ರಫೇಲ್ ಒಪ್ಪಂದದ ಬೆನ್ನಿಗೇ ಅಂಬಾನಿಯ 162.8 ಮಿ.ಡಾ. ತೆರಿಗೆ ಮನ್ನಾಗೊಳಿಸಿದ ಫ್ರೆಂಚ್ ಪ್ರಾಧಿಕಾರಗಳು

Update: 2019-04-13 18:30 GMT

► ರಫೇಲ್ ಮಾತುಕತೆ ನಡುವೆ ರಿಲಯನ್ಸ್‌ನ 1125 ಕೋಟಿ ರೂ. ತೆರಿಗೆ ಮನ್ನಾ ಮಾಡಿದ ಫ್ರಾನ್ಸ್

► ಫ್ರೆಂಚ್ ಪತ್ರಿಕೆ ‘ಲಾ ಮೊಂಡೆ’ ಬಹಿರಂಗ

► ಪ್ರಧಾನಿ ಮೋದಿಯ ಪ್ರಭಾವ ಕಾರಣ?

► ರಫೇಲ್ ಒಪ್ಪಂದ ಘೋಷಣೆಯಾದ

ಹೊಸದಿಲ್ಲಿ,ಎ.14: ಲೋಕಸಭಾ ಚುನಾವಣೆಯ ಹೊತ್ತಲ್ಲೇ ರಫೇಲ್ ಹಗರಣವು ಮತ್ತೊಮ್ಮೆ ಮೋದಿ ಸರಕಾರವನ್ನು ಕಾಡಿದೆ.

ಫ್ರೆಂಚ್ ಕಂಪೆನಿ ಡಸ್ಸಾಲ್ಟ್‌ನಿಂದ 36 ರಫೇಲ್ ಫೈಟರ್ ಜೆಟ್‌ಗಳನ್ನು ಖರೀದಿಸುವ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಕೇವಲ 6 ತಿಂಗಳುಗಳ ಆನಂತರ ಅನಿಲ್ ಅಂಬಾನಿ ಒಡೆತನದ ಫ್ರಾನ್ಸ್ ಮೂಲದ ಟೆಲಿಕಾಂ ಸಂಸ್ಥೆ ‘ರಿಲಾಯನ್ಸ್ ಅಟ್ಲಾಂಟಿಕ್ ಫ್ಲಾಗ್’, ಫ್ರಾನ್ಸ್‌ಗೆ ಪಾವತಿಸಬೇಕಾಗಿದ್ದ 143.7 ದಶಲಕ್ಷ ಯುರೋ ಮೌಲ್ಯದ (ಸುಮಾರು 1125 ಕೋಟಿ ರೂ.) ತೆರಿಗೆಯನ್ನು ಸ್ಥಳೀಯ ಅಧಿಕಾರಿಗಳು ಮನ್ನಾ ಮಾಡಿದ್ದರೆಂದು ಫ್ರೆಂಚ್ ಪತ್ರಿಕೆ ಲೆ ಮೊಂಡೆ ಶನಿವಾರ ಬಹಿರಂಗಪಡಿಸಿದೆ.

ರಫೇಲ್ ಒಪ್ಪಂದದ ಕುರಿತಾದ ವಿವಾದದ ಬೆಂಕಿಗೆ ಈ ವರದಿ ಇನ್ನಷ್ಟು ತುಪ್ಪ ಸುರಿಯುವ ಸಾಧ್ಯತೆಯಿದೆಯೆನ್ನಲಾಗಿದೆ.

ಈ ವರದಿಯ ಪ್ರಕಾರ, ಫ್ರೆಂಚ್ ಅಧಿಕಾರಿಗಳು 2007 ಹಾಗೂ 2012ರ ಮಧ್ಯೆ ದ ಅವಧಿಯಲ್ಲಿ ಬಾಕಿಯಿರುವ ಬಡ್ಡಿ ಹಾಗೂ ದಂಡದ ಮೊತ್ತ ಸೇರಿದಂತೆ 151 ದಶಲಕ್ಷ ಯುರೋ ತೆರಿಗೆಯನ್ನು ಪಾವತಿಸಬೇಕೆಂದು ಅಂಬಾನಿಯ ‘ರಿಲಾಯನ್ಸ್ ಅಟ್ಲಾಂಟಿಕ್ ಫ್ಲಾಗ್’, ಕಂಪೆನಿಗೆ ಆದೇಶಿಸಿದ್ದರು. ಅಂಬಾನಿಯರ ಕಂಪೆನಿಯು 2013ರಲ್ಲಿ 7.6 ದಶಲಕ್ಷ ಯುರೋಗಳನ್ನು ಪಾವತಿಸಿ, ತೆರಿಗೆ ಬಾಕಿಯನ್ನು ಇತ್ಯರ್ಥಪಡಿಸುವ ಕೊಡುಗೆಯನ್ನು ನೀಡಿತ್ತು. ಆದರೆ ಈ ಕೊಡುಗೆಯನ್ನು ಫ್ರೆಂಚ್ ತೆರಿಗೆ ಇಲಾಖೆಯ ಅಧಿಕಾರಿಗಳು ತಿರಸ್ಕರಿಸಿದ್ದರು. ಆದಾಗ್ಯೂ 2015ರ ಅಕ್ಟೋಬರ್ 22ರಂದು ಫ್ರೆಂಚ್ ತೆರಿಗೆ ಅಧಿಕಾರಿಗಳು 2008ರಿಂದ 2014ರವರೆಗಿನ ಅಂಬಾನಿ ಕಂಪೆನಿಯ ತೆರಿಗೆ ಬಾಕಿಯನ್ನು ಚುಕ್ತಾಗೊಳಿಸಲು, 7.30 ದಶಲಕ್ಷ ಯುರೋಗಳನ್ನು ಸ್ವೀಕರಿಸಲು ಒಪ್ಪಿಕೊಂಡಿದ್ದರೆಂದು ‘ಲಾ ಮೊಂಡೆ’ ತಿಳಿಸಿದೆ.

ಕಾಕತಾಳೀಯವಾಗಿ 2015ರ ಎಪ್ರಿಲ್ 10ರಂದು ಪ್ರಧಾನಿ ಮೋದಿಯವರು ಫ್ರಾನ್ಸ್‌ನಿಂದ 36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸುವ ಒಪ್ಪಂದವನ್ನು ಪ್ರಕಟಿಸಿದ್ದರು. ಈ ಒಪ್ಪಂದದ ಭಾರತೀಯ ಉಪಪಾಲುದಾರನಾಗಿ ಅನಿಲ್ ಅಂಬಾನಿಯವರ ರಿಲಾಯನ್ಸ್ ಡಿಫೆನ್ಸ್ ಆಯ್ಕೆಯಾಗಿತ್ತು. ಈ ಒಪ್ಪಂದದನ್ವಯ ರಿಲಾಯನ್ಸ್ ಡಿಫೆನ್ಸ್‌ಗೆ 30 ಸಾವಿರ ಕೋಟಿ ರೂ. ಮೌಲ್ಯದ ಉಪಪಾಲುದಾರಿಕೆ ದೊರೆತಿತ್ತು.

ಆದರೆ ‘ರಿಲಾಯನ್ಸ್ ಅಟ್ಲಾಂಟಿಕ್ ಫ್ಲಾಗ್’ನ ಬಾಕಿ ತೆರಿಗೆಯನ್ನು ಇತ್ಯರ್ಥಗೊಳಿಸಿರುವುದರ ಹಿಂದೆ ಯಾವುದೇ ಪಕ್ಷಪಾತ ನಡೆದಿಲ್ಲವೆಂದು ಅಂಬಾನಿಯವರ ರಿಲಾಯನ್ಸ್ ಗ್ರೂಪ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ಫ್ರಾನ್ಸ್‌ನಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕಂಪೆನಿಗಳಿಗೆ ಲಭ್ಯವಿರುವ ಕಾನೂನು ಚೌಕಟ್ಟಿನಡಿ ಯಲ್ಲಿಯೇ ‘ರಿಲಾಯನ್ಸ್ ಫ್ಲಾಗ್’ ಕಂಪೆನಿಯು ತೆರಿಗೆ ಬಾಕಿಯನ್ನು ಇತ್ಯರ್ಥಪಡಿಸಿರುವುದಾಗಿ ಅದು ಹೇಳಿದೆ.

2015ರ ಎಪ್ರಿಲ್ ಅಂತ್ಯದ ವೇಳೆಗೆ, ಮೋದಿ ರಫೇಲ್ ಒಪ್ಪಂದವನ್ನು ಘೋಷಿಸಿದ ಕೆಲವೇ ದಿನಗಳ ಬಳಿಕ ಅನಿಲ್ ಅಂಬಾನಿಯವರ ರಿಲಾಯನ್ಸ್ ಏರೋಸ್ಟ್ರಕ್ಚರ್ಸ್‌ ಲಿಮಿಟೆಡ್ ಡಸ್ಸಾಲ್ಟ್ ಜೊತೆ ಜಂಟಿ ಉದ್ಯಮವನ್ನು ನಡೆಸುವ ಒಪ್ಪಂದವನ್ನು ಘೋಷಿಸಿತು. ಈ ಒಡಂಬಡಿಕೆಯ ಅನ್ವಯ 2016ರಲ್ಲಿ ನಾಗಪುರದಲ್ಲಿ ಡಸ್ಸಾಲ್ಟ್ ರಿಲಯನ್ಸ್ ಏವಿಯೇಶನ್ ಲಿಮಿಟೆಡ್‌ನ ಘಟಕವು ಉದ್ಘಾಟನೆಗೊಂಡಿತು. ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿ ದಿಲ್ಲಿಯಲ್ಲಿ 2016ರ ಜನವರಿ 25ರಂದು ಭಾರತ ಹಾಗೂ ಫ್ರೆಂಚ್ ರಕ್ಷಣಾ ಸಚಿವರು, ದಿಲ್ಲಿಯಲ್ಲಿ ತಿಳುವಳಿಕಾ (ಎಂಓಯು) ಸಹಿಹಾಕಿದ್ದರು. 2016ರ ಸೆಪ್ಟೆಂಬರ್ 23ರಂದು ಉಭಯ ದೇಶಗಳ ನಡುವೆ ಈ ಒಡಂಬಡಿಕೆಗೆ ಸಹಿಹಾಕಲಾಯಿತು.

ಈ ಪ್ರಕರಣದ ವಿವರಗಳನ್ನು ನೀಡಿರುವ ರಿಲಯನ್ಸ್ ಡಸ್ಸಾಲ್ಟ್ ಕಂಪೆನಿಯು 2015ರ ಆರಂಭದಲ್ಲಿ, ಫ್ರೆಂಚ್ ಲೆಕ್ಕಪತ್ರ ಪರಿಶೋಧನಾ ಸಂಸ್ಥೆಯಾದ ಎಇಜಿ ಫ್ರಾನ್ಸ್, ರಿಲಯನ್ಸ್ ಫ್ಲಾಗ್ ಅಟ್ಲಾಂಟಿಕ್ ಫ್ರಾನ್ಸ್‌ನ ಲೆಕ್ಕಪತ್ರಗಳನ್ನು ಪ್ರಮಾಣೀಕರಿಸಲು ನಿರಾಕರಿಸಿತ್ತು. ಕಂಪೆನಿಯ ಲೆಕ್ಕಪತ್ರವು ನಿಖರ ಹಾಗೂ ನೇರವಾಗಿತ್ತೆಂದು ಹೇಳಲು ಸಾಧ್ಯವಿಲದ ಕಾರಣ ತಾನು ಅದಕ್ಕೆ ಪ್ರಮಾಣಪತ್ರ ನೀಡಲು ಸಾಧ್ಯವ್ಲಿವೆಂದು ಎಇಜಿ ಫ್ರಾನ್ ತಿಳಿಸಿದ್ದಾಗಿ ‘ಲಾ ಮೊಂಡೆ’ ವರದಿಯಲ್ಲಿ ಗಮನಸೆಳೆದಿದೆ.

ರಫೇಲ್ ಒಪ್ಪಂದವು ಘೋಷಣೆಯಾಗುವ ಎರಡು ವಾರಗಳ ಮೊದಲು ಅನಿಲ್ ಅಂಬಾನಿ, ಆಗಿನ ಫ್ರೆಂಚ್ ರಕ್ಷಣಾ ಸಚಿವರ ಸಲಹೆಗಾರರನ್ನು ಭೇಟಿಯಾಗಿದ್ದರೆಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿತ್ತು. ರಫೇಲ್ ಜೆಟ್‌ಗಳನ್ನು ಉತ್ಪಾದಿಸುವ ಫ್ರೆಂಚ್ ಕಂಪೆನಿಯಾದ ಡಸ್ಸಾಲ್ಟ್ ಅವಿಯೇಶನ್ ಮಾತ್ರ ರಿಲಾಯನ್ಸ್ ಡಿಫೆನ್ಸ್ ಸಂಸ್ಥೆಯನ್ನು ಅದರ ಸ್ವಂತ ಅರ್ಹತೆಯಿಂದಾಗಿಯೇ ತನ್ನ ಭಾರತೀಯ ಪಾಲುದಾರನ್ನಾಗಿ ಮಾಡಿದ್ದಾಗಿ ಹೇಳಿಕೊಳ್ಳುತ್ತಾ ಬಂದಿದೆ.

ಕಾನೂನು ಪ್ರಕಾರವೇ ತೆರಿಗೆ ಬಾಕಿ ಸಂದಾಯ: ರಿಲಯನ್ಸ್

 ‘ಲೆ ಮೊಂಡೆ’ ಪತ್ರಿಕೆಯ ವರದಿಗೆ ಪ್ರತಿಕ್ರಿಯಿಸಿರುವ ರಿಲಯನ್ಸ್ ಕಂಪೆನಿಯು, 2008-2012ರ ಸಾಲಿನಲ್ಲಿ ಅಂದರೆ ಸುಮಾರು 10 ವರ್ಷಗಳ ಹಿಂದೆ, ರಿಲಯನ್ಸ್ ಫ್ಲಾಗ್ ಫ್ರಾನ್ಸ್ ಕಂಪೆನಿಯು ಸುಮಾರು 20 ಕೋಟಿ ರೂ. (2.7 ದಶಲಕ್ಷ ಮಿಲಿಯ ಯುರೋ) ನಷ್ಟದಲ್ಲಿ ನಡೆಯುತ್ತಿತ್ತು. ಅದೇ ಅವಧಿಯಲ್ಲಿ ಫ್ರೆಂಚ್ ಅಧಿಕಾರಿಗಳು 1100 ಕೋಟಿ ರೂ. ತೆರಿಗೆ ಪಾವತಿಗೆ ಆದೇಶಿಸಿದ್ದರು. ಕಾನೂನು ಪ್ರಕಾರವಾಗಿಯೇ ಫ್ರೆಂಚ್ ಕಾನೂನಿನಂತೆ, ತೆರಿಗೆ ಬಾಕಿ ಇತ್ಯರ್ಥಗೊಳಿಸಲು ಅಂತಿಮವಾಗಿ 56 ಕೋಟಿ ರೂ.ಗಳನ್ನು ಪಾವತಿಸುವ ಒಪ್ಪಂದಕ್ಕೆ ಬರಲಾಯಿತು’’ ಎಂದು ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News