ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಸರ್ವಾಧಿಕಾರಿಯಾಗುತ್ತಾರೆ: ಸಿದ್ದರಾಮಯ್ಯ ವಾಗ್ದಾಳಿ

Update: 2019-04-12 19:00 GMT

ಮೈಸೂರು,ಎ.12: ಕೋಮುವಾದಿ ಪಕ್ಷದ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಸರ್ವಾಧಿಕಾರಿಯಾಗುತ್ತಾರೆ. ಹಿಟ್ಲರ್ ನನ್ನು ನಾಚಿಸುವ ರೀತಿ ನಡೆದುಕೊಂಡು ದೇಶವನ್ನು ಹಾಳುಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್-ಜೆಡಿಎಸ್ ಜಂಟಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಸರ್ವಾಧಿಕಾರಿಯಾಗುತ್ತಾನೆ. ಈತನ ಆಡಳಿತ ಹಿಟ್ಲರನನ್ನು ನಾಚಿಸುವ ರೀತಿ ಇರಲಿದ್ದು, ದೇಶವನ್ನೇ ಹಾಳುಮಾಡುತ್ತಾನೆ. ಹಾಗಾಗಿ ದಲಿತರು, ಹಿಂದುಳಿದವರು, ಬಡವರು, ಮಹಿಳೆಯರು ಎಚ್ಚೆತ್ತುಕೊಂಡು ಕೋಮುವಾದಿ ಬಿಜೆಪಿ ಪಕ್ಷವನ್ನು ತಿರಸ್ಕರಿಸಬೇಕು ಎಂದು ಕರೆ ನೀಡಿದರು.

ಸಂವಿಧಾನ ಉಳಿಯದಿದ್ದರೆ ನಾವ್ಯಾರು ಉಳಿಯಲು ಸಾಧ್ಯವಿಲ್ಲ, ಸಂವಿಧಾನ ಗಟ್ಟಿಯಾಗಿರುವುದರಿಂದಲೇ ಈ ದೇಶದ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಮಹಿಳೆಯರು ಬದುಕುತ್ತಿರುವುದು, ಅದಕ್ಕೆ ಸಂಕಷ್ಟ ಎದುರಾದರೆ ಕೆಳವರ್ಗದ ಯಾರೂ ಉಳಿಯುವುದಿಲ್ಲ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಈ ದೇಶದ ಚೌಕೀದಾರನಲ್ಲ ಭ್ರಷ್ಟಾಚಾರದ ಭಾಗೀದಾರ ಎಂದು ಕಿಡಿಕಾರಿದ ಸಿದ್ದರಾಮಯ್ಯ, ಮೋದಿ ಬಾಯಿ ಬಡಾಯಿ, ಸಾಧನೆ ಮಾತ್ರ ಶೂನ್ಯ. ವಿದೇಶಕ್ಕೆ 84 ಬಾರಿ ಹೋಗಿ ಬಂದು 1690 ಕೋಟಿ ರೂ. ಖರ್ಚು ಮಾಡಿರುವುದೇ ಇವರ ಸಾಧನೆ ಎಂದು ಲೇವಡಿ ಮಾಡಿದರು.

ಸಮ್ಮಿಶ್ರ ಸರ್ಕಾರ ಉರುಳಲಿದೆ ಎಂಬ ಹಗಲು ಕನಸು ಕಾಣುತ್ತಿರುವ ಬಿಜೆಪಿಯವರಿಗೆ ಸಭೆಯ ಮೂಲಕ ಉತ್ತರಿಸಿದ ಅವರು, ಇನ್ನೂ ಐದು ವರ್ಷ ಈ ಸರ್ಕಾರವನ್ನು ಬೀಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ನಮ್ಮ ಶಾಸಕರನ್ನು ಖರೀದಿ ಮಾಡಲು 20-30 ಕೋಟಿ ಹಣ ನೀಡಲು ಮುಂದಾಗಿದ್ದ ಬಿಜೆಪಿಯವರ ಮನೆ ಮೇಲೆ ಯಾವುದೇ ಕಾರಣಕ್ಕೂ ರೈಡ್ ಆಗುವುದಿಲ್ಲ. ಇವರ ಕಣ್ಣಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನವರೆ ಕಾಣುತ್ತಾರೆ ಎಂದು ಹರಿಹಾಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News