ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ: ಎಚ್.ಡಿ.ರೇವಣ್ಣ

Update: 2019-04-11 16:18 GMT

ಮೈಸೂರು,ಎ.11: ಬಿಜೆಪಿಯವರು ಕಳೆದ 10 ವರ್ಷಗಳಿಂದ ರಾಮಭಜನೆ ಮಾಡುತ್ತಿದ್ದರು. ಈಗ ಬೆಳ್ಳಿಗ್ಗೆಯಾಗುತ್ತಿದ್ದಂತೆ ದೇವೇಗೌಡರ ಭಜನ ಶುರು ಮಾಡಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಲೇವಡಿ ಮಾಡಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ಕಳೆದ 10 ವರ್ಷಗಳಿಂದ ರಾಮದೇವರ ಭಜನೆ ಮಾಡುತ್ತಿದ್ದರು. ಈಗ ಬೆಳಿಗ್ಗೆಯಾಗುತ್ತಿದ್ದಂತೆಯೇ ದೇವೇಗೌಡರ ಭಜನೆ ಶುರು ಮಾಡಿದ್ದಾರೆ. ರಾಮಮಂದಿರ ವಿಚಾರದಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಬಿಜೆಪಿಯ ಎಲ್ಲ ನಾಯಕರೂ ದೇವೇಗೌಡರ ಭಜನೆ ಶುರು ಮಾಡಿದ್ದಾರೆ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದಗೌಡ ಎಲ್ಲರೂ ದೇವೇಗೌಡರ ಭಜನೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

22,6,8 ನಮಗೆ ಲಕ್ಕಿ ರೀ ಎಂದು ವಾಸ್ತು ಪ್ರಕಾರವೇ ಹೇಳಿಕೆ ನೀಡಿದರು. 22 ಸೀಟು ನಾವು ಗೆಲ್ಲುತ್ತೇವೆ. ಆ 22 ನಂ ನಮಗೆ ಲಕ್ಕಿ. ಅದು ಯಡ್ಯೂರಪ್ಪನವರಿಗೆ ಲಕ್ಕಿ ಆಗಲ್ಲ. 18 ನಂಬರ್ ಸಹ ನಮಗೆ ಲಕ್ಕಿಯೇ , 2018 ಇತ್ತು 8+1=9 ಅದಕ್ಕೆ ಕುಮಾರಸ್ವಾಮಿ ಸಿಎಂ ಆಗಿದ್ದು. ಈಗಲೂ 18 ರಂದು ಚುನಾವಣೆ ಇದೆ. 1+8 ಈಗಲೂ ಯೂಪಿಎ ಅಧಿಕಾರಕ್ಕೆ ಬರಲಿದೆ. ಮೋದಿ ಇನ್ನೊಮ್ಮೆ ಪ್ರಧಾನಿ ಆಗೋಲ್ಲ. ಮೋದಿ ಪ್ರಧಾನಿ ಆದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ನಾನು ಜಂಟಿ ಅಭ್ಯರ್ಥಿ ಪರ ಮತಯಾಚನೆ ಮಾಡಲು ಬಂದಿದ್ದೇನೆ. ನಮ್ಮ ಅಭ್ಯರ್ಥಿಗಳಾದ ವಿಜಯ್‍ಶಂಕರ್, ಧೃವನಾರಾಯಣ್‍ಗೆ ಮತ ಹಾಕಿ. ಸಿದ್ದರಾಮಯ್ಯ, ದೇವೇಗೌಡರು ಒಟ್ಟಾಗಿ ಪ್ರಚಾರ ಮಾಡಲಿದ್ದಾರೆ. ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರದಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ಅವರ ಗೆಲುವಿಗೆ ನಮ್ಮ ದೋಸ್ತಿ ಪಕ್ಷದ ನಾಯಕರು ಶ್ರಮ ವಹಿಸಿದ್ದಾರೆ ಎಂದರು.

ನಿಂಬೆಹಣ್ಣಿನ ರಹಸ್ಯ ಬಿಚ್ಚಿಟ್ಟ ಹೆಚ್.ಡಿ.ರೇವಣ್ಣ ಕೆಲವೊಂದಕ್ಕೆ ನಿಂಬೆಹಣ್ಣು ಬೇಕೆ ಬೇಕು ಅದಕ್ಕೆ ಹಿಡಿದುಕೊಂಡಿರುತ್ತೇನೆ. ನಮ್ಮನೆ ದೇವರು ಈಶ್ವರ. ಈಶ್ವರ ಫೋಟೋ ಜೊತೆ ನಿಂಬೆಹಣ್ಣು ಇಟ್ಟುಕೊಂಡಿರುತ್ತೇನೆ. 

ಮಾಧ್ಯಮದವರ ಮೇಲೆ ಹಲ್ಲೆಯಾದರೆ ನಾನು ಜವಾಬ್ದಾರನಲ್ಲ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಾಧ್ಯಮದವರ ಮೇಲೆ ಹಲ್ಲೆಗೆ ಬಿಜೆಪಿಯವರ ಒಂದು ತಂಡ ರೆಡಿಯಾಗಿದೆ. ನಿಮ್ಮ ಒಳ್ಳೆಯದಕ್ಕೆ ಅವರು ಹೇಳಿರೋದು. ಬಿಜೆಪಿಯವರು ಹಲ್ಲೆ ಮಾಡಿದರೆ ನೀವು ಜೆಡಿಎಸ್‍ನವರು ಹಲ್ಲೆ ಮಾಡಿದ್ದಾರೆ ಅಂದುಕೊಳ್ಳುತ್ತೀರಿ. ಆ ಅರ್ಥದಲ್ಲಿ ಅವರು ಹೇಳಿರೋದು. ನೀವು ಜಾಗೃತರಾಗಿರಿ ಅದು ಬಿಟ್ಟು ಬೇರೆ ಏನೂ ಇಲ್ಲ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಸಚಿವ ಜಿ.ಟಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಎಂಎಲ್‍ಸಿ ಮರಿತಿಬ್ಬೆಗೌಡ, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ವಿಜಯಕುಮಾರ್, ಜೆಡಿಎಸ್ ಜಿಲ್ಲಾಧ್ಯಾಕ್ಷ ನರಸಿಂಹಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News