸಿ ಜನ ಮೆಚ್ಚುಗೆಗೆ ಪಾತ್ರವಾಗಿದ್ದರು. ವಿಪರ್ಯಾಸವೆಂದರೆ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲೆಯ 'ರೌಡಿಪಟ್ಟಿ'ಯಲ್ಲಿರುವವರನ್ನು ಗಡಿಪಾರು ಮಾಡುವ ಆದೇಶ ಮಾಡುವಾಗ ಅವರ ಮೇಲಿರುವ ಪ್ರಕರಣಗಳ ಹಿನ್ನೆಲೆ, ವ್ಯಕ್ತಿಗಳ ಹಿನ್ನೆಲೆಯನ್ನು ವಿಚಾರಣೆ ಮಾಡಿ ಪರಿಶೀಲಿಸದೆ ಏಕಾಏಕಿಯಾಗಿ ಗಡಿಪಾರು ಮಾಡಿರುವುದು ಅನ್ಯಾಯದ ಕ್ರಮವಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರಕ್ಷಕ ಅಧೀಕ್ಷಕರು ಕೆಲ ದಿನಗಳ ಹಿಂದಷ್ಟೇ ಜಿಲ್ಲೆಗೆ ವರ್ಗಾವಣೆಯಾಗಿ ಬಂದವರು. ಅವರಿಗೆ ಮಲ್ನಾಡ್ ಮೆಹಬೂಬ್ ಕುರಿತು ನೈಜ ಮಾಹಿತಿ ನೀಡದೆ ಮೆಹಬೂಬ್ ವಿರುದ್ಧ ಸಕಲೇಶಪುರ ಪೋಲೀಸರು ಸುಳ್ಳು ಮಾಹಿತಿಗಳನ್ನು ನೀಡಿ ಮೆಹಬೂಬ್‍ರವರನ್ನು ಜಿಲ್ಲೆಯಿಂದ ಗಡಿಪಾರು ಮಾಡಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಲ್ನಾಡ್ ಮೆಹಬೂಬ್‍ರವರ ತಂದೆ ತೀವ್ರ ಅನಾರೋಗ್ಯ ಪೀಡಿತರಾಗಿದ್ದು, ಅವರಿಗೆ ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಿಸಬೇಕಾದ ಅನಿವಾರ್ಯತೆಯಿದೆ. ಅಂಗವಿಕಲ ಮಗುವಿನ ತಂದೆಯಾಗಿರುವ ಮೆಹಬೂಬ್ ತನ್ನ ಕುಟುಂಬಕ್ಕೆ ಆಸರೆಯಾಗಿ ಸದಾ ಜೊತೆಗಿರಬೇಕಾದ ಅನಿವಾರ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ತಿಂಗಳುಗಟ್ಟಲೆ ಕುಟುಂಬದ ಜವಾಬ್ಧಾರಿ ತೊರೆದು ಜಿಲ್ಲೆಯಿಂದ ಹೊರಗಿದ್ದರೆ ಅವರ ಕುಟುಂಬದ ಮೇಲೆ ಬೀರಬಹುದಾದ ಪರಿಣಾಮಗಳಿಗೆ ಜವಾಬ್ಧಾರಿ ಯಾರು? ಎಂದು ಪ್ರಶ್ನೆ ಮಾಡಿದರು.
ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಮಲ್ನಾಡ್ ಮೆಹಬೂಬ್‍ರವರನ್ನು ಗಡಿಪಾರು ಮಾಡಿರುವ ಆದೇಶವನ್ನು ಜಿಲ್ಲಾಧಿಕಾರಿಗಳು ಪುನರ್ ಪರಿಶೀಲಿಸಿ ಹಾಗೂ ಮೆಹಬೂಬ್‍ರವರನ್ನು 'ರೌಡಿಪಟ್ಟಿ'ಯಿಂದ ಕೈಬಿಡಬೇಕೆಂದು ಜಿಲ್ಲಾ ಆರಕ್ಷಕ ಅಧೀಕ್ಷಕರನ್ನು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಕರ್ನಾಟಕ ದಲಿತ ಸಂಘಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಹೆತ್ತೂರು ನಾಗರಾಜು, ಅಜಾದ್ ಟಿಪ್ಪು ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮುಬಶಿರ್ ಅಹಮದ್ ಉಪಸ್ಥಿತರಿದ್ದರು.