ಕಾಂಗ್ರೆಸ್ ದೇಶಕ್ಕಾಗಿ ಹೋರಾಟ ನಡೆಸಿದಾಗ ಮೋದಿ ಇನ್ನೂ ಹುಟ್ಟಿರಲಿಲ್ಲ: ಮಲ್ಲಿಕಾರ್ಜುನ ಖರ್ಗೆ

Update: 2019-04-12 14:58 GMT

ಕಲಬುರಗಿ, ಎ.12: ‘ನನ್ನ ವಿರುದ್ಧ ಹೊರಟಿರುವವರು ತಾವೇ ಮೊದಲು ಸೋತು ಸುಣ್ಣವಾಗಿದ್ದಾರೆ. ಆದರೆ ನನ್ನನ್ನು ಸೋಲಿಸುವ ಮಾತನಾಡುತ್ತಿದ್ದಾರೆ’ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

ಶುಕ್ರವಾರ ತಾಲೂಕಿನ ಪಟ್ಟಣ ಗ್ರಾಮದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಪರ ಕೆಲಸಗಳೆ ನನ್ನನ್ನು 11ಬಾರಿ ಗೆಲ್ಲುವಂತೆ ಮಾಡಿವೆ. ಹೀಗಾಗಿ ಮೋದಿ ಕಲಬುರ್ಗಿಗೆ ಚುನಾವಣಾ ಪ್ರಚಾರಕ್ಕೆ ಬಂದಾಗ ನನ್ನ ಏನೂ ಬಗ್ಗೆ ಮಾತನಾಡಿಲ್ಲ. ಆದರೆ, ಮೋದಿಯ ಇಲ್ಲಿನ ಮರಿಗಳು ನನ್ನ ಬಗ್ಗೆ ಮಾತನಾಡುತ್ತಿವೆ ಎಂದು ಟೀಕಿಸಿದರು.

ಸಿಎಂ ಸ್ಥಾನ ತಪ್ಪಿದೆ: ಬೇರೆ-ಬೇರೆ ಕಾರಣಗಳಿಂದಾಗಿ ನನಗೂ ಮೂರು ಸಲ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿದೆ. ಹಾಗಂತ ನಾನೇನಾದರೂ ಬಹಿರಂಗವಾಗಿ ಮಾತನಾಡಿದ್ದೇನೆಯೇ, ಪಕ್ಷದ ವಿರುದ್ಧ ಮುನಿಸಿಕೊಂಡಿದ್ದೇನೆಯೇ ಎಂದು ಖರ್ಗೆ ಇಂದಿಲ್ಲಿ ಪ್ರಶ್ನಿಸಿದರು.

ನನಗೆ ಪಕ್ಷ ಹಾಗೂ ಸಿದ್ಧಾಂತಗಳು ಮುಖ್ಯ. ಆದರೆ, ನಮ್ಮ ಪಕ್ಷದಿಂದ ಹೊರಗೆ ಹೋದವರು ಸಿದ್ಧಾಂತಗಳನ್ನು ಪಾಲಿಸದೆ ಈಗ ಸಂವಿಧಾನ ವಿರೋಧಿ ಪಕ್ಷದಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡಿದರೆ ಅವರ ಜನಪರ ಕಾಳಜಿ ಗೊತ್ತಾಗುತ್ತದೆ ಎಂದು ಖರ್ಗೆ ತಿಳಿಸಿದರು.

ಪ್ರಧಾನಿ ಮೋದಿ ದೇಶಭಕ್ತಿಯ ಮಾತುಗಳನ್ನಾಡುತ್ತಾರೆ. ಕಾಂಗ್ರೆಸ್ ಪಕ್ಷ ದೇಶಕ್ಕೆ ಹೋರಾಡಿ ತ್ಯಾಗ ಮಾಡಿದಾಗ ಮೋದಿ ಇನ್ನೂ ಹುಟ್ಟೇ ಇರಲಿಲ್ಲ ಎಂದು ಲೇವಡಿ ಮಾಡಿದ ಅವರು, ದೇಶದ ಐಕ್ಯತೆಗೆ ಬಿಜೆಪಿ ಹಾಗೂ ಆರೆಸೆಸ್ಸ್ ಸಿದ್ಧಾಂತಗಳು ಮಾರಕ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News