ಮಂಡ್ಯ ರಣಕಣದಲ್ಲಿ ಸ್ಪರ್ಧಿಗಳ ಮತ ಭೇಟೆ ಪೈಪೋಟಿ: ಉರಿ ಬಿಸಿಲಿಗಿಂತಲೂ ಪ್ರಚಾರ ಪ್ರಖರತೆ ಜೋರು

Update: 2019-04-11 17:40 GMT

ಮಂಡ್ಯ, ಎ.11: ಚುನಾವಣಾ ರಣಕಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಉರಿ ಬಿಸಿಲಿಗಿಂತಲೂ ಪ್ರಚಾರ ಭರಾಟೆ ಪ್ರಖರತೆ ಪಡೆಯುತ್ತಿದೆ. ಪುತ್ರನ ಗೆಲುವಿಗೆ ಟೊಂಕ ಕಟ್ಟಿರುವ ಸಿಎಂ ಕುಮಾರಸ್ವಾಮಿ ಒಂದು ಕಡೆ, ಸ್ವಾಭಿಮಾನದ ಕಹಳೆ ಮೊಳಗಿಸಿರುವ ಸುಮಲತಾ ಅಂಬರೀಷ್ ಮತ್ತೊಂದು ಕಡೆ ಬಿಸಲು ಲೆಕ್ಕಿಸದೆ ಮತ ಭೇಟೆಯಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ತನ್ನ ಪುತ್ರನನ್ನೇ ಕಣಕ್ಕಿಳಿಸಿರುವ ಎಚ್.ಡಿ.ಕುಮಾರಸ್ವಾಮಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಎರಡು ದಿನದಿಂದ ಪುತ್ರ ನಿಖಿಲ್ ಗೆಲುವಿಗೆ ಉರಿ ಬಿಸಿಲು ಲೆಕ್ಕಿಸದೆ ಕ್ಷೇತ್ರದಲ್ಲಿ ಬಿರುಸಿನ ಮತಯಾಚನೆ ಮಾಡುತ್ತಿದ್ದಾರೆ.

ನಿನ್ನೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಕುಮಾರಸ್ವಾಮಿ, ಗುರುವಾರ ಮಳವಳ್ಳಿ ಮತ್ತು ಮದ್ದೂರು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮೈತ್ರಿ ಅಭ್ಯರ್ಥಿ ನಿಖಿಲ್ ಗೆಲ್ಲಿಸಿಕೊಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

ಪ್ರಚಾರದುದ್ದಕ್ಕೂ ತನ್ನ ಕುಟುಂಬ ಮಂಡ್ಯ ಜಿಲ್ಲೆಗೆ ಹಾಗೂ ರೈತರಿಗೆ ಮಾಡಿರುವ ಸಾಧನೆ, ಅಂತೆಯೇ ತನ್ನ ಪಕ್ಷಕ್ಕೆ ಜಿಲ್ಲೆಯ ಜನತೆ ತೋರಿರುವ ಪ್ರೀತಿಯನ್ನು ಪ್ರಶಂಸಿದ ಕುಮಾರಸ್ವಾಮಿ, ಎದುರಾಳಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧವೂ ವಾಗ್ದಾಳಿ ನಡೆಸಿದರು.

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಕೂಡ ಪ್ರಚಾರದಲ್ಲಿ ಪೈಪೋಟಿ ನೀಡಿದ್ದು, ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಅಪಾರ ಬೆಂಬಲಿಗರ ಜತೆ ರೋಡ್ ಶೋ ನಡೆಸಿ ಮತಯಾಚಿಸಿದರು.

ಶ್ರೀರಂಗಪಟ್ಟಣ ಸಮೀಪದ ಗಂಜಾಂನಲ್ಲಿ ರೋಡ್ ಶೋ  ನಡೆಸಿದ ಸುುಮಲತಾ, ಹಿಂದಿಯಲ್ಲೇ ಮುಸ್ಲಿಂ ಬಾಂಧವರಲ್ಲಿ ಮತ ಕೇಳಿದರು. ಪಕ್ಷೇತರ ಅಭ್ಯರ್ಥಿಯಾದ ತನಗೆ ಬಿಜೆಪಿ ಬೆಂಬಲ ನೀಡಿದೆಯೇ ಹೊರತು ಬಿಜೆಪಿ ಅಭ್ಯರ್ಥಿಯಲ್ಲ ಎಂದೂ ಮತದಾರರಿಗೆ ಸ್ಪಷ್ಟನೆ ನೀಡಿದರು.

ಕೆ.ಆರ್.ಪೇಟೆ ವಿಧಾನಸಭೆಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ಮುಂದುವರಿಸಿದ ಸುಮಲತಾ ಅವರಿಗೆ ಹಲವು ಕಾಂಗ್ರೆಸ್ ಮುಖಂಡರೂ ಸಾಥ್ ನೀಡುವ ಮೂಲಕ ವರಿಷ್ಠರ ನೊಟೀಸ್‍ಗೆ ಶೆಡ್ಡು ಹೊಡೆದರು. ಹಲವು ಬಿಜೆಪಿ ಮುಖಂಡರೂ ಭಾಗವಹಿಸಿದ್ದರು.

ಮೈತ್ರಿ ಅಭ್ಯರ್ಥಿ ನಿಖಿಲ್ ಕೂಡ ಪ್ರತ್ಯೇಕವಾಗಿ ಮುಖಂಡರ ಜತೆ ಪ್ರಚಾರ ಮುಂದುವರಿಸಿದರು. ಮಂಡ್ಯ ವಿಧಾನಸಭಾ ಕ್ಷೇತ್ರದ ಹನಕೆರೆ, ಬೂದನೂರು, ಕೆರಗೋಡು ಜಿಪಂ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ ಅವರಿಗೆ ಸ್ಥಳೀಯ ಶಾಸಕ ಎಂ.ಶ್ರೀನಿವಾಸ್, ಕಾಂಗ್ರೆಸ್ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮುಖಂಡರು ಸಾಥ್ ಕೊಟ್ಟರು.

ಸುಮಲತಾ ಅಂಬರೀಷ್ ಪರವಾಗಿ ಅಬ್ಬರದ ಪ್ರಚಾರದ ಮೂಲಕ ಗಮನ ಸೆಳೆದಿರುವ ಚಿತ್ರನಟರಾದ ದರ್ಶನ್ ಮತ್ತು ಯಶ್ ಕೂಡ ಅಪಾರ ಅಭಿಮಾನಿಗಳ ಬೆಂಬಲದೊಂದಿಗೆ ಪ್ರಚಾರ ಕೈಗೊಂಡಿದ್ದು, ಚುನಾವಣಾ ಪ್ರಚಾರಕ್ಕೆ ರಂಗು ತಂದಿದ್ದಾರೆ.

ಬುಧವಾರ ಮದ್ದೂರು, ಕೆ.ಎಂ.ದೊಡ್ಡಿ, ಬೆಸಗರಹಳ್ಳಿ ಮುಂತಾದ ಕಡೆ ಬಿರುಸಿನ ಪ್ರಚಾರ ನಡೆಸಿದ ಯಶ್ ಗುರುವಾರ ಬ್ರೇಕ್ ತೆಗೆದುಕೊಂಡಿದ್ದರು. ನಿನ್ನೆ ಕೆ.ಆರ್.ನಗರದಲ್ಲಿ ಪ್ರಚಾರ ನಡೆಸಿದ ದರ್ಶನ್ ಗುರುವಾರ ಪಕ್ಕದ ಕೆ.ಆರ್.ಪೇಟೆಯಲ್ಲಿ ಪ್ರಚಾರ ಮುಂದುವರಿಸಿದರು.

ಅಮ್ಮನ ಗೆಲುವಿಗೆ ಅಖಾಡಕ್ಕಿಳಿದಿರುವ ಅಂಬರೀಷ್ ಪುತ್ರ ಅಭಿಷೇಕ್ ಕೂಡ ಬಿರುಸಿನ ಪ್ರಚಾರ ನಡೆಸಿ ತನ್ನ ತಾಯಿಗೂ ಒಂದು ಅವಕಾಶ ಕೊಡುವಂತೆ ಮನವಿ ಮಾಡುತ್ತಿದ್ದಾರೆ. ಗುರುವಾರ ಮಂಡ್ಯ ವಿಧಾನಸಭಾ ಕ್ಷೇತ್ರದ ಚಿಕ್ಕ ಮಂಡ್ಯ ಸೇರಿದಂತೆ ಹಲವು ಗ್ರಾಮದಲ್ಲಿ ಅಭಿಷೇಕ್ ಪ್ರಚಾರ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News