ಸುಡಾನ್: ಅಧ್ಯಕ್ಷ ಉಮರ್ ಅಲ್-ಬಶೀರ್ ಬಂಧನ

Update: 2019-04-11 18:36 GMT

►2 ವರ್ಷಗಳ ಬಳಿಕ ಚುನಾವಣೆ

►3 ತಿಂಗಳು ತುರ್ತುಪರಿಸ್ಥಿತಿ

►ರಾಷ್ಟ್ರವ್ಯಾಪಿ ಯುದ್ಧವಿರಾಮ

►ಸಂವಿಧಾನ ಅಮಾನತಿನಲ್ಲಿ

ಖಾರ್ಟೂಮ್ (ಸುಡಾನ್), ಎ. 11: ಸುಡಾನ್‌ನಲ್ಲಿ 30 ವರ್ಷಗಳಿಂದ ಅಧಿಕಾರದಲ್ಲಿದ್ದ ಅಧ್ಯಕ್ಷ ಉಮರ್ ಅಲ್-ಬಶೀರ್‌ರನ್ನು ‘ಸುರಕ್ಷಿತ ಸ್ಥಳ’ವೊಂದರಲ್ಲಿ ಬಂಧಿಸಿಡಲಾಗಿದೆ ಹಾಗೂ ಸೇನಾ ಮಂಡಳಿಯೊಂದು ಎರಡು ವರ್ಷಗಳ ಪರಿವರ್ತನಾ ಅವಧಿಯಲ್ಲಿ ದೇಶದ ಆಡಳಿತವನ್ನು ನೋಡಿಕೊಳ್ಳುವುದು ಎಂದು ರಕ್ಷಣಾ ಸಚಿವ ಮುಹಮ್ಮದ್ ಅಹ್ಮದ್ ಇಬ್ನ್ ಅವುಫ್ ಗುರುವಾರ ಹೇಳಿದ್ದಾರೆ.

ಇದರೊಂದಿಗೆ, ಬಹುದಿನಗಳಿಂದ ನಿರೀಕ್ಷಿಸಲಾಗಿದ್ದ ಸೇನಾ ಕ್ಷಿಪ್ರಕ್ರಾಂತಿಯನ್ನು ಅವರು ಖಚಿತಪಡಿಸಿದ್ದಾರೆ.

ಪರಿವರ್ತನಾ ಅವಧಿಯ ಕೊನೆಯಲ್ಲಿ ಚುನಾವಣೆ ನಡೆಸಲಾಗುವುದು ಎಂದು ಸರಕಾರಿ ಟಿವಿಯಲ್ಲಿ ಪ್ರಸಾರವಾದ ಹೇಳಿಕೆಯೊಂದರಲ್ಲಿ ಅವರು ತಿಳಿಸಿದ್ದಾರೆ.

ಅದೇ ವೇಳೆ, ದೇಶದಲ್ಲಿ ಮೂರು ತಿಂಗಳ ಕಾಲ ತುರ್ತು ಪರಿಸ್ಥಿತಿ ಇರುತ್ತದೆ, ರಾಷ್ಟ್ರವ್ಯಾಪಿ ಯುದ್ಧವಿರಾಮ ಜಾರಿಗೆ ಬರುತ್ತದೆ ಹಾಗೂ ಸಂವಿಧಾನವನ್ನು ಅಮಾನತಿನಲ್ಲಿಡಲಾಗುವುದು ಎಂದು ಅವುಫ್ ಘೋಷಿಸಿದರು.

ಸುಡಾನ್‌ನ ವಾಯುಪ್ರದೇಶವನ್ನು 24 ಗಂಟೆಗಳ ಕಾಲ ಮುಚ್ಚಲಾಗುತ್ತದೆ ಹಾಗೂ ಗಡಿದಾಟುಗಳನ್ನು ಮುಂದಿನ ಸೂಚನೆಯವರೆಗೆ ಮುಚ್ಚಲಾಗುತ್ತದೆ ಎಂದರು.

ಭದ್ರತಾ ಏರ್ಪಾಡುಗಳನ್ನು ಸಹಿಸಿಕೊಳ್ಳುವಂತೆ ರಕ್ಷಣಾ ಸಚಿವರು ಪ್ರಜೆಗಳಿಗೆ ಮನವಿ ಮಾಡಿದರು. ಪರಿವರ್ತನಾ ಅವಧಿಯಲ್ಲಿ ಮಾನವಹಕ್ಕುಗಳನ್ನು ಗೌರವಿಸಲಾಗುವುದು ಎಂದರು.

ರಾಜಕೀಯ ಕೈದಿಗಳ ಬಿಡುಗಡೆ

ದೇಶಾದ್ಯಂತ ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸುಡಾನ್ ರಾಷ್ಟ್ರೀಯ ಗುಪ್ತಚರ ಮತ್ತು ಭದ್ರತಾ ಸಂಸ್ಥೆ ಪ್ರಕಟಿಸಿದೆ ಎಂದು ಸರಕಾರಿ ಸುದ್ದಿ ಸಂಸ್ಥೆ ‘ಸುನ’ ತಿಳಿಸಿದೆ.

ಜನರ ಹರ್ಷಾಚರಣೆ

ಸುಡಾನ್ ಅಧ್ಯಕ್ಷರು ಅಧಿಕಾರದಿಂದ ಹೊರಬಿದ್ದ ಸುದ್ದಿ ಕೇಳಿ ಸಾವಿರಾರು ಮಂದಿ ರಾಜಧಾನಿ ಖಾರ್ಟೂಮ್‌ನ ಮಧ್ಯಭಾಗದಲ್ಲಿ ಜಮಾಯಿಸಿ ಸಂಭ್ರಮಾಚರಿಸಿದರು. ಅವರು ಕುಣಿಯುತ್ತಾ ಬಶೀರ್ ವಿರೋಧಿ ಘೋಷಣೆಗಳನ್ನು ಕೂಗಿದರು.

ಸೇನಾ ಘೋಷಣೆ ತಿರಸ್ಕರಿಸಿದ ಪ್ರತಿಭಟನಕಾರರು

ಎರಡು ವರ್ಷಗಳ ಅಧಿಕಾರ ಹಸ್ತಾಂತರ ಅವಧಿಯಲ್ಲಿ ದೇಶದ ಆಡಳಿತವನ್ನು ಸೇನಾ ಮಂಡಳಿಯೊಂದು ನೋಡಿಕೊಳ್ಳುವುದು ಎಂಬ ರಕ್ಷಣಾ ಸಚಿವ ಆವದ್ ಮುಹಮ್ಮದ್ ಅಹ್ಮದ್ ಇಬ್ನ್ ಅವುಫ್‌ರ ಘೋಷಣೆಯನ್ನು ಪ್ರತಿಭಟನಕಾರರು ತಿರಸ್ಕರಿಸಿದ್ದಾರೆ.

ನಾಗರಿಕ ಸರಕಾರವೊಂದಕ್ಕೆ ಅಧಿಕಾರ ಹಸ್ತಾಂತರ ಮಾಡಬೇಕು ಎಂಬುದಾಗಿ ಅವರು ಒತ್ತಾಯಿಸಿದ್ದಾರೆ.

‘‘ಇದು ಸುಡಾನ್ ಜನರೊಂದಿಗೆ ಆಡಿದ ಆಟವಾಗಿದೆ. ರಕ್ಷಣಾ ಸಚಿವರ ಪ್ರಕಟನೆಯನ್ನು ಪ್ರತಿಭಟನಕಾರರು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ’’ ಎಂದು ಹೋರಾಟಗಾರ ಉಮರ್ ಅಲ್-ನೀಲ್ ಸಿಎನ್‌ಎನ್ ಸುದ್ದಿ ವಾಹಿನಿಗೆ ಹೇಳಿದರು.

‘‘ಸುಡಾನ್‌ನ ಎಲ್ಲ ಜನರು ಬೀದಿಯಲ್ಲಿದ್ದಾರೆ ಹಾಗೂ ಹಾಲಿ ಸರಕಾರದಲ್ಲಿದ್ದ ಎಲ್ಲರೂ ಹೊರಬರಬೇಕೆಂದು ಅವರು ಬಯಸುತ್ತಾರೆ. ಅದೇ ಜನರನ್ನು ಮತ್ತೆ ನೇಮಿಸುವುದನ್ನು ಅವರು ಇಷ್ಟಪಡುವುದಿಲ್ಲ’’ ಎಂದರು.

ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನಕಾರರು ಖಾರ್ಟೂಮ್‌ನಲ್ಲಿರುವ ಸೇನಾ ಪ್ರಧಾನ ಕಚೇರಿಯ ಹೊರಗೆ ಉಳಿಯುತ್ತಾರೆ ಎಂದು ಅಲ್ ನೀಲ್ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News