ಪ್ರೇಯಸಿ ಹತ್ಯೆಗೈದ ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್

Update: 2019-04-11 17:21 GMT

ಬೆಂಗಳೂರು, ಎ.11: ಒಂಭತ್ತು ವರ್ಷಗಳ ಹಿಂದೆ ಹೈಕೋರ್ಟ್ ಆವರಣದಲ್ಲೇ ಪ್ರೇಯಸಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣ ಸಂಬಂಧ ಅಧೀನ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆ ರದ್ದು ಕೋರಿ ಆರೋಪಿ ರಾಜಪ್ಪ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.

ವಕೀಲ ರಾಜಪ್ಪ 62ನೆ ಸಿಸಿಎಚ್ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ರದ್ದು ಕೋರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹಾಗೂ ಎಚ್.ಬಿ.ಪ್ರಭಾಕರ ಶಾಸ್ತ್ರಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಎರಡು ಕಡೆಯ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು ಆದೇಶವನ್ನು ಕಾಯ್ದಿರಿಸಿತು.

2010ರ ಜುಲೈ 8ರಂದು ಮಧ್ಯಾಹ್ನ ಹೈಕೋರ್ಟ್ ಆವರಣದಲ್ಲೇ ನ್ಯಾಯವಾದಿ ನವೀನಾ ಎಂಬುವವರನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ವಿಧಾನಸೌಧ ಠಾಣೆ ಪೊಲೀಸರು ಆರೋಪಿ ರಾಜಪ್ಪನನ್ನು ಬಂಧಿಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ 62ನೆ ಸಿಸಿಎಚ್ ನ್ಯಾಯಾಲಯ, ಆರೋಪಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ರೂ.ದಂಡ ವಿಧಿಸಿ ಆದೇಶಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಆರೋಪಿ ರಾಜಪ್ಪ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಎರಡು ಕಡೆಯ ವಕೀಲರ ವಾದ ಪ್ರತಿ ವಾದ ಆಲಿಸಿ ಆದೇಶವನ್ನು ಕಾಯ್ದಿರಿಸಿತು.

ಪ್ರಕರಣವೇನು: ಆರೋಪಿ ರಾಜಪ್ಪ ಹಾಗೂ ನವೀನಾ ಇಬ್ಬರು ವಕೀಲರಾಗಿದ್ದು, ಹಿರಿಯ ನ್ಯಾಯವಾದಿ ಒಬ್ಬರ ಬಳಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಮದುವೆಗೂ ನಿರ್ಧರಿಸಿದ್ದರು. ಈ ಮಧ್ಯೆ ನವೀನಾ, ಆಕೆಯ ಹಿರಿಯ ವಕೀಲರ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಸಂದೇಹ ಪಟ್ಟು, ಆಕೆಯ ಜತೆ ರಾಜಪ್ಪ ಮನಸ್ತಾಪ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ 2010ರ ಜುಲೈ 8ರ ಮಧ್ಯಾಹ್ನ 1.45ರ ಸುಮಾರಿಗೆ ಹೈಕೋರ್ಟ್‌ನ 1ನೆ ಮಹಡಿಯ ಹಾಲ್ ಬಳಿ ನವೀನಾ ನಿಂತಿದ್ದಾಗ ಆಕೆಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದ. ಈ ಸಂಬಂಧ ವಿಧಾನಸೌಧ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News