ಕುಟುಂಬ ರಾಜಕಾರಣ ತಿರಸ್ಕರಿಸಲು ದೊಡ್ಡಣ್ಣ ಮನವಿ

Update: 2019-04-11 17:58 GMT

ಮಂಡ್ಯ, ಎ.11: ಜಿಲ್ಲೆಯ ಮತದಾರರು ದೇಶ ದೊಡ್ಡದೋ, ಕುಟುಂಬ ರಾಜಕಾರಣ ಬೆಳೆಸುವುದೇ ಮುಖ್ಯವೋ ಎಂಬುದನ್ನು ಅವಲೋಕಿಸಬೇಕಿದೆ ಎಂದು ಚಿತ್ರನಟ ದೊಡ್ಡಣ್ಣ ಹೇಳಿದ್ದಾರೆ.

ಮಳವಳ್ಳಿ ತಾಲೂಕಿನ ವಿವಿಧೆಡೆ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ನಡೆಸಿ, ಪಟ್ಟಣದ ವೀರಭದ್ರೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ದಿವಂಗತ ಅಂಬರೀಷ್ ಎಂತಹ ಸ್ನೇಹಜೀವಿ ಎಂಬುದು ಜಿಲ್ಲೆ, ರಾಜ್ಯದ ಜನರಿಗೆ ಗೊತ್ತಿದೆ. ಚಿತ್ರರಂಗದ ಕಲಿಯುಗ ಕರ್ಣ ಎಂದೇ ಹೆಸರಾಗಿದ್ದ ಅಂಬರೀಷ್ ಋಣ ತೀರಿಸುವ ಅಗತ್ಯ ನಮಗಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಕೇಂದ್ರ ರಾಜಕಾರಣದಲ್ಲಿ ಉತ್ತಮ ನಾಯಕಿಯಾಗಿ ಬೆಳೆಯುವ ಎಲ್ಲಾ ರೀತಿಯ ಅರ್ಹತೆ ಹೊಂದಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಜತೆಗೆ ಅಂಬರೀಷ್ ತಮ್ಮ ಜೀವಿತಾವಧಿಯಲ್ಲಿ ಎಂದೂ ಯಾರಿಂದಲೂ ಬೇಡಿದವರಲ್ಲ. ಇರುವಷ್ಟೂ ದಿನ ಸ್ವಾಭಿಮಾನದ, ಭ್ರಷ್ಟಾಚಾರ ರಹಿತ ರಾಜಕಾರಣ ನಡೆಸುವ ಮೂಲಕ ಜಿಲ್ಲೆಯ ಗೌರವ ಹೆಚ್ಚಿಸಿದ್ದಾರೆ. ಹಾಗಾಗಿ ಜಿಲ್ಲೆಯ ಜನರು ಸ್ವಾಭಿಮಾನದ ಸಂಕೇತವಾದ ಸುಮಲತಾ ಅವರಿಗೆ ಮತ ನೀಡಬೇಕು ಎಂದು ಅವರು ಮನವಿ ಮಾಡಿದರು.

ಭಾಷಾ ಜ್ಞಾನ ಸೇರಿ ಎಲ್ಲಾ ರೀತಿಯ ಪ್ರಬುದ್ಧತೆ ಇರುವ ಸುಮಲತಾ ಅವರನ್ನು ಆಯ್ಕೆಮಾಡಿ ದೇಶದ ಹಿರಿಮೆ ಹೆಚ್ಚಿಸುವಿರೋ ಅಥವಾ ಕುಟುಂಬಕ್ಕಷ್ಟೇ ನಮ್ಮ ನಿಷ್ಠೆಯೋ ಎಂಬುದನ್ನು ಸಾಬೀತು ಪಡಿಸಬೇಕಿದೆ. ಎ.18ರಂದು ನಡೆಯುವ ಚುನಾವಣೆಯಲ್ಲಿ ಸುಮಲತಾ ಅವರಿಗೆ ಹೆಚ್ಚಿನ ಮತಗಳನ್ನು ನೀಡಿ ಆಯ್ಕೆ ಮಾಡಬೇಕು ಎಂದು ಕೋರಿದರು.

ಮುಖಂಡರಾದ ಕನ್ನಹಳ್ಳಿ ಪ್ರಸಾದ್, ಹಂಗ್ರಾಪುರ ಮಹೇಶ್, ಮಹಾಲಿಂಗಸ್ವಾಮಿ, ವಕೀಲ ಶ್ರೀಕಂಠಸ್ವಾಮಿ, ಎವಿಟಿ ಕುಮಾರ್, ವಿಶ್ವನಾಥ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News