ಸ್ಥಾನಕ್ಕೆ ಗೌರವ ಕೊಡುವ ಮಾತುಗಳನ್ನೇ ಅವರು ಆಡಿಲ್ಲ: ಕುಮಾರಸ್ವಾಮಿ ವಿರುದ್ಧ ಸುಮಲತಾ ವಾಗ್ದಾಳಿ

Update: 2019-04-12 18:27 GMT

ಮಂಡ್ಯ, ಎ.12: ಅವರ ಮಾತುಗಳಿಗೆ ಒಂದು ಸ್ಟ್ಯಾಂಡರ್ಡ್ ಇಲ್ಲ. ಅವರ ಮಾತುಗಳನ್ನು ಜನ ನೋಡುತ್ತಿದ್ದಾರೆ. ಅವರು ಇರುವ ಸ್ಥಾನಕ್ಕೆ ಗೌರವ ಕೊಡುವ, ಬೆಲೆ ಇರುವ ಮಾತುಗಳನ್ನೇ ಅವರು ಆಡಿಲ್ಲ ಎಂದು ಅವರು ಕುಮಾರಸ್ವಾಮಿ ಅವರ ವಿರುದ್ಧ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಕೆ.ಆರ್.ಪೇಟೆ ತಾಲೂಕಿನಲ್ಲಿ ಪ್ರಚಾರ ವೇಳೆ ಮಾತನಾಡಿದ ಅವರು, ಆ ಪಕ್ಷದ ಯಾರೂ ಒಳ್ಳೆಯ ಮಾತು ಆಡಿಲ್ಲ. ಜನರಲ್ಲಿ ಕೀಳುಮಟ್ಟದ ಅಭಿಪ್ರಾಯವನ್ನು ಅವರೇ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಅವರೇನೇ ಮಾತಾಡಿಕೊಂಡರೂ ಜನ ಅವರ ವಿರುದ್ಧವಾಗಿ ಇರುತ್ತಾರೆ ಬಿಡಿ. ಸೋಲಿನ ಭಯದಿಂದ ಈ ರೀತಿ ಒಂದೊಂದು ಮಾತು ಹೇಳುತ್ತಿದ್ದಾರೆ ತಿರುಗೇಟು ನೀಡಿದರು.

ಅವರ ಮಾತಿಗೆ ಜನರು ಮರುಳಾಗಲ್ಲ. ನನ್ನ ಮನಸ್ಸಿಗೂ ನೋವಾಗಲ್ಲ. ಅದನ್ನ ನನ್ನ ಹೃದಯದಲ್ಲೇ ಅದುಮಿಟ್ಟುಕೊಳ್ಳುತ್ತೇನೆ. ಆದರೆ, ನನಗಿಂತ ಹೆಚ್ಚಾಗಿ ಜನರಿಗೆ ಘಾಸಿಯಾಗುತ್ತದೆ. ಆಗ ಜನರು ಸುಮ್ಮನೆ ಇರುವುದಿಲ್ಲ ಎಂದು ಅವರು ಎಚ್ಚರಿಸಿದರು.

ಪಕ್ಷೇತರ ಅಭ್ಯರ್ಥಿ ಬೆಂಬಲಿಸಿದರೆ ಕೋಮುವಾದ ಬೆಂಬಲಿಸಿದಂತೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಹೆಚ್ಚು ಚರ್ಚೆ ಅಗತ್ಯವಿಲ್ಲ. ನನ್ನ ಪರವಾಗಿ ಪ್ರಚಾರಕ್ಕೆ ಬರುವವರ ಬಗ್ಗೆ ನಾನೇನೂ ಕಾಮೆಂಟ್ ಮಾಡಲ್ಲ. ಕಾವೇರಿ ಹೋರಾಟದ ವೇಳೆ ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರು ಅಂಬರೀಷ್ ಒಬ್ಬರೇ. ಬೇರೆ ಯಾರಾದರೂ ಇದ್ದರೆ ತೋರಿಸಲಿ ಎಂದೂ ಸುಮಲತಾ ಹೇಳಿದರು.

2 ಲಕ್ಷ ಅಂತರದಲ್ಲಿ ನಿಖಿಲ್ ಗೆಲ್ಲುತ್ತಾರೆ ಎಂಬ ವಿಷಯಕ್ಕೆ, ಅವರ ಪರ ಪ್ರಚಾರಕ್ಕೆ ಬರುವವರು ಅವರ ಪರವೇ ಮಾತಾಡುತ್ತಾರೆ. ಅದರಲ್ಲಿ ಏನೂ ವಿಶೇಷ ಇಲ್ಲ ಬಿಡಿ ಎಂದು ಪ್ರತಿಕ್ರಿಯಿಸಿದರು.

ಮಹಿಳೆಯರ ಆಕ್ರೋಶ: ಮೈಗೋನಹಳ್ಳಿಗೆ ಸುಮಲತಾ ಅಂಬರೀಷ್ ಪ್ರಚಾರಕ್ಕೆ ಆಗಮಿಸಿದ ವೇಳೆ ಜೆಡಿಎಸ್ ನಾಯಕರು ಹೇಳಿಕೆ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ರೇವಣ್ಣ ನಿಮ್ಮನ್ನು ಅವಹೇಳನ ಮಾಡುವ ಮೂಲಕ ಮಹಿಳೆಯರಿಗೆ ಅಗೌರವ ತೋರಿದ್ದಾರೆ. ಆ ಮಾತಿನಿಂದ ನಮಗೆ ಕಣ್ಣೀರು ಬಂದಿದೆ. ಏಕೆ ಹಾಗೆಲ್ಲಾ ಮಾತಾಡಬೇಕು ಎಂದು ಅವರು ಕಿಡಿಕಾರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ಮಹಿಳೆಯರಾದ ನೀವೇ ಇದನ್ನು ಪ್ರಶ್ನೆ ಮಾಡಬೇಕು. ಇದಕ್ಕೆಲ್ಲ ಚುನಾವಣೆಯಲ್ಲಿ ನೀವೇ ಉತ್ತರಕೊಡಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News