ಬೆಳಗಾವಿಯಲ್ಲಿ ಜನ ಬದಲಾವಣೆ ಬಯಸಿದ್ದಾರೆ: ದಿನೇಶ್ ಗುಂಡೂರಾವ್

Update: 2019-04-12 18:29 GMT

ಬೆಳಗಾವಿ, ಎ.12: ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಸುರೇಶ್ ಅಂಗಡಿ ಕಳೆದ ಹದಿನೈದು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಏನೂ ಮಾಡಿಲ್ಲ. ಇಲ್ಲಿಯ ಸಮಸ್ಯೆಗಳ ಪರಿಹಾರಕ್ಕಾಗಿ ದಿಲ್ಲಿಯಲ್ಲಿ ಧ್ವನಿ ಎತ್ತಲಿಲ್ಲ, ಅವರ ಕಾರ್ಯವೈಖರಿಯಿಂದ ಜನ ಬೇಸತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿದ್ದ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ನಾಯಕರ ಸಭೆ ನಡೆಸಿ ಮಾತನಾಡಿದ ಅವರು, ಈ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ಡಾ.ಸಾಧುನವರ್ ಅವರಿಗೆ ಎಲ್ಲ ಗ್ರಾಮಗಳಿಗೆ ಭೇಟಿಯಾಗಿ ಮತ ಯಾಚಿಸಲು ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬ ಕಾರ್ಯಕರ್ತ ಮತ್ತು ಕಾಂಗ್ರೆಸ್ ನಾಯಕ ನಾನೇ ಅಭ್ಯರ್ಥಿ ಎಂದು ತಿಳಿದು ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಬೇಕು.ಯಾವುದೇ ಸಮಸ್ಯೆಗಳಿದ್ದರೆ ಜಿಲ್ಲಾ ಮಂತ್ರಿಗಳು ಮತ್ತು ಇತರ ಕಾಂಗ್ರೆಸ್ ನಾಯಕರು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಳೆದ ಐದು ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ದೇಶದ ಜನಸಾಮಾನ್ಯನಿಗೆ ಯಾವ ಸೌಲಭ್ಯವನ್ನು ತಲುಪಿಸಿಲ್ಲ ಅವರಿಗೆ ಜನರ ಬಳಿ ಮತ ಕೇಳಲು ಮುಖವಿಲ್ಲ. ಅದಕ್ಕಾಗಿಯೇ ಅವರು ಪಾಕಿಸ್ತಾನದ ಹೆಸರನ್ನು ಜಪ ಮಾಡುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಪಾಕಿಸ್ತಾನಕ್ಕೆ ಹೋಗಲೆ ಇಲ್ಲ, ಪಾಕಿಸ್ತಾನಕ್ಕೆ ಹೋಗಿ ಅಲ್ಲಿಯ ಪ್ರಧಾನಿಗೆ ಅಪ್ಪಿಕೊಂಡು ಆತನಿಗೆ ಉಡುಗೊರೆ ಕೊಟ್ಟು ಬಂದ ನರೇಂದ್ರ ಮೋದಿ ಈಗ ಕಾಂಗ್ರೆಸ್‌ಗೆ ಪಾಠ ಹೇಳುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಕೇವಲ 56 ಇಂಚಿನ ಎದೆ ಇದ್ದರೆ ಸಾಲದು ಒಳ್ಳೆಯ ಹೃದಯ ಇರಬೇಕು. ಇಲ್ಲಿಯ ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ಮತ ಹಾಕಿದರೆ ಅದು ಪಾಕಿಸ್ತಾನಕ್ಕೆ ಮತ ಹಾಕಿದಂತೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಪಾಕಿಸ್ತಾನದ ಕೆಲವು ನಾಯಕರು ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ ಒಳ್ಳೆಯದು ಎಂದು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಪಾಕಿಸ್ತಾನಕ್ಕೆ ಯಾರ ಬೆಂಬಲ ಇದೆ ಎನ್ನುವುದು ಅನುಮಾನ ಮೂಡುತ್ತದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಡಾ.ಅಂಜಲಿ ನಿಂಬಾಳ್ಕರ್. ಮಹಾಂತೇಶ ಕೌಜಲಗಿ, ಮಾಜಿ ಶಾಸಕರಾದ ಅಶೋಕ ಪಟ್ಟಣ್, ಫಿರೋಝ್ ಸೇಠ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News