ಸೇನೆಗೆ ಅಪಮಾನ ಮಾಡುವ ನೀವು ಮುಳುಗಿ ಸಾಯಿರಿ: ಕುಮಾರಸ್ವಾಮಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

Update: 2019-04-12 14:16 GMT

ಕೊಪ್ಪಳ, ಎ.12: ತುತ್ತು ಅನ್ನಕ್ಕಾಗಿ ಪರದಾಡುತ್ತಿರುವವರೆ ಸೇನೆಗೆ ಸೇರುತ್ತಾರೆಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಸರಿಯಲ್ಲ. ತನ್ನ ಹೇಳಿಕೆ ತಿರುಚಲಾಗಿದೆ ಎಂದು ಹೇಳಿ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸೇನೆಗೆ ಅಪಮಾನ ಮಾಡುತ್ತೀರಿ, ನೀವು ಮುಳುಗಿ ಸಾಯಿರಿ. ದೇಶ ಸೇವೆಗಾಗಿಯೇ ಸೈನ್ಯಕ್ಕೆ ಸೇರುತ್ತಾರೆಂಬುದು ನಿಮಗೆ ಗೊತ್ತಿರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಜಿಲ್ಲೆಯ ಗಂಗಾವತಿಯಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಶೇ.20 ಪರ್ಸೆಂಟ್ ಕಮಿಷನ್ ಸರಕಾರ. ಈ ಹಿಂದೆ ರಾಜ್ಯದಲ್ಲಿದ್ದ ಕಾಂಗ್ರೆಸ್ ಸರಕಾರ ಮಿಸ್ಟರ್ 10 ಪರ್ಸೆಂಟ್ ಕಮಿಷನ್ ಸರಕಾರವಿತ್ತು. ಇದೀಗ ಇಬ್ಬರು ಮೈತ್ರಿ ಮಾಡಿಕೊಂಡಿದ್ದು, ಕಮಿಷನ್ ಪ್ರಮಾಣವೂ ಹೆಚ್ಚಾಗಿದೆ ಎಂದು ಲೇವಡಿ ಮಾಡಿದರು.

ದೇಶ ಮೊದಲು ಎನ್ನುವವರು ಹಾಗೂ ಕುಟುಂಬ ಮೊದಲು ಎನ್ನುವವರ ಮಧ್ಯೆ ಈ ಚುನಾವಣೆ ನಡೆಯುತ್ತಿದೆ ಎಂದ ಮೋದಿ, ಮಾಜಿ ಪ್ರಧಾನಿ ದೇವೇಗೌಡರ ಮಗ ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರಕಾರ ಬಂದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆಂದು ಹೇಳಿದ್ದಾರೆ. ಆದರೆ, ಅವರು ಎಂದಾದರೂ ನಿಜ ಹೇಳಿದ್ದಾರೆಯೇ? ಅವರನ್ನು ಮಾತನ್ನು ನಂಬಲು ಸಾಧ್ಯವಿಲ್ಲ. ಮಗನ ವಿಚಾರ ಬಿಡಿ, ದೇವೇಗೌಡರೂ 2014ರ ಚುನಾವಣೆಯಲ್ಲಿ ಮೋದಿ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಹೇಳಿದ್ದರು. ಪಡೆದಿದ್ದಾರೆಯೇ? ಇಷ್ಟೇ ಅಲ್ಲ, ಕುಟುಂಬದ ಎಲ್ಲರಿಗೂ ಟಿಕೆಟ್ ನೀಡಿದ್ದಾರೆ ಎಂದು ಟೀಕಿಸಿದರು.

ಕರ್ನಾಟಕ ರಾಜ್ಯದ ಜನರು ನನಗೆ ತೋರುತ್ತಿರುವ ಪ್ರೀತಿಯಿಂದ ದಿಲ್ಲಿಯಲ್ಲಿರುವ ವಿಪಕ್ಷ ನಾಯಕರಿಗೆ ನಿದ್ದೆ ಬರುತ್ತಿಲ್ಲ ಎಂದ ಮೋದಿ, 2019ರ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ, ಕೇಂದ್ರದಲ್ಲಿ ಸದೃಢ ಸರಕಾರ ರಚನೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. ಆರಂಭಕ್ಕೆ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ‘ಗವಿಸಿದ್ಧೇಶ್ವರ ಸ್ವಾಮಿಗಳ ಚರಣಗಳಿಗೆ ಭಕ್ತಿಪೂರ್ವಕ ಪ್ರಣಾಮಗಳು. ಈ ಭೂಮಿಯಲ್ಲಿ ಜನಿಸಿದ್ದ ಮಹಾತ್ಮರಿಗೆ ನನ್ನ ನಮನಗಳು. ಇಷ್ಟು ಪ್ರಖರ ಬಿಸಿಲಿನಲ್ಲೂ ನನ್ನನ್ನು ನೋಡಲು ಬಂದಿದ್ದೀರಿ ನಿಮಗೆ ನಾನು ಆಭಾರಿಯಾಗಿದ್ದೇನೆ’ ಎಂದು ಹೇಳಿದರು.

ಕೊಪ್ಪಳ ಅಭ್ಯರ್ಥಿ ಸಂಗಣ್ಣ ಕರಡಿ, ಬಳ್ಳಾರಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಹಾಗೂ ರಾಯಚೂರು ಕ್ಷೇತ್ರದ ಅಭ್ಯರ್ಥಿ ರಾಜಾ ಅಮರೇಶ್ ನಾಯ್ಕಾ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶ್ರೀರಾಮುಲು ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News