ಅಂಚೆ ಮತದಾನದ ವೇಳೆ ಹಣ ಹಂಚಿದ ಪ್ರತಾಪ್ ಸಿಂಹ: ಶಾಸಕ ತನ್ವೀರ್ ಸೇಠ್ ಆರೋಪ

Update: 2019-04-11 16:12 GMT

ಮೈಸೂರು,ಎ.11: ನಗರದ ಡಿಎಆರ್‍ನಲ್ಲಿ ಬುಧವಾರ ನಡೆದ ಅಂಚೆ ಮತದಾನದ ವೇಳೆ ಬಿಜೆಪಿ ಅಭ್ಯರ್ಥಿ ಪ್ರತಾಪ್‍ ಸಿಂಹ ಸಮೀಪದ ವಿಂಡ್ ಫ್ಲವರ್ ಹೊಟೇಲ್‍ನಲ್ಲಿ ಮತದಾರರಿಗೆ ಹಣ ಹಂಚಿದ್ದು, ಈ ಬಗ್ಗೆ ತಾವು ನೀಡಿರುವ ದೂರನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಶಾಸಕ ತನ್ವೀರ್ ಸೇಠ್ ಆಗ್ರಹಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಹೆಚ್ಚು ಮತ ಗಳಿಸುವ ಸಾಧ್ಯತೆ ಇದೆಯೋ ಅಲ್ಲೆಲ್ಲ ಬಿಜೆಪಿ ಅಭ್ಯರ್ಥಿ ಮತದಾರರಿಗೆ ಆಮಿಷವೊಡ್ಡುತ್ತಿದ್ದು, ಇದೇ ರೀತಿ ವಿಂಡ್ ಫ್ಲವರ್ ಹೊಟೇಲ್‍ನಲ್ಲಿಯೂ ನಡೆದಿದೆ. ಈ ಬಗ್ಗೆ ತಮ್ಮ ಕಾರ್ಯಕರ್ತರು ನೀಡಿದ ದೂರಿನ ಮೇರೆಗೆ ಫ್ಲೈಯಿಂಗ್ ಸ್ಕ್ವಾಡ್ ಅಲ್ಲಿಗೆ ಬರುವ ಹೊತ್ತಿಗೆ ಎಲ್ಲರೂ ಪರಾರಿಯಾಗಿದ್ದರೆಂದು ಬೇಸರ ವ್ಯಕ್ತಪಡಿಸಿದರು.

ಇನ್ನು, ತಮ್ಮ ಕ್ಷೇತ್ರದಲ್ಲಿ ವಿತರಿಸುತ್ತಿರುವ ಮತದಾರರ ಚೀಟಿಯಲ್ಲಿಯೂ ಗೊಂದಲ ಇದ್ದು, ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಮತದಾನ ಮಾಡುವ ವೇಳೆ ಗೊಂದಲಕ್ಕೆ ಸಿಗುವ ರೀತಿಯ ಎಲ್ಲ ಯತ್ನ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮತದಾರರ ಚೀಟಿಯಲ್ಲಿ ವಿಭಾಗ ಒಂದು ನಮೂದಿಸಿದ್ದರೆ, ಮತದಾನ ಕೇಂದ್ರವಾಗಿ ಬೇರೊಂದನ್ನು ತಿಳಿಸಲಾಗಿದೆ. ಹೀಗಾಗಿ ಮತದಾರರು ಮತದಾನಕ್ಕಾಗಿ ಮತಗಟ್ಟೆಗೆ ಹೋದಾಗ ಅಲ್ಲಿಲ್ಲವೆಂದಂತಾಗಿ ಮತ್ತೆ ಬೇರೊಂದು ಮತಗಟ್ಟೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಚುನಾವಣಾ ಆಯೋಗ ಕೂಡಲೇ ಈ ಎಲ್ಲ ಗೊಂದಲಗಳನ್ನು ಕೂಡಲೇ ಬಗೆಹರಿಸಬೇಕು. ಇಲ್ಲದಿದ್ದರೆ ಮತದಾನ ಪ್ರಮಾಣ ಈ ಹಿಂದಿನ ರೀತಿ ಕಡಿಮೆ ಶೇಕಡಾಂಶವಾದರು ಅಚ್ಚರಿಯಿಲ್ಲ ಎಂದು ಹೇಳಿದರು.

ಇನ್ನು, ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಕಲಿ ಮತದಾರರಿದ್ದಾರೆಂಬ ಶಾಸಕ ಎಸ್.ಎ. ರಾಮದಾಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ಆ ರೀತಿ ಇದ್ದಲ್ಲಿ ಚುನಾವಣಾಧಿಕಾರಿಗಳು ಸರಿಪಡಿಸಲಿ ಎಂದರಲ್ಲದೆ, ಇದರಲ್ಲಿ ತಮ್ಮ ಪಾತ್ರವೇನೂ ಇರುವುದಿಲ್ಲ. ಏಕೆಂದರೆ ಮತದಾರರ ಪಟ್ಟಿಗೆ ಸೇರ್ಪಡೆ ಅಥವಾ ಕೈಬಿಡುವುದು ಅಧಿಕಾರಿಗಳ ಕೈಯಲ್ಲಿರುತ್ತದೆಂದು ಸ್ಪಷ್ಟ ಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಎಚ್.ಎ. ವೆಂಕಟೇಶ್, ಆರ್.ಜಿ. ನರಸಿಂಹ ಅಯ್ಯಂಗಾರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News