ಪ.ಬಂಗಾಳದಲ್ಲಿ ರಾಮನವಮಿ ರ‍್ಯಾಲಿಗಳಿಗೆ ಮಮತಾ ಟೀಕೆ

Update: 2019-04-13 15:33 GMT

ಕೋಲ್ಕತಾ,ಎ.13: ಪ.ಬಂಗಾಳದ ವಿವಿಧೆಡೆಗಳಲ್ಲಿ ಶನಿವಾರ ಬಿಜೆಪಿ ಮತ್ತು ವಿಹಿಂಪ ಕೆಲವು ಶಸ್ತ್ರಸಜ್ಜಿತ ರ‍್ಯಾಲಿಗಳು ಸೇರಿದಂತೆ ನೂರಾರು ರಾಮನವಮಿ ರ್ಯಾಲಿಗಳನ್ನು ನಡೆಸಿದ್ದು,ಇದನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಟುವಾಗಿ ಟೀಕಿಸಿದ್ದಾರೆ.

ಪಶ್ಚಿಮ ಮಿಡಾಪುರದ ಖರಗಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ನೇತೃತ್ವದಲ್ಲಿ ನಡೆದ ರ್ಯಾಲಿಗಳಲ್ಲಿ ಖಡ್ಗಗಳು ಮತ್ತು ದಂಡಗಳನ್ನು ಬಳಸಲಾಗಿತ್ತು. ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಘೋಷ್,ರಾಮನವಮಿ ರ್ಯಾಲಿಗಳು ನಮ್ಮ ಸಂಪ್ರದಾಯದ ಭಾಗವಾಗಿವೆ. ಆತ್ಮರಕ್ಷಣೆಗಾಗಿ ನಾವು ಶಸ್ತ್ರಗಳನ್ನು ಹಿಡಿದಿದ್ದೇವೆ. ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಸಶಸ್ತ್ರ ರ್ಯಾಲಿಗಳು ಟಿಎಂಸಿಗೆ ಸಮಸ್ಯೆಯಾಗಿದ್ದರೆ ಅವರು ತಮ್ಮ ಚಿಂತನಾ ಕ್ರಮವನ್ನು ಬದಲಿಸಿಕೊಳ್ಳಬೇಕು ಎಂದು ಹೇಳಿದರು.

ಅತ್ತ ಸಿಲಿಗುರಿಯಲ್ಲಿ ಬಹಿರಂಗ ಸಭೆಯೊಂದರಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ರ್ಯಾಲಿಗಳನ್ನು ಹೊರಡಿಸಿದ್ದಕ್ಕಾಗಿ ಬಿಜೆಪಿಯನ್ನು ಟೀಕಿಸಿದರಲ್ಲದೆ,ಅವರು ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂದರು. ಬಿಜೆಪಿಯು ಜನರನ್ನು ದಾರಿ ತಪ್ಪಿಸಲು ಧರ್ಮವನ್ನು ಸಾಧನವನ್ನಾಗಿ ಬಳಸುತ್ತಿದೆ ಎಂದೂ ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News