ಪ್ರಧಾನಿ ಮೋದಿಯನ್ನು ಚುನಾವಣಾ ಪ್ರಚಾರದಿಂದ ದೂರವಿಡಿ: ಚುನಾವಣಾ ಆಯೋಗಕ್ಕೆ ಎಚ್.ಕೆ.ಪಾಟೀಲ್ ಆಗ್ರಹ

Update: 2019-04-11 18:23 GMT

ಗದಗ, ಎ.11: ಪ್ರಧಾನಿ ನರೇಂದ್ರ ಮೋದಿ ಸೈನಿಕರ ಡ್ರೆಸ್ ಹಾಕಿಕೊಂಡು ಪೋಸ್ ನೀಡಿ ಸೈನಿಕರಿಗೆ ಅವಮಾನ ಮಾಡಿದ್ದಾರೆ. ಹೀಗಾಗಿ ಮೋದಿಯನ್ನು ಚುನಾವಣೆ ಪ್ರಚಾರದಿಂದ ದೂರ ಇಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಮ್ಮಿಶ್ರ ಸರಕಾರ ಒಟ್ಟಾಗಿ ಚುನಾವಣೆ ಎದುರಿಸುತ್ತಿದೆ. ಕರ್ನಾಟಕದಲ್ಲಿ 20 ಕ್ಷೇತ್ರದಲ್ಲಿ ಮೈತ್ರಿ ಪಕ್ಷ ಗೆಲ್ಲುವ ನಿರೀಕ್ಷೆ ಇದೆ. ಕಾಂಗ್ರೆಸ್ ಪ್ರಣಾಳಿಕೆ ಬಂದ ನಂತರ ಬಿಜೆಪಿ ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ಕಾಂಗ್ರೆಸ್ ಪ್ರಣಾಳಿಕೆಗೆ ಉತ್ತರಿಸುವ ನೈತಿಕ ಶಕ್ತಿ ಬಿಜೆಪಿ ಕಳೆದುಕೊಂಡಿದೆ ಎಂದು ಅವರು ಹೇಳಿದರು.

ಬಿಜೆಪಿ ನಾಯಕರು ಅರಾಜಕರಂತೆ ನಡೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕ ಭಾಷಣದಲ್ಲಿ ಯೋಗಿ ಆದಿತ್ಯನಾಥ್ ಭಾರತೀಯ ಸೈನ್ಯವನ್ನು ಮೋದಿ ಸೇನೆ ಎಂದೇಳುವ ಮೂಲಕ ದೇಶದ್ರೋಹಿ ಹೇಳಿಕೆ ನೀಡಿದ್ದಾರೆ. ಸಂವಿಧಾನದ ಉನ್ನತ ಹುದ್ದೆಯಲ್ಲಿರುವ ಯೋಗಿ ಆದಿತ್ಯನಾಥ್ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಚುನಾವಣೆ ಮುಗಿಯುವವರೆಗೂ ಆದಿತ್ಯನಾಥ್ ಎಲ್ಲೂ ಮಾತನಾಡದಂತೆ ಚುನಾವಣೆ ಆಯೋಗ ನೋಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ರಾಜಸ್ಥಾನ ರಾಜ್ಯಪಾಲ ಕಲ್ಯಾಣ್‌ಸಿಂಗ್ ಬಿಜೆಪಿ ಪರ ಬ್ಯಾಟಿಂಗ್ ನಡೆಸಿದ್ದಾರೆ. ಚುನಾವಣೆ ಮುಗಿಯುವವರೆಗೂ ಕಲ್ಯಾಣ್‌ಸಿಂಗ್ ಅವರ ಮಾತುಗಳ ಮೇಲೂ ನಿರ್ಬಂಧ ಹೇರಬೇಕೆಂದು ಅವರು ರಾಷ್ಟ್ರಪತಿಗಳಲ್ಲಿ ಮನವಿ ಮಾಡುವುದಾಗಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News